ಶ್ರೀರಂಗಪಟ್ಟಣ: ತಾಲೂಕು ಗಣಂಗೂರು ಗ್ರಾಮದ ಬಳಿಯ ಯೋಗನರಸಿಂಹಸ್ವಾಮಿ ಕ್ರಷರ್ ಬಳಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಕಿಲ್ಲರ್ ಸೇರಿ ಐವರು ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ.2ರಂದು ಪೂರ್ಣಚಂದ್ರ ಎಂಬ ಯುವಕನ ಕೊಲೆಗೆ ಸುಪಾರಿ ನೀಡಿದ್ದ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಜೆ.ಎಂ.ಮಂಜುನಾಥ್ ಹಾಗೂ ಘಟನೆಯಲ್ಲಿ ಭಾಗಿಯಾಗಿದ್ದ ಗಣಂಗೂರು ಗ್ರಾಮದ ಜಿ.ವಿನಯ್‌ಕುಮಾರ್, ಜಿ.ಕೆ.ಚಂದ್ರಶೇಖರ್, ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ಶ್ರೀನಿವಾಸ್, ನಾಗಮಂಗಲ ತಾಲೂಕಿನ ಹೂವಿನಹಳ್ಳಿ ಗ್ರಾಮದ ಹೆಚ್.ಕೆ.ಅಭಿಷೇಕ್ ಬಂಧಿತ ಆರೋಪಿಗಳು.
3 ತಿಂಗಳ ಹಿಂದೆ ಮಂಜುನಾಥ್ ಮೇಲೆ ನಡೆದಿದ್ದ ಕೊಲೆ ಯತ್ನದಲ್ಲಿ ಪೂರ್ಣಚಂದ್ರನ ಕೈವಾಡ ಇದೆ ಎಂದು ಶಂಕಿಸಿ ಪೂರ್ಣಚಂದ್ರನನ್ನು ಕೊಲೆ ಮಾಡಲು ತನ್ನ ಸ್ನೇಹಿತರಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಎನ್ನಲಾಗಿದೆ. ಪ್ರಕರಣವನ್ನು ಬೇದಿಸಿದ ಶ್ರೀರಂಗಪಟ್ಟಣ ಪೊಲೀಸರು ಐವರು ಆರೋಪಿಗಳೊಂದಿಗೆ 2 ಬೈಕ್, 1 ಕಾರು ವಶಪಡಿಸಿಕೊಂಡು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಸೂದೆಗಳು ರದ್ದು: ಸಿದ್ದರಾಮಯ್ಯ
ಪ್ರಮುಖ ಆರೋಪಿ ಜೆ.ಎಂ. ಮಂಜುನಾಥ ಮೇಲೆ ಶ್ರೀರಂಗಪಟ್ಟಣ ಟೌನ್, ಶ್ರೀರಂಗಪಟ್ಟಣ ಗ್ರಾಮಾಂತರ ಹಾಗೂ ಅರಕರೆ ಪೊಲೀಸ್ ಠಾಣೆಗಳಲ್ಲಿ ಕೊಲೆ ಪ್ರಕರಣ, ಕೊಲೆ ಯತ್ನ, ದೊಂಬಿ ಮತ್ತು ಸ್ಪೋಟಕ ಕಾಯಿದೆ ಪ್ರಕರಣಗಳು ದಾಖಲಾಗಿದ್ದು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ರೌಡಿ ಶೀಟ್ ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.