ಹೈದರಾಬಾದ್: ರಾಮ ಮಂದಿರಕ್ಕೆ ದೇಶ-ವಿದೇಶಗಳಿಂದ ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿರುವ ನಡುವೆಯೇ ಹೈದರಾಬಾದ್ ಮೂಲದ ಭಕ್ತರಾದ ಚಾರ್ಲಾ ಶ್ರೀನಿವಾಸ ಶಾಸ್ತ್ರೀ ಎಂಬವರು 1.2 ಕೋಟಿ ಮೌಲ್ಯದ ಪಾದುಕೆಯನ್ನು ಅಯೋಧ್ಯೆಗೆ ತಲುಪಿಸಲು 1,300 ಕಿ.ಮೀ. ದೂರ ದಿಂದ ಅಯೋಧ್ಯೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.
ಖುದ್ದು ಸಿಎಂ ಯೋಗಿ ಆದಿತ್ಯನಾಥ ಅವರಿಗೇ ಪಾದುಕೆಗಳನ್ನು ತಲುಪಿಸಲು ಶಾಸ್ತ್ರೀ ನಿರ್ಧರಿಸಿದ್ದು, ಪ್ರತೀ ದಿನ 38 ಕಿ.ಮೀ.ಗಳ ವರೆಗೆ ಪಾದುಕೆಯನ್ನು ತಲೆಯ ಮೇಲೆಯೇ ಹೊತ್ತು ಸಾಗುತ್ತಿದ್ದಾರೆ.
2023ರ ಅ. 28ರಂದು ಅವರು ತಮ್ಮ ಪ್ರಯಾಣ ಆರಂಭಿಸಿದ್ದು, ಜ.13ರ ವೇಳೆಗೆ ಅಯೋಧ್ಯೆ ತಲುಪುವ ನಿರೀಕ್ಷೆ ಇದೆ. ಮೊದಲಿಗೆ ಬೆಳ್ಳಿಯಿಂದ ಪಾದುಕೆ ತಯಾರಿಸಲಾಗಿತ್ತು. ಮಾರ್ಗಮಧ್ಯೆ ಅವುಗಳಿಗೆ ಚಿನ್ನದ ಲೇಪ ಮಾಡುವ ಬಯಕೆಯಿಂದ ಮತ್ತೆ ಹೈದರಾಬಾದ್‌ಗೆ ಹಿಂದಿರುಗಿಸಿ ಅವುಗಳ ಚಿನ್ನ ಲೇಪನಗೊಂಡು ಬಂದ ಬಳಿಕ ಮತ್ತೆ ಪ್ರಯಾಣ ಆರಂಭಿಸಿದ್ದಾರೆ. ಒಂದೊಂದು ಪಾದುಕೆ 12.5 ಕೆ.ಜಿ. ತೂಕವಿದೆ.
ಕೈದಿಗಳಿಗೂ ರಾಮನ ವೈಭವ ಕಣ್ತುಂಬಿಕೊಳ್ಳುವ ಅವಕಾಶ :
ಲಕ್ನೋ: ಉತ್ತರ ಪ್ರದೇಶದ ಹಲವು ಜೈಲುಗಳಲ್ಲಿ ಬಂಧಿತರಾಗಿರುವ ಕೈದಿಗಳಿಗೂ ದೇಶದ ಐತಿಹಾಸಿಕ ಸಮಾರಂಭವನ್ನು ಕಣ್ತುಂಬಿಕೊಳ್ಳುವ ಅವಕಾಶ ವನ್ನು ರಾಜ್ಯ ಸರಕಾರ ಕಲ್ಪಿಸುತ್ತಿದೆ. ಇದಕ್ಕಾಗಿ ಜೈಲುಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಿ ಪ್ರಾಣ ಪ್ರತಿಷ್ಠೆ ಸಮಾರಂಭವನ್ನು ನೇರಪ್ರಸಾರ ಮಾಡಲು ಆದೇಶಿಸಲಾಗಿದೆ. ದೇಶದ ಯಾವ ರಾಮಭಕ್ತನೂ ಈ ವೈಭವ ಕಣ್ತುಂಬಿಕೊಳ್ಳು ವುದರಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸರಕಾರ ಈ ಆದೇಶ ಹೊರಡಿಸಿದೆ. ಜತೆಗೆ ಕೈದಿಗಳಿಗೆ ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡಗಳನ್ನೂ ವಿತರಿಸಲಾಗುವುದು.
ಮಧ್ಯಪ್ರದೇಶದಿಂದ ಹದಿನಾಲ್ಕು ದಿನಗಳಲ್ಲಿ ಓಡೋಡುತ್ತಾ ಅಯೋಧ್ಯೆಗೆ : ಯುವಕನ ಪಣ:
14 ವರ್ಷಗಳ ವನವಾಸದಿಂದ ರಾಮ ಅಯೋಧ್ಯೆಗೆ ಹಿಂದಿರುಗಿದಂತೆಯೇ ಮಧ್ಯ ಪ್ರದೇಶದಿಂದ 1,008 ಕಿ.ಮೀ. ದೂರವಿರುವ ಅಯೋಧ್ಯೆಗೆ 14 ದಿನಗಳಲ್ಲಿ ಓಡುತ್ತಾ ತಲುಪಲು 22 ವರ್ಷದ ಯುವಕ ಪಣತೊಟ್ಟಿದ್ದಾರೆ. ಇಂದೋರ್‌ನ ನಿವಾಸಿ ಕಾರ್ತಿಕ್ ಜೋಶಿ ಎಂಬ ಯುವ ಮ್ಯಾರಥಾನ್ ಓಟಗಾರ ಶುಕ್ರವಾರ ಈ ಪಯಣ ಆರಂಭಿಸಿದ್ದು, ಜೈ ಶ್ರೀರಾಮ್ ಎಂಬ ಘೋಷಣೆಗಳ ಮೂಲಕ ಜೋಶಿ ಅವರನ್ನು ಜನರು ಬೀಳ್ಕೊಟ್ಟಿದ್ದಾರೆ.