ನವದೆಹಲಿ:ಕಳೆದ ಎರಡು ವರ್ಷಗಳಲ್ಲಿ 2000 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯ ಸೋಮವಾರ(ಮಾರ್ಚ್ 15) ಲೋಕಸಭೆಗೆ ತಿಳಿಸಿದೆ.
ನೋಟು ಅಮಾನ್ಯೀಕರಣದ ನಂತರ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದ ನಂತರ ಇದೀಗ 2000 ಮುಖಬೆಲೆಯ ನೋಟುಗಳು ವಿರಳವಾಗಿರುವುದು ಯಾಕೆ ಎಂಬ ಪ್ರಶ್ನೆಗೆ ಹಣಕಾಸು ಸಚಿವಾಲಯ ಈ ಉತ್ತರ ನೀಡಿದೆ.
2019-20 ಹಾಗೂ 2020-21ನೇ ಸಾಲಿನಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಪ್ರಿಂಟಿಂಗ್ ಪ್ರೆಸ್ ಗೆ ಕಳುಹಿಸಲಾಗಿಲ್ಲ ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಲೋಕಸಭೆಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳು ಜನರಿಗೆ ವಿರಳವಾಗಿ ಲಭ್ಯವಾಗುತ್ತಿದೆ. ಅಷ್ಟೇ ಅಲ್ಲ ಬ್ಯಾಂಕ್ ಮತ್ತು ಎಟಿಎಂಗಳಲ್ಲಿಯೂ ಕಡಿಮೆ ಪ್ರಮಾಣದಲ್ಲಿದೆ ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಎಂಡಿಎಂಕೆ ಸಂಸದ ಎ.ಗಣೇಶಮೂರ್ತಿ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು.
ಸಾರ್ವಜನಿಕರ ವಹಿವಾಟಿನ ಬೇಡಿಕೆಗೆ ಅನುಗುಣವಾಗಿ ನೋಟುಗಳ ಮುದ್ರಣದ ಬಗ್ಗೆ ಆರ್ ಬಿಐ ಜತೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರ ನೋಟುಗಳ ಮುದ್ರಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅನುರಾಗ್ ಠಾಕೂರ್ ಉತ್ತರ ನೀಡಿದ್ದಾರೆ.
2000 ರೂ. ಮುಖಬೆಲೆಯ ನೋಟು ಚಲಾವಣೆಗೆ ಅನುಕೂಲಕರವಾಗಿದೆಯೇ ಎಂಬ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ 2000 ರೂ. ಮುಖಬೆಲೆಯ ನೋಟುಗಳ ಚಲಾವಣೆಯಲ್ಲಿ ಭಾರಿ ಇಳಿಕೆ ಕಂಡು ಬಂದಿರುವುದಾಗಿ ಠಾಕೂರ್ ವಿವರಿಸಿದ್ದಾರೆ.
ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕಳೆದ ವರ್ಷದ ಒಟ್ಟು ಚಲಾವಣೆಯಲ್ಲಿ 2000 ರೂಪಾಯಿ ನೋಟು ಕೇವಲ ಶೇ.35ರಷ್ಟು ಮಾತ್ರ ಚಲಾವಣೆಗೊಂಡಿರುವುದಾಗಿ ತಿಳಿಸಿದ್ದಾರೆ.