● ದಿನೇಶ್ ಇರಾ
ರೈಲ್ವೇ ಇಲಾಖೆಯ ಅಧೀನದಲ್ಲಿರುವ ಅಲಹಾಬಾದ್‌ನ ಸೆಂಟ್ರಲ್ ಆರ್ಗನೈಸೇಶನ್ ಫಾರ್ ರೈಲ್ವೇ ಎಲೆಕ್ಟ್ರಿಫಿಕೇಶನ್ ವಿಭಾಗ ಈ ಯೋಜನೆ ನಿರ್ವಹಿಸುತ್ತಿದೆ. ಬೆಂಗಳೂರಿನಿಂದ ಮೈಸೂರುವರೆಗೆ ರೈಲ್ವೇ ಹಳಿ ಈಗಾಗಲೇ ವಿದ್ಯುದೀಕರಣಗೊಂಡಿದೆ. ಅಲ್ಲಿಂದ ಮಂಗಳೂರುವರೆಗಿನ ಸುಮಾರು 310 ಕಿ.ಮೀ. ಉದ್ದದ ಹಳಿ ವಿದ್ಯುದೀಕರಣಕ್ಕೆ ಬಾಕಿಯಿದೆ. ಈ ಪೈಕಿ ಮಂಗಳೂರು-ಹಾಸನ ಮಾರ್ಗದ ವಿದ್ಯುದೀಕರಣ ಯೋಜನೆಗೆ ಮೊದಲ ಮಂಜೂರಾತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ನಿರೀಕ್ಷೆ: ಸುರತ್ಕಲ್ ಸಮೀಪದ ತೋಕೂರುವಿನಿಂದ ಮಹಾರಾಷ್ಟ್ರದ ರೋಹಾವರೆಗಿನ ಒಟ್ಟು 741 ಕಿ.ಮೀ. ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ಪಾಲಕ್ಕಾಡ್ ದಕ್ಷಿಣ ರೈಲ್ವೇ ವಿಭಾಗದ ವತಿಯಿಂದ ಕೇರಳದ ಶೋರ್ನೂರು ಮತ್ತು ಮಂಗಳೂರು ನಡುವಣ 328 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಮಂಗಳೂರು ಜಂಕ್ಷನ್ (ಕಂಕನಾಡಿ)ವರೆಗೆ ಪೂರ್ಣಗೊಂಡಿದ್ದು, ತೋಕೂರುವರೆಗೆ ಮುಂದುವರಿಯಲಿದೆ. ಹೀಗೆ ಕರಾವಳಿಯ ಎರಡು ರೈಲ್ವೇ ಸಂಪರ್ಕ ಹಳಿಯು ವಿದ್ಯುದೀಕರಣ ಕಾಣುತ್ತಿರುವಾಗಲೇ, ಇದೀಗ ಮೈಸೂರು- ಹಾಸನ-ಮಂಗಳೂರು ರೈಲು ಹಳಿ ವಿದ್ಯುದೀಕರಣಕ್ಕೆ ನೈಋತ್ಯ ರೈಲ್ವೇ ವಿಭಾಗ ಮುಂದಡಿ ಇಟ್ಟಿರುವುದು ರೈಲ್ವೇ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಅರಸೀಕೆರೆ ಮಾರ್ಗ: ರೈಲ್ವೇ ಇಲಾಖೆ ಮೂಲಗಳ ಪ್ರಕಾರ, ಕಳೆದ ಕೇಂದ್ರ ಬಜೆಟ್‌ನಲ್ಲಿ ಮೈಸೂರು -ಹಾಸನ- ಮಂಗಳೂರು ರೈಲ್ವೇ ಹಳಿ ವಿದ್ಯುದೀಕರಣಕ್ಕೆ ಮಂಜೂರಾತಿ ನೀಡಲಾಗಿದ್ದು, ಸುಮಾರು 316 ಕೋ.ರೂ. ಮೀಸಲಿಡಲಾಗಿದೆ. ಇದರಲ್ಲಿ ಮಂಗಳೂರು-ಹಾಸನ ಕಾಮಗಾರಿ ಮೊದಲಿಗೆ ಆರಂಭಿಸಿ, ಆ ಬಳಿಕ ಹಾಸನ-ಮೈಸೂರು ಕಾಮಗಾರಿ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ಹಾಸನದಿಂದ ಅರಸೀಕೆರೆ ಮಾರ್ಗ ಕೂಡ ವಿದ್ಯುದೀಕರಣ ಯೋಜನೆಗೆ ಪರಿಗಣಿಸಲಾಗಿದೆ. ಈ ಕುರಿತ ಅಂತಿಮ ತೀರ್ಮಾನ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
Advertisement
ಮಂಗಳೂರು: ರಾಜಧಾನಿಯಿಂದ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಬೆಂಗಳೂರು-ಮಂಗಳೂರು ರೈಲ್ವೇ ಹಳಿಯ ಪೈಕಿ ಮೈಸೂರು, ಹಾಸನ, ಮಂಗಳೂರು ಮಾರ್ಗ ವಿದ್ಯುದೀಕರಣ ಯೋಜನೆಗೆ ಮಂಜೂರಾತಿ ದೊರಕಿದ್ದು, ಎರಡು ಹಂತಗಳಲ್ಲಿ ಈ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಲಿದೆ.
Related Articles
Advertisement
ಪಡೀಲ್ನಿಂದ ಆರಂಭ: ಮಂಗಳೂರು -ಮೈಸೂರು ರೈಲ್ವೇ ಹಳಿ ವಿದ್ಯುದೀಕರಣ ಯೋಜನೆ ಹಿನ್ನೆಲೆಯಲ್ಲಿ ಮಂಗಳೂರಿನ ಪಡೀಲ್ನಿಂದ ಬಂಟ್ವಾಳ, ಕಬಕ ಪುತ್ತೂರು, ಎಡಮಂಗಲ, ಸುಬ್ರಹ್ಮಣ್ಯ ಘಾಟಿ, ಸಕಲೇಶಪುರ-ಹಾಸನ ಮಾರ್ಗದ ರೈಲ್ವೇ ಹಳಿಯು ವಿದ್ಯುದೀಕರಣಕ್ಕೆ ಬದಲಾಗಬೇಕಿದೆ.
ಸುಬ್ರಹ್ಮಣ್ಯ-ಸಕಲೇಶಪುರ ಪರಿಸರ ಸೂಕ್ಷ್ಮ ಪ್ರದೇಶ: ಸುಬ್ರಹ್ಮಣ್ಯ -ಸಕಲೇಶಪುರ ರೈಲ್ವೇ ಮಾರ್ಗ ಪರಿಸರ ಸೂಕ್ಷ್ಮದಿಂದ ನಿರ್ಬಂಧಗಳನ್ನು ಹೊಂದಿದೆ. ತಿರುವುಗಳು ಅಧಿಕ ಇರುವ ಕಾರಣ ಹಾಗೂ ರೈಲ್ವೇ ಸುರಕ್ಷಿತ ಪ್ರಯಾಣದ ನೆಲೆಯಲ್ಲೂ ಇಲ್ಲಿ ಹೆಚ್ಚಿನ ರೈಲು ಓಡಾಟಕ್ಕೆ ಅವಕಾಶವೂ ಇಲ್ಲ. ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಘಾಟಿಯಲ್ಲಿ ಸಂಚರಿಸಲು ರೈಲಿಗೆ ಸುಮಾರು 2.30 ತಾಸು (ಗಂಟೆಗೆ 35 ಮೀ.ವೇಗ) ಅಗತ್ಯವಿದೆ. ಹೀಗಾಗಿ ಇಲ್ಲಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಳುವುದು ಕೂಡ ಸವಾಲಿನ ಕಾರ್ಯ.
ಜತೆಗೆ ವಿದ್ಯುದೀಕರಣ ಆದ ಬಳಿಕವೂ ಇಲ್ಲಿ ರೈಲು ತನ್ನ ನಿಯಮಿತ ವೇಗದಿಂದ ಅಧಿಕ ವೇಗವಾಗಿ ಬರುವ ಸಾಧ್ಯತೆ ಕಡಿಮೆ. ಆದರೆ, ಡೀಸೆಲ್ ಬಳಕೆಯ ಮೂಲಕ ರೈಲು ಸಂಚರಿಸುವಾಗ ಪರಿಸರ ಮಾಲಿನ್ಯ ಅಧಿಕ ಆಗುವುದಾದರೆ, ವಿದ್ಯುದೀಕರಣ ಆದ ನಂತರ ಇಂತಹ ಪರಿಸರ ಮಾಲಿನ್ಯಕ್ಕೆ ತಡೆ ನೀಡಬಹುದು ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ದಿ ಸಮಿತಿ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ.
ಪರಿಸರ ಸ್ನೇಹಿ/ ವೇಗ ವರ್ಧಕ ರೈಲು ಪ್ರಯಾಣ:
ರೈಲು ಮಾರ್ಗ ವಿದ್ಯುದೀಕರಣದಿಂದ ಇಂಧನ ಉಳಿತಾಯ ಹಾಗೂ ಪರಿಸರಕ್ಕೆ ಹೆಚ್ಚು ಲಾಭವಾಗಲಿದೆ. ಒಂದು ಕಾಲದಲ್ಲಿ ಕಲ್ಲಿದ್ದಲು ಉರಿಸಿ ರೈಲುಗಳನ್ನು ಓಡಿಸಲಾಗುತ್ತಿತ್ತು. ಡೀಸೆಲ್ ಚಾಲಿತ ರೈಲು ಎಂಜಿನ್ ಬಂದ ಬಳಿಕ ‘ಉಗಿಬಂಡಿ’ಯ ಕಾಲ ಇತಿಹಾಸದ ಪುಟ ಸೇರಿದೆ. ಈಗ ನಮ್ಮಲ್ಲಿ ಡೀಸೆಲ್ ಚಾಲಿತ ಎಂಜಿನ್‌ಗಳ ಜತೆಗೆ ವಿದ್ಯುತ್ ಚಾಲಿತ ರೈಲುಗಳೂ ಇವೆ. ಇದ್ದಲು ಮತ್ತು ಡೀಸೆಲ್ ಹೊಗೆ ಮಾಲಿನ್ಯದಿಂದ ಪರಿಸರದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆದರೆ, ವಿದ್ಯುತ್ ಚಾಲಿತ ರೈಲುಗಳಲ್ಲಿ ಈ ಸಮಸ್ಯೆ ಇಲ್ಲ. ಒಮ್ಮೆ ರೈಲ್ವೆ ವಿದ್ಯುದೀಕರಣ ಆದ ಬಳಿಕ ಈಗಿನ ವೆಚ್ಚಕ್ಕಿಂತ ಶೇ.50ರಷ್ಟು ಮಾತ್ರ ಖರ್ಚು ಮಾಡಬಹುದಾಗಿದೆ. ಹೀಗಾಗಿ ಇಂಧನ ಉಳಿತಾಯ ಜೊತೆಗೆ ವೇಗ ವರ್ಧನೆಗೂ ವಿದ್ಯುತ್ ಮಾರ್ಗ ಪೂರಕ.