Advertisement

ಮೈಲುಗಲ್ಲಾಗುವ ನಡೆ

11:10 PM Dec 30, 2019 | sudhir |

ಭೂ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ಅವರು ದೇಶದ ಮೊದಲ ಸೇನಾ ಮಹಾ ದಂಡನಾಯಕ (ಚೀಫ್ ಆಫ್ ಡಿಫೆನ್ಸ್‌ ಸ್ಟಾಫ್) ಹುದ್ದೆಗೇರಿದ್ದಾರೆ. ಕಳೆದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಮೂರೂ ಸೇನೆಗಳ ನಿಯಂತ್ರಣ ಒಬ್ಬನೇ ವ್ಯಕ್ತಿಯಲ್ಲಿರುವ ಮಹಾದಂಡನಾಯಕನ ಹುದ್ದೆಯನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ಅದೀಗ ಕಾರ್ಯರೂಪಕ್ಕೆ ಬಂದಿದೆ. ಇದು ದೇಶದ ಸೇನಾ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗುವಂಥ ನೇಮಕಾತಿ. ಈ ಮೂಲಕ ಕೇಂದ್ರ ಸರಕಾರ ರಾಷ್ಟ್ರೀಯ ಭದ್ರತೆ ಮತ್ತು ಉನ್ನತ ಸೇನಾ ಆಡಳಿತಕ್ಕೆ ದೊಡ್ಡ ಮಟ್ಟದ ಸರ್ಜರಿಯನ್ನು ಮಾಡಿದಂತಾಗಿದೆ. ಇನ್ನು ಮುಂದೆ ಭೂ, ವಾಯು ಮತ್ತು ನೌಕಾಸೇನೆಗಳು ಒಬ್ಬನೇ ದಂಡನಾಯಕನ ಅಡಿಯಲ್ಲಿ ಬರಲಿವೆ. ಈ ಮೂಲಕ ಮೂರು ಸೇನೆಗಳ ನಡುವೆ ಇದ್ದ ಸಂವಹನದ ಕೊರತೆ ನಿವಾರಣೆಯಾಗಲಿದೆ.

Advertisement

ಜಗತ್ತಿನ ಬಲಾಡ್ಯ ಸೇನೆಗಳನ್ನು ಹೊಂದಿರುವ ಅಮೆರಿಕ ಮತ್ತು ಚೀನದಲ್ಲಿ ಈಗಾಗಲೇ ಈ ಹುದ್ದೆ ಇದೆ. ಗಾತ್ರದಲ್ಲಿ ಎರಡನೇ ಸ್ಥಾನ ಮತ್ತು ವೆಚ್ಚದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದ ಸೇನೆಗೂ ಮಹಾ ದಂಡನಾಯಕರ ಅಗತ್ಯ ಇದೆ ಎಂಬ ಬೇಡಿಕೆ ಕೇಳಿ ಬಂದು ಎರಡು ದಶಕಗಳೇ ಕಳೆದಿದ್ದರೂ ಅದು ಈಡೇರಿದ್ದು ಈಗ.

ಕಾರ್ಗಿಲ್‌ ಕದನದ ಬಳಿಕ ಯುದ್ಧದ ಸಂದರ್ಭದಲ್ಲಿ ಆದ ಕೆಲವು ಲೋಪದೋಷಗಳ ತನಿಖೆಗಾಗಿ ರಚಿಸಲಾಗಿದ್ದ ಕೆ.ಸುಬ್ರಮಣ್ಯಂ ನೇತೃತ್ವದ ಆಯೋಗ ಭಾರತದ ಸೇನೆಗೆ ಏಕೀಕೃತ ಅಧಿಕಾರ ಕೇಂದ್ರ ಹೊಂದಿರುವ ಹುದ್ದೆಯೊಂದರ ಅಗತ್ಯವನ್ನು ಮನಗಂಡಿತ್ತು. ಯುದ್ಧದಂಥ ಸಂದರ್ಭದಲ್ಲಿ ಮೂರೂ ಪಡೆಗಳು ಪ್ರತ್ಯೇಕವಾಗಿ ಆದೇಶಗಳನ್ನು ಸ್ವೀಕರಿಸಿ ಕಾರ್ಯಾಚರಿಸುತ್ತವೆ. ಆದರೆ ಸಂವಹನ ಮತ್ತು ಸಂಯೋಜನೆಯ ಕೊರತೆಯಿಂದಾಗಿ ಕಾರ್ಯಾಚರಣೆಯಲ್ಲಿ ತೊಡಕುಗಳು ಎದುರಾಗುತ್ತಿದ್ದವು. ಭವಿಷ್ಯದಲ್ಲಿ ಹೀಗಾಗಬಾರದು ಎಂಬ ದೂರದೃಷ್ಟಿಯಿಂದ ಆಯೋಗ ಏಕೀಕೃತ ಆದೇಶ ವ್ಯವಸ್ಥೆಯನ್ನು ಜಾರಿಗೆ ತರಲು ಶಿಫಾರಸು ಮಾಡಿತ್ತು. ಆದರೆ ಅಧಿಕಾರಶಾಹಿ ಕೆಂಪುಪಟ್ಟಿಯ ನಿಧಾನ ಧೋರಣೆ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆಯಿಂದಾಗಿ ಈ ಹುದ್ದೆ ಸೃಷ್ಟಿಯ ವಿಚಾರ ನನೆಗುದಿಗೆ ಬಿದ್ದಿತ್ತು.

ಮಹಾ ದಂಡನಾಯಕರ ಹುದ್ದೆಯನ್ನು ಸೇನಾ ಮುಖ್ಯಸ್ಥರ ಪೈಕಿ ಸಮಾನರಲ್ಲಿ ಮೊದಲಿಗರು ಎಂದು ವ್ಯಾಖ್ಯಾನಿಸಲಾಗಿದೆ. ಅರ್ಥಾತ್‌ ಮಹಾದಂಡನಾಯಕರು ಕೂಡ ಸೇನಾ ಮುಖ್ಯಸ್ಥರ ಸಾಲಿನಲ್ಲಿಯೇ ಬರುತ್ತಾರೆ. ಅವರ ವೇತನವೂ ಮುಖ್ಯಸ್ಥರಷ್ಟೇ ಇರುತ್ತದೆ. ಆದರೆ ಸರಕಾರಕ್ಕೆ ಮಹಾದಂಡನಾಯಕರೇ ಮುಖ್ಯ ಸೇನಾ ಸಲಹೆಗಾರರಾಗಿರುತ್ತಾರೆ. ಹೊಸದಾಗಿ ಸೃಷ್ಟಿಯಾಗಿರುವ ಸೇನಾ ವ್ಯವಹಾರಗಳ ಇಲಾಖೆಗೆ ಮಹಾ ದಂಡನಾಯಕರೇ ಮುಖ್ಯಸ್ಥರಾಗಿರುತ್ತಾರೆ. ಅಗತ್ಯವಿದ್ದಾಗ ಮೂರೂ ಸೇನೆಗಳಿಗೆ ಸಂಯೋಜಿತ ನಿರ್ದೇಶನಗಳನ್ನು ನೀಡುವ ಅಧಿಕಾರ ಮಹಾದಂಡನಾಯಕರಿಗಿದೆ. ಯುದ್ಧದಂಥ ಮಹತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಸಂಯೋಜಿತ ನಿರ್ದೇಶನಕ್ಕೆ ಬಹಳ ಮಹತ್ವವಿದೆ.

ಸೇನಾ ಖರೀದಿಯೂ ಇನ್ನು ಮುಂದೆ ಮಹಾದಂಡನಾಯಕರ ಪರಮಾಧಿಕಾರಕ್ಕೆ ಒಳಪಡುತ್ತದೆ. ಮೂರೂ ಸೇನೆಗಳಿಗೆ ಪ್ರತ್ಯೇಕವಾಗಿ ಖರೀದಿ ಮಾಡುವ ಬದಲು ಮಹಾದಂಡನಾಯಕರೇ ಆಯಾಯ ಸೇನೆಗಳ ಅಗತ್ಯವನ್ನು ಖರೀದಿ ಪ್ರಕ್ರಿಯೆ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರುವ ಇರಾದೆ ಸರಕಾರಕ್ಕಿದೆ. ಸೇನಾ ಖರೀದಿಯಲ್ಲಿ ಆಳುವವರ ಅತಿಯಾದ ಹಸ್ತಕ್ಷೇಪಕ್ಕೆ ಇದರಿಂದ ತಡೆಬೀಳಲಿದೆ. ಸೇನಾ ವೆಚ್ಚದಲ್ಲಿ ನಾವು ನಾಲ್ಕನೇ ಸ್ಥಾನದಲ್ಲಿದ್ದರೂ ಸೇನೆಯ ಬಜೆಟ್‌ನ ಬಹುಪಾಲು ವೇತನ, ಪಿಂಚಣಿ, ಮೂಲಸೌಕರ್ಯಗಳ ನಿರ್ವಹಣೆ ಇತ್ಯಾದಿ ವೆಚ್ಚಗಳಿಗೆ ಹೋಗುತ್ತದೆ. ಸೇನೆಯ ಆಧುನೀಕರಣಕ್ಕೆ ಲಭ್ಯವಾಗುವ ಮೊತ್ತ ಬಹಳ ಕಡಿಮೆ. ಈ ಮೊತ್ತದಲ್ಲೇ ಮೂರೂ ಸೇನೆಗಳ ಅಗತ್ಯವನ್ನು ಪೂರೈಸಬೇಕಾಗುತ್ತದೆ. ಇದನ್ನೆಲ್ಲ ಸುಸೂತ್ರಗೊಳಿಸುವ ಜವಾಬ್ದಾರಿ ಮಹಾ ದಂಡನಾಯಕರ ಮೇಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next