ಬೆಂಗಳೂರು: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 83 ವರ್ಷದ ವೃದ್ಧೆಯೊಬ್ಬರಿಗೆ ಕರೆ ಮಾಡಿದ ಸೈಬರ್ ಕಳ್ಳರು ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ ಬರೋಬ್ಬರಿ 1.24 ಕೋಟಿ ರೂ. ವಂಚಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರಿಗೆ ಖಾಕಿ ಬಲೆ ಬೀಸಿದೆ.
ಮಲ್ಲೇಶ್ವರದ ನಿವಾಸಿ ವಸಂತ ಕೋಕಿಲಮ್ (83) ವಂಚನೆಗೊಳಗಾದವರು.
ಅ.15ರಂದು ಬೆಳಗ್ಗೆ 10.30ರ ಸುಮಾರಿಗೆ ವೃದ್ದೆ ವಸಂತ ಕೋಕೊಲಮ್ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮುಂಬೈ ಪೊಲೀಸ್ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು. ನಿಮ್ಮ ಹೆಸರಿನಲ್ಲಿ ಮತ್ತೊಂದು ಫೋನ್ ನಂಬರ್ ಇದ್ದು, ಆ ನಂಬರ್ ಕಾನೂನು ಬಾಹಿರ ಚಟುವಟಿಕೆಗಳಿಗೆ ಮತ್ತು ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗುತ್ತಿದೆ ಎಂದು ನಂಬಿಸಿದ್ದರು. ಇದನ್ನು ಕೇಳಿ ಭಯಭೀತರಾದ ವೃದ್ಧೆ ಏನು ಮಾಡಬೇಕೆಂದು ತೋಚದೇ ತಮಗೇನು ಗೊತ್ತಿಲ್ಲ ಎಂದು ಹೇಳಿದ್ದರು. ಇಷ್ಟಕ್ಕೆ ಸುಮ್ಮನಾಗದ ಸೈಬರ್ ವಂಚಕರು, ನಮ್ಮ ಹಿರಿಯ ಅಧಿಕಾರಿಗಳು ಫೋನ್ ಮಾಡುತ್ತಾರೆಂದು ತಿಳಿಸಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಅಪರಿಚಿತರು ವೃದ್ಧೆ ವಸಂತ ಅವರಿಗೆ ವಾಟ್ಸ್ಆ್ಯಪ್ ಕರೆ ಮಾಡಿ ಸಿಬಿಐ ಅಧಿಕಾರಿಗಳೆಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು.
1.24 ಕೋಟಿ ರೂ. ವಂಚನೆ: ನೀವು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಭಾಗಿಯಾಗಿದ್ದೀರಾ, ನಿಮ್ಮ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ವಸಂತ ಅವರ ಬ್ಯಾಂಕ್ ಖಾತೆ ನಂಬರ್ ಮತ್ತು ಇತರೆ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಅವುಗಳನ್ನು ನಂತರ ಪರಿಶೀಲಿಸಿ ತಿಳಿಸುತ್ತೇವೆಂದು ಹೇಳಿ ನಂಬಿಸಿದ್ದರು. ಇದರಿಂದ ಮತ್ತಷ್ಟು ದಂಗಾದ ವೃದ್ಧೆ ಅಪರಿಚಿತ ಸೈಬರ್ ಕಳ್ಳರ ಸೂಚನೆಯಂತೆ ಅವರು ನೀಡಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಅ.23 ರಿಂದ 31ರ ವರೆಗೆ ಒಟ್ಟು 1.24 ಕೋಟಿ ರೂ.ಗಳನ್ನು ಆರ್.ಟಿ.ಜಿ.ಎಸ್. ಮೂಲಕ ವರ್ಗಾವಣೆ ಮಾಡಿದ್ದರು. ಇದಾದ ಬಳಿಕ ಎರಡು ತಿಂಗಳುಗಳಾದರೂ ಮತ್ತೆ ತಮ್ಮನ್ನು ಯಾರೂ ಸಂಪರ್ಕಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ವಸಂತ ಅವರು ಆರೋಪಿಗಳು ತಮ್ಮ ವಿರುದ್ಧ ಆರೋಪಿಸಿರುವ ಕುರಿತು ಪರಿಶೀಲಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಕೂಡಲೇ ಸೈಬರ್ ಕ್ರೈಂ ಠಾಣೆಗೆ ಧಾವಿಸಿದ ವೃದ್ಧೆ ತಮಗಾದ ವಂಚನೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೈಬರ್ ಕಳ್ಳರಿಗೆ ಶೋಧ ಮುಂದುವರಿಸಿದ್ದಾರೆ.