ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಒಬ್ಬರು ವಿಧಾನಸೌಧದ ಒಳಗೆ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ 10 ಲಕ್ಷ ರೂ. ನಗದನ್ನು ವಿಧಾನಸೌಧ ಭದ್ರತ ದಳ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಮಂಡ್ಯ ಜಿಲ್ಲೆಯ ಜಗದೀಶ್ ಎಂಬವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಸಂಜೆ 6 ಗಂಟೆಗೆ ಜಗದೀಶ್ ವಿಧಾನಸೌಧದ ಪಶ್ಚಿಮ ಗೇಟ್ ಮೂಲಕ ಒಳ ಪ್ರವೇಶಿಸಲು ಮುಂದಾಗಿದ್ದಾರೆ.
ಆಗ ಭದ್ರತ ಸಿಬಂದಿ ತಾವು ಯಾರು, ಎಲ್ಲಿಂದ ಬಂದಿದ್ದೀರಿ ಎಲ್ಲಿಗೆ ಹೋಗುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ. ಆಗ ತಾನೊಬ್ಬ ಸರಕಾರಿ ಅಧಿಕಾರಿ. ಮಂಡ್ಯದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಎಂದಾಗ ಭದ್ರತ ಸಿಬಂದಿ ಗುರುತಿನ ಚೀಟಿ ತೋರಿಸಲು ಹೇಳಿದ್ದಾರೆ. ಬ್ಯಾಗ್ ತೆರೆದಾಗ ಹಣದ ಕಂತೆಗಳು ಇರುವುದನ್ನು ಸಿಬಂದಿ ಗಮನಿಸಿದ್ದಾರೆ. ಬ್ಯಾಗ್‌ನಲ್ಲಿ 10 ಲಕ್ಷ ರೂ. ನಗದು ಪತ್ತೆಯಾಗಿದೆ. ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಿಬಂದಿ ಕೂಡಲೇ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು.
ಆರೋಪಿ ಜಗದೀಶ್ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಿದಾಗ ಹಣದ ಮೂಲದ ಬಗ್ಗೆ ದಾಖಲೆ ನೀಡಲು ಕಾಲಾವಕಾಶ ಕೋರಿದರು. ಅಲ್ಲದೆ ಹಿರಿಯ ಅಧಿಕಾರಿಗಳ ಭೇಟಿಗಾಗಿ ಬಂದಿದ್ದೇನೆ, ಕೆಲವು ಬಿಲ್‌ಗಳನ್ನು ಕ್ಲಿಯರ್ ಮಾಡಿಕೊಳ್ಳಲು ಹಣ ತಂದಿದ್ದೇನೆ ಎಂದಿದ್ದರು. ಆದರೆ ಯಾವುದೇ ಬಿಲ್‌ಗಳು ಪತ್ತೆಯಾಗಿಲ್ಲ. ಜತೆಗೆ ಹಣ ಎಲ್ಲಿಂದ ತರಲಾಗಿತ್ತು, ಯಾರಿಗೆ ಕೊಡಲು ಹೋಗುತ್ತಿದ್ದರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ನೋಟಿಸ್ ಕೊಟ್ಟು ಗುರುವಾರ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು.
ಗುರುವಾರ ಸಂಜೆ ವಿಚಾರಣೆಗೆ ಹಾಜರಾಗಿದ್ದ ಜಗದೀಶ್, ವಿಧಾನಸೌಧದಲ್ಲಿರುವ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬರಿಗೆ ಸೇರಿದ ಹಣ ಇದಾಗಿದ್ದು, ಅದನ್ನು ಕೊಟ್ಟು ತನ್ನ ಬಳಿ ಇಟ್ಟುಕೊಳ್ಳಲು ಹೇಳಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆ ಎಕ್ಸಿಕ್ಯೂಟಿವ್ ಎಂಜಿನಿಯರ್ ಯಾರೆಂಬುದು ಗೊತ್ತಿಲ್ಲ. ಮತ್ತೊಂದೆಡೆ ಪ್ರಾಥಮಿಕ ವಿಚಾರಣೆಯಲ್ಲಿ ಜಗದೀಶ್ ತಮ್ಮನ್ನು ಬೇರೆಡೆ ವರ್ಗಾವಣೆ ಮಾಡಿಸಿಕೊಳ್ಳಲು ಲಂಚ ಕೊಡಲು ಹಣ ತಂದಿದ್ದರು ಎಂದು ಹೇಳಲಾಗಿದೆ.