Advertisement
ಸದ್ಯ ಕೊರೊನಾ ಕಾರಣದಿಂದ ಸಾಮರ್ಥ್ಯದ ಶೇ. 50ರಷ್ಟು ವೀಕ್ಷಕರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲಾಗಿದೆ. ಆದರೂ ಈ ದೈತ್ಯ ಕ್ರೀಡಾಂಗಣದಲ್ಲಿ 55 ಸಾವಿರದಷ್ಟು ಪ್ರೇಕ್ಷಕರು ಜಮಾಯಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್ ಮಟ್ಟಿಗೆ ಇದು ನಿರೀಕ್ಷೆಗೂ ಮೀರಿದ ಜನಸ್ತೋಮವೇ ಆಗಿದೆ.
ಭಾರತದ ಲೆಜೆಂಡ್ರಿ ಕ್ರಿಕೆಟಿಗರಾದ ಸುನೀಲ್ ಗಾವಸ್ಕರ್ ಮತ್ತು ಕಪಿಲ್ದೇವ್ ಅವರ ಮಹೋನ್ನತ ಸಾಧನೆಗಳಿಗೆ ಸಾಕ್ಷಿಯಾದ ಈ ಅಂಗಳದಲ್ಲಿ ವೇಗಿ ಇಶಾಂತ್ ಶರ್ಮ 100ನೇ ಟೆಸ್ಟ್ ಆಡಲಿರುವುದೊಂದು ವಿಶೇಷ. ಕಪಿಲ್ ಹೊರತುಪಡಿಸಿದರೆ 100 ಟೆಸ್ಟ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ವೇಗಿ ಎಂಬುದು ಇಶಾಂತ್ ಪಾಲಿನ ಹೆಗ್ಗಳಿಕೆ. ಭಾರತದ ಅತೀ ವೇಗದ ಟ್ರ್ಯಾಕ್ ಎಂದೇ ಜನಜನಿತವಾಗಿರುವ ಅಹ್ಮದಾಬಾದ್ನಲ್ಲಿ ತ್ರಿವಳಿ ವೇಗಿಗಳು ದಾಳಿಗಿಳಿಯುವ ಎಲ್ಲ ಸಾಧ್ಯತೆ ಇದೆ. ಇಶಾಂತ್ ಶರ್ಮ ಜತೆಗೆ ವಿಶ್ರಾಂತಿ ಮುಗಿಸಿ ಬಂದ ಜಸ್ಪ್ರೀತ್ ಬುಮ್ರಾ ಮತ್ತು ಫಿಟ್ನೆಸ್ ಟೆಸ್ಟ್ನಲ್ಲಿ ಪಾಸ್ ಆದ ಉಮೇಶ್ ಯಾದವ್ ಅವರ ಕಾಂಬಿನೇಶನ್ ಪಕ್ಕಾ ಆದಂತಿದೆ. ಇವರಿಗಾಗಿ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಜಾಗ ಬಿಡುವುದೂ ನಿಶ್ಚಿತ.
Related Articles
Advertisement
ಇದು “ಬಿ’ ಟೀಮ್ ಅಲ್ಲಈ ಪಿಂಕ್ ಬಾಲ್ ಟೆಸ್ಟ್ ಆಡುವಾಗ ಟೀಮ್ ಇಂಡಿಯಾ ಎರಡು ವಿಷಯಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಭಾರತಕ್ಕೆ ಪಿಂಕ್ ಟೆಸ್ಟ್ ಅನುಭವ ಕಡಿಮೆ. ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್ನಲ್ಲಿ 36 ರನ್ನಿಗೆ ಮುಗ್ಗರಿಸಲು ಹೊನಲು ಬೆಳಕೇ ಕಾರಣ ಎಂದು ತರ್ಕಿಸಲಾಗಿತ್ತು. ತವರಿನಲ್ಲಿ ಇಂಥ ಕಂಟಕ ಎದುರಾಗದಂತೆ ನೋಡಿಕೊಳ್ಳಬೇಕು. ಇನ್ನೊಂದು ಸಂಗತಿಯೆಂದರೆ, ಇಂಗ್ಲೆಂಡ್ ಚೆನ್ನೈನ ದ್ವಿತೀಯ ಟೆಸ್ಟ್ ಪಂದ್ಯದಂತೆ “ಬಿ’ ಮಟ್ಟದ ಟೀಮ್ ಆಗಿ ಉಳಿದಿಲ್ಲ ಎಂಬುದು. ಕೊಹ್ಲಿ ಪಡೆ 317 ರನ್ನುಗಳ ದಾಖಲೆ ಅಂತರದಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತಂದಿತೇನೋ ನಿಜ, ಆದರೆ ಇಂಗ್ಲೆಂಡ್ ಬಲಾಡ್ಯ ತಂಡವನ್ನು ಕಣಕ್ಕಿಳಿಸಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಮೊದಲ ಪಂದ್ಯ ಹೀರೋಗಳಾದ ಬೆಸ್, ಆ್ಯಂಡರ್ಸನ್, ಆರ್ಚರ್, ಬಟ್ಲರ್ ನಾನಾ ಕಾರಣಗಳಿಂದ ಬೇರ್ಪಟ್ಟಿದ್ದರು. ಆದರೀಗ ಪ್ರಮುಖ ಆಟಗಾರರೆಲ್ಲ ವಾಪಸಾಗುವ ಕಾರಣ ಆಂಗ್ಲರ ಪಡೆ ಮೊದಲಿನಷ್ಟೇ ಸ್ಟ್ರಾಂಗ್ ಅಗಲಿದೆ. ಬ್ಯಾಟಿಂಗ್ ಸರದಿಯಲ್ಲಿ ಒಂದು ಸ್ಥಾನವನ್ನು ಜಾಕ್ ಕ್ರಾಲಿಗೆ ಮೀಸಲಿಡುವ ಕಾರಣ ಇಂಗ್ಲೆಂಡ್ ಓಪನಿಂಗ್ ಕೂಡ ಹೆಚ್ಚು ಬಲಿಷ್ಠಗೊಳ್ಳಲಿದೆ. ಡಾನ್ ಲಾರೆನ್ಸ್ ಬದಲು ಅನುಭವಿ ಜಾನಿ ಬೇರ್ಸ್ಟೊ ಆಡಲಿದ್ದಾರೆ. ಅಲ್ಲಿಗೆ ಆಂಗ್ಲರ ಹನ್ನೊಂದರ ಬಳಗ ಎಷ್ಟು ಶಕ್ತಿಶಾಲಿಯಾಗಲಿದೆ ಎಂಬುದನ್ನು ನಾವೇ ಊಹಿಸಬಹುದು. ಭಾರತಕ್ಕೆ ಮಹತ್ವದ ಟೆಸ್ಟ್
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಇದು ಮಹತ್ವದ ಪಂದ್ಯ. ಉಳಿದೆರಡು ಟೆಸ್ಟ್ಗಳಲ್ಲಿ ಕೊಹ್ಲಿ ಪಡೆಗೆ ಒಂದು ಗೆಲುವು ಅನಿವಾರ್ಯವಾಗಿದೆ. ಇನ್ನೊಂದು ಡ್ರಾಗೊಂಡರೂ ಸಾಕು. ಆದರೆ ಮತ್ತೆ ಸೋಲಿನ ಮುಖ ನೋಡಬಾರದು! ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತ, ಇಂಗ್ಲೆಂಡ್
ಈ ವರೆಗೆ 15 ಡೇ-ನೈಟ್ ಟೆಸ್ಟ್ ಪಂದ್ಯಗಳು ನಡೆದಿದ್ದು, ಭಾರತ ಎರಡರಲ್ಲಿ ಪಾಲ್ಗೊಂಡಿದೆ. ಒಂದನ್ನು ಗೆದ್ದರೆ, ಇನ್ನೊಂದನ್ನು ಹೀನಾಯವಾಗಿ ಸೋತಿದೆ. ಭಾರತ ಮೊದಲ ಹಗಲು-ರಾತ್ರಿ ಟೆಸ್ಟ್ ಆಡಿದ್ದು 2019ರ ನವೆಂಬರ್ನಲ್ಲಿ. ಎದುರಾಳಿ ಬಾಂಗ್ಲಾದೇಶ. ಸ್ಥಳ, ಕೋಲ್ಕತಾದ ಈಡನ್ ಗಾರ್ಡನ್ಸ್. ಗೆಲುವಿನ ಅಂತರ ಇನ್ನಿಂಗ್ಸ್ ಹಾಗೂ 46 ರನ್. ಟೀಮ್ ಇಂಡಿಯಾದ ಎರಡನೇ ಪಿಂಕ್ ಟೆಸ್ಟ್ ಎನ್ನುವುದು ಅಭಿಮಾನಿಗಳ ಪಾಲಿಗೆ ಈಗಲೂ ದುಸ್ವಪ್ನವಾಗಿ ಕಾಡುತ್ತಿದೆ. ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್ನಲ್ಲಿ ಆಡಿದ ಈ ಪಂದ್ಯದಲ್ಲಿ ಕೊಹ್ಲಿ ಪಡೆ 36 ರನ್ನಿಗೆ ಕುಸಿದು 8 ವಿಕೆಟ್ಗಳ ಸೋಲಿಗೆ ತುತ್ತಾಗಿತ್ತು. ಇಂಗ್ಲೆಂಡಿಗೂ ಒಂದೇ ಜಯ
ಇಂಗ್ಲೆಂಡ್ ಒಟ್ಟು 3 ಡೇ-ನೈಟ್ ಟೆಸ್ಟ್ ಆಡಿದೆ. ತವರಿನ ಒಂದು ಟೆಸ್ಟ್ ಗೆದ್ದರೆ, ವಿದೇಶದಲ್ಲಿ ಆಡಿದ ಕೊನೆಯ 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಂಗ್ಲೆಂಡಿನ ಏಕೈಕ ಗೆಲುವು ಒಲಿದದ್ದು 2017ರ ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಬರ್ಮಿಂಗ್ಹ್ಯಾಮ್ ಪಂದ್ಯದಲ್ಲಿ. ಅಂತರ ಇನ್ನಿಂಗ್ಸ್ ಮತ್ತು 209 ರನ್. ಅದೇ ವರ್ಷಾಂತ್ಯ ಅಡಿಲೇಡ್ನಲ್ಲಿ ಆಡಲಾದ ಆ್ಯಶಸ್ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 120 ರನ್ನುಗಳಿಂದ ಶರಣಾಯಿತು. ಬಳಿಕ 2018ರಲ್ಲಿ ನ್ಯೂಜಿಲ್ಯಾಂಡ್ ಎದುರಿನ ಆಕ್ಲೆಂಡ್ ಮುಖಾಮುಖೀಯಲ್ಲಿ ಇನ್ನಿಂಗ್ಸ್ ಮತ್ತು 49 ರನ್ನುಗಳ ಸೋಲಿಗೆ ತುತ್ತಾಯಿತು. ಭಾರತ-ಇಂಗ್ಲೆಂಡ್ ಡೇ-ನೈಟ್ ಟೆಸ್ಟ್ ನಲ್ಲಿ ಮುಖಾಮುಖೀ ಆಗುತ್ತಿರುವುದು ಇದೇ ಮೊದಲು. ವನಿತೆಯರೂ ಆಡಿದ್ದಾರೆ ಪಿಂಕ್ ಟೆಸ್ಟ್!
ಹಗಲು-ರಾತ್ರಿ ಟೆಸ್ಟ್ ಪಂದ್ಯ ಕೇವಲ ಪುರುಷರಿಗಷ್ಟೇ ಸೀಮಿತವಲ್ಲ, ವನಿತೆಯರೂ ಆಡಿರುವುದು ಉಲ್ಲೇಖನೀಯ. ಆದರೆ ಇದು ಒಂದೇ ಪಂದ್ಯಕ್ಕೆ ಸೀಮಿತಗೊಂಡಿದೆ. ಈ ಪಂದ್ಯ 2017ರಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವೆ ಸಿಡ್ನಿಯಲ್ಲಿ ನಡೆದಿತ್ತು. ಆದರೆ ಈ ಪಂದ್ಯ ಡ್ರಾಗೊಂಡಿತ್ತು. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ.
ಇಂಗ್ಲೆಂಡ್: ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲಿ, ಜಾನಿ ಬೇರ್ಸ್ಟೊ, ಜೋ ರೂಟ್ (ನಾಯಕ), ಓಲೀ ಪೋಪ್, ಬೆನ್ ಫೋಕ್ಸ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಜಾಕ್ ಲೀಚ್, ಜೋಫ ಆರ್ಚರ್,
ಜೇಮ್ಸ್ ಆ್ಯಂಡರ್ಸನ್. ಆರಂಭ: ಅಪರಾಹ್ನ 2.30 ಪ್ರಸಾರ: ಸ್ಟಾರ್ ನ್ಪೋರ್ಟ್ಸ್