ಕುಷ್ಟಗಿ : ಕುಷ್ಟಗಿಯ 3ನೇ ವಾರ್ಡಿನಲ್ಲಿ ರಾಜಕಾಲುವೆ ಒತ್ತುವರಿ ಪರಿಣಾಮ ಮನೆಗಳು ಜಲಾವೃತಗೊಂಡಿದ್ದು ಮಳೆ ನೀರು ಸ್ಥಳೀಯ ನಿವಾಸಿಗಳಿಗೆ ಜಲ ದಿಗ್ಭಂದನ ವಿಧಿಸಿದೆ.
ಕುಷ್ಟಗಿ ಪುರಸಭೆ ವ್ಯಾಪ್ತಿಯ 3ನೇ ವಾರ್ಡಿನಲ್ಲಿ ರಾಜಕಾಲುವೆಗಳ ಇಕ್ಕೆಲಗಳಲ್ಲಿ ನಿವೇಶನಗಳು ಅತಿಕ್ರಮಿಸಿದ್ದು ರಾಜಕಾಲುವೆ ಇಕ್ಕಟ್ಟಾಗಿದ್ದು, ನಾಲೆಯ ಪ್ರದೇಶದಲ್ಲಿ ಘನತ್ಯಾಜ್ಯ ಮುಳ್ಳು ಕಂಟಿ ಬೆಳೆದಿದೆ. ಈ ಪ್ರದೇಶದಲ್ಲಿ ಕಲ್ಯಾಣ ಕರ್ನಾಟಕ ಅನುದಾನದ 48 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ಟೆಂಡರ್ ಆಗಿ 6 ತಿಂಗಳಾಗಿದ್ದು, ಕಾಮಗಾರಿ ಕಾಲಮಿತಿ ಮೀರಿದೆ.
ಪುರಸಭೆ ರಾಜಕಾಲುವೆ ಸರಹದ್ದು ಅಳತೆ ಮಾಡಿ ಒತ್ತುವರಿ ನಿವೇಶನಗಳ ತೆರವುಗೊಳಿಸಬೇಕಿದ್ದು ಇದು ಪುರಸಭೆಯಿಂದ ಅಸಾದ್ಯವಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಿ ಪರಿಹಾರ ಕಂಡುಕೊಳ್ಳಬೇಕಾದ ಪುರಸಭೆ, ಭೂಮಾಪನ ಇಲಾಖೆಗೆವಹಿಸಿ ಜಾಣ ಕುರುಡು ಪ್ರದರ್ಶಿಸಿದೆ. ಪುರಸಭೆ ಅಸಹಕಾರದಿಂದ ನಿವೇಶನ ಒತ್ತುವರಿ ತೆರವು ಕಾರ್ಯಾಚರಣೆ ಪುರಸಭೆಗೆ ನುಂಗಲು ಬಾರದ, ಉಗಳಲು ಬಾರದ ಬಿಸಿ ತುಪ್ಪವಾಗಿದೆ. ಆದರೆ ಪ್ರತಿ ಮಳೆಗೂ ಈ ಪ್ರದೇಶ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಈ ದುಸ್ಥಿತಿಯಲ್ಲಿ ವಿಷಜಂತುಗಳ ಕಾಟ ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.
ಸ್ಥಳೀಯ ನಿವಾಸಿಗಳಾದ ಡಿ.ಬಿ.ಗಡೇದ್, ಎ.ವೈ.ಲೋಕರೆ, ರಮೇಶ ನೀಲಿ ಮೊದಲಾದವರು, ರಾಜಕಾಲುವೆಗೆ ಸಿಮೆಂಟ್ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ತುರ್ತಾಗಿ ನಡೆಸಲು ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನೆ ಆಗಿಲ್ಲ. ಸಂಬಂಧಿಸಿದ ಪುರಸಭೆ ಸದಸ್ಯೆ ಇದ್ದರೂ ಇಲ್ಲದಂತೆ ಇದ್ದು ಈ ಸದಸ್ಯೆಯನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ ನಡೆಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಪಿ.ಎಂ-ಕಿಸಾನ್ ಯೋಜನೆಯಡಿ ಪರಿಹಾರ : ಇ-ಕೆವೈಸಿಗೆ ಇಂದೇ ಕೊನೆಯ ದಿನ