Advertisement

ಹಳೇ ಪುಸ್ತಕ ಎಸೆಯದಿರಿ, ಬಡ ಮಕ್ಕಳಿಗೆ ನೀಡಿ

10:07 PM Apr 21, 2019 | Lakshmi GovindaRaju |

ಮೈಸೂರು: ನೀವು ಓದಿದ ಪಠ್ಯಪುಸ್ತಕಗಳನ್ನು ದಯವಿಟ್ಟು ಎಸೆಯದಿರಿ, ಅಗತ್ಯವಿರುವ ಮಕ್ಕಳಿಗೆ ನೀಡಿ ಪುಸ್ತಕ ದಾನಿಗಳಾಗಿ. ಪಿಯುಸಿ, ಪದವಿ ಹಾಗೂ ಎಂಜಿನಿಯರಿಂಗ್‌ ಸೇರಿದಂತೆ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕಗಳನ್ನು ಎಸೆಯದೇ, ಭಾರತೀಯ ಜೈನ್‌ ಸಂಘಟನೆಗೆ ನೀಡುವ ಮೂಲಕ ಪುಸ್ತಕ ಕೊಳ್ಳಲು ಸಾಧ್ಯವಿರದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿ.

Advertisement

ಹೌದು, ಪ್ರತಿವರ್ಷ ಲಕ್ಷಾಂತರ ಮಕ್ಕಳು ಒಂದು ತರಗತಿಯಿಂದ ಮತ್ತೂಂದು ತರಗತಿಗೆ ತೇರ್ಗಡೆಯಾಗುತ್ತಾರೆ. ಅವರು ಓದಿದ ಪಠ್ಯಪುಸ್ತಕಗಳನ್ನು ಮನೆಯಲ್ಲಿ ಇಡುವುದು ಅಥವಾ ತೂಕಕ್ಕೆ ಹಾಕುವ ಹಾಗೂ ಒಲೆಗೆ ಹಾಕುವ ಪ್ರವೃತ್ತಿಯೇ ಹೆಚ್ಚು. ಇದರಿಂದ ಪಠ್ಯಪುಸ್ತಕಗಳ ಮರು ಮುದ್ರಣ ಹೆಚ್ಚುತ್ತದೆ.

ಜೊತೆಗೆ ನಮ್ಮ ನಡುವೆಯೇ ಎಷ್ಟೋ ಮಕ್ಕಳು ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಇದೆ. ನಾವು ಓದಿದ ಪುಸ್ತಕಗಳನ್ನು ಎಸೆಯವ ಮೂಲಕ ಪೋಲು ಮಾಡಿದರೆ, ಪುಸ್ತಕಗಳ ಮರು ಮುದ್ರಣ ಹೆಚ್ಚುತ್ತಲೇ ಇರುತ್ತದೆ, ಜತೆಗೆ ಪುಸ್ತಕಗಳ ಮುದ್ರಣಕ್ಕೆ ಮರಗಳ ಹನನವೂ ನಡೆಯುತ್ತಲೇ ಇರುತ್ತದೆ.

“ನಿಮ್ಮಿಂದ ವಿದ್ಯಾದಾನ’: ಇದನ್ನು ಗಮನದಲ್ಲಿಟ್ಟುಕೊಂಡು ಕಳೆದೆರೆಡು ವರ್ಷಗಳಿಂದ ಭಾರತೀಯ ಜೈನ್‌ ಸಂಘಟನೆ ವಿನೂತನ ಕಾರ್ಯ ಮಾಡುತ್ತಿದೆ. ಪ್ರತಿ ಮನೆಯಲ್ಲೂ ಮಕ್ಕಳ ಓದು ಮುಗಿದ ಮೇಲೆ ಆ ಪುಸ್ತಕಗಳನ್ನು ಎಸೆಯಲಾಗುತ್ತದೆ, ಇಲ್ಲವೇ ತೂಕಕ್ಕೆ ಹಾಕಲಾಗುತ್ತದೆ.

ಇದರಿಂದ ಪುಸ್ತಕಗಳು ಪುನರ್‌ ಬಳಕೆಯಾಗುವುದಿಲ್ಲ. ಜತೆಗೆ ಪ್ರತಿವರ್ಷವು ಪುಸ್ತಕ ಮುದ್ರಣ ಮಾಡಲು ಸಾಕಷ್ಟು ಮರಗಳನ್ನು ಕಡಿಯಬೇಕಾಗುತ್ತದೆ. ಇದನ್ನ ಮನಗಂಡ ಸಂಘಟನೆ ಕಳೆದ ಎರಡು ವರ್ಷದಿಂದ ವಿದ್ಯಾಭ್ಯಾಸ ಪೂರೈಸಿರುವ ಮಕ್ಕಳಿಂದ ಪುಸ್ತಕಗಳನ್ನು ಪಡೆದು, ಪುಸ್ತಕ ಕೊಳ್ಳಲು ಶಕ್ತಿ ಇಲ್ಲದವರಿಗೆ ನೀಡುತ್ತಿದೆ. ಇದಕ್ಕಾಗಿ “ನಿಮ್ಮಿಂದ ವಿದ್ಯಾದಾನ’ ಅಭಿಯಾನ ನಡೆಸುತ್ತಿದೆ.

Advertisement

ಅದೇ ರೀತಿ ಈ ಸಾಲಿನಲ್ಲೂ ಅಭಿಯಾನ ಹಮ್ಮಿಕೊಂಡಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಮಕ್ಕಳಿಂದ ಪಠ್ಯಪುಸ್ತಕಗಳನ್ನು ಆಹ್ವಾನಿಸಿದೆ. ಮುಂದಿನ ಪದವಿ, ಸ್ನಾತಕ ಹಾಗೂ ಎಂಜಿನಿಯರ್‌ ಪದವಿ ಪರೀಕ್ಷೆ ಮುಗಿದ ನಂತರ ಅವರಿಂದ ಪುಸ್ತಕ ಸಂಗ್ರಹಿಸಲಾಗುತ್ತದೆ. ಸದ್ಯ ಪಿಯುಸಿ ಫ‌ಲಿತಾಂಶ ಹೊರಬಂದಿರುವುದರಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪುಸ್ತಕ ಸಂಗ್ರಹಿಸಲು ಏ.21ರಿಂದ ಅಭಿಯಾನ ಆರಂಭಿಸಿದ್ದು, ಆಸಕ್ತರು ಪುಸ್ತಕ ನೀಡಬಹುದಾಗಿದೆ.

ಪುಸ್ತಕ ವಿತರಣೆ ಹೇಗೆ?: ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಆಯಾಯಾ ಕಾಲೇಜಿಗೆ ಭೇಟಿ ನೀಡಿ ಬಡವರು, ನಿರ್ಗತಿಕರು ಹಾಗೂ ಪುಸ್ತಕ ಖರೀದಿ ಮಾಡಲು ಹಣವಿಲ್ಲದವರನ್ನು ಗುರುತಿಸಿ ಆಹ್ವಾನಿಸಲಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳಿಗೆ ಹತ್ತಿರವಾಗುವ ಕಡೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಬಿರ ನಡೆಸುತ್ತೇವೆ. ಅಲ್ಲಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ತಮ್ಮ ಪಠ್ಯಕ್ರಮಕ್ಕೆ ಅವಶ್ಯವಿರುವ ಪುಸ್ತಕಗಳನ್ನು ಆರಿಸಿಕೊಳ್ಳಬಹುದು.

ಅವರು ಗುರುತಿನ ಚೀಟಿ ಹಾಗೂ ಅಂಕಪಟ್ಟಿಯ ನಕಲು ಪ್ರತಿ ನೀಡಿ ಪುಸ್ತಕ ಪಡೆಯಬಹುದು. ಅವರು ತಮ್ಮ ಶೈಕ್ಷಣಿಕ ವರ್ಷ ಮುಗಿದ ನಂತರ ವಾಪಸ್‌ ಮಾಡುತ್ತಾರೆ. ಕಳೆದ ವರ್ಷ ಪುಸ್ತಕ ಪಡೆದವರು ಪುಸ್ತಕ ಹಿಂದಿರುಗಿಸಿ ತಮ್ಮ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕ ಪಡೆಯುತ್ತಾರೆ. ಇದೇ ರೀತಿ ಐದು ವರ್ಷಗಳ ಕಾಲ ಅಥವಾ ಪಠ್ಯಕ್ರಮ ಬದಲಾವಣೆಯಾಗುವವರೆಗೆ ಪುಸ್ತಕಗಳನ್ನು ನೀಡಲಾಗುತ್ತದೆ.

ಮೊದಲ ವರ್ಷ 35 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದರು. ಎರಡನೇ ವರ್ಷದ ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹವಾಗಿದ್ದು, 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದರು. ಈ ಸಾಲಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಈ ಕಾರ್ಯದಿಂದ ಬಡವರು ಮತ್ತು ಅಸಹಾಯಕರಿಗೂ ಪುಸ್ತಕ ತಲುಪುತ್ತದೆ. ಜೊತೆಗೆ ಮರ ಕಡಿಯುವುದು ತಪ್ಪುತ್ತದೆ. ಇದರಿಂದ ಪರಿಸರವೂ ಉಳಿಯಲಿದೆ ಎಂದು ಭಾರತೀಯ ಜೈನ್‌ ಸಂಘಟನೆಯ ಮೈಸೂರು ಚಾಪ್ಟರ್‌ನ ಜೈನ್‌ ಪ್ರಕಾಶ್‌ ಗುಲೇಚ ತಿಳಿಸಿದ್ದಾರೆ.

ಪುಸ್ತಕ ಸಂಗ್ರಹ ಎಂದು, ಎಲ್ಲೆಲ್ಲಿ?: ಪ್ರಸ್ತುತ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಫ‌ಲಿತಾಂಶ ಹೊರ ಬಂದಿದೆ. ವಿದ್ಯಾರ್ಥಿಗಳು ಭಾರತೀಯ ಜೈನ್‌ ಸಂಘಟನೆಗೆ ಪುಸ್ತಕಗಳನ್ನು ನೀಡಬಹುದು. ಇದಕ್ಕಾಗಿ ಏ.21ರಿಂದ ಪಠ್ಯ ಪುಸ್ತಕ ಸಂಗ್ರಹ ಅಭಿಯಾನ ಆರಂಭಿಸಿದೆ.

ಮೇ 5, 19, ಜೂನ್‌ 19, ಜುಲೈ 2ರಂದು ಬೆಳಗ್ಗೆ 9.30 ರಿಂದ 11.30ರವರೆಗೆ ಹಳ್ಳದಕೇರಿಯ ಶ್ರೀ ಸ್ಥಾನಕ ಜೈನ್‌ ಭವನ್‌, ಎಂ.ಜಿ.ರಸ್ತೆಯಲ್ಲಿರುವ ತೆರಾಪಂತ್‌ ಭವನ, ಇಟ್ಟಿಗೆಗೂಡಿನ ಕುಂತನಾಥ್‌ ಜೈನ್‌ ಮಂದಿರದಲ್ಲಿ ಪುಸ್ತಕ ಸಂಗ್ರಹ ಮಾಡಲಾಗುತ್ತದೆ. ಆಸಕ್ತರು ಪುಸ್ತಕ ನೀಡುವ ಮೂಲಕ “ನಿಮ್ಮಿಂದ ವಿದ್ಯಾದಾನ-2019′ ಅಭಿಯಾನದಲ್ಲಿ ಭಾಗವಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next