Advertisement

ದಾವಣಗೆರೆ

07:29 PM Jun 22, 2023 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ನೀಡುತ್ತಿರುವ ೫ ಕೆಜಿ ಜೊತೆಗೆ ರಾಜ್ಯ ಸರ್ಕಾರ ೧೦ ಕೆಜಿ ಸೇರಿ ಪ್ರತಿಯೊಬ್ಬರಿಗೆ ೧೫ ಕೆಜಿ ಅಕ್ಕಿ ಕೊಡಬೇಕು ಎಂದು ಒತ್ತಾಯಿಸಿ ಬಜೆಟ್ ಅಧಿವೇಶನ ಪ್ರಾರಂಭದಿಂದ ಮುಗಿಯುವರೆಗೂ ವಿಧಾನ ಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ತಾವೇ ಧರಣಿ, ಸತ್ಯಾಗ್ರಹ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

Advertisement

ಗುರುವಾರ ಅಭಿನವ ರೇಣುಕ ಮಂದಿರದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಪ್ರತಿಯೊಬ್ಬರಿಗೂ ೧೫ ಕೆಜಿ ಅಕ್ಕಿ ಕೊಡಬೇಕು. ಇಲ್ಲದಿದ್ದಲ್ಲಿ ಅಷ್ಟು ಸುಲಭವಾಗಿ ನಿಮ್ಮನ್ನು ಬಿಡುವುದೇ ಇಲ್ಲ ಎಂದು ಎಚ್ಚರಿಸಿದರು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳಲ್ಲಿ ಕೆಲವೊಂದು ಷರತ್ತು ಹಾಕಿ ಮಹಿಳೆ ಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಭರವಸೆ ಬಿಟ್ಟರೆ ಇನ್ನುಳಿದ ಯಾವುದೇ ಭರವಸೆ ಈಡೇರಿಸಿಲ್ಲ. ಆ ಮೂಲಕ ಜನರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆದಿದೆ. ಜು. ೫ ರೊಳಗೆ ಯಾವುದೇ ಷರತ್ತುಗಳ ಹಾಕದೆ ಎಲ್ಲ ಭರವಸೆಗಳನ್ನು ಈಡೇರಿಸಲೇಬೇಕು ಎಂದು ಒತ್ತಾಯಿಸಿದರು.

ವಿಧಾನ ಮಂಡಲದ ಅಧಿವೇಶನ ಪ್ರಾರಂಭಕ್ಕೂ ಮುನ್ನವೇ ಸರ್ಕಾರ ಭರವಸೆ ಈಡೇರಿಸದಿದ್ದರೆ. ಜು. ೪ ರಂದು ರಾಜ್ಯಪಾಲರ ಭಾಷಣದ ನಂತರ ವಿಧಾನ ಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ನಾನೇ ಧರಣಿ ಕೂರುತ್ತೇನೆ. ನನ್ನೊಂದಿಗೆ ಚುನಾವಣೆಯಲ್ಲಿ ಸೋತಿರುವವರು, ಎಲ್ಲರೂ ಭಾಗವಹಿಸುವರು. ಧರಣಿ, ಸತ್ಯಾಗ್ರಹದ ಮೂಲಕ ಸರ್ಕಾರದ ಮೂಗು ಹಿಡಿದು ಭರವಸೆ ಈಡೇರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ನರೇಂದ್ರ ಮೋದಿ ಅವರಂತಹ ಪ್ರಧಾನಿ ದೊರೆತಿರುವುದು ನಮ್ಮೆಲ್ಲರ ಸುದೈವ. ನಮಗೆ ವಿಧಾನ ಸಭಾ ಚುನಾ ವಣೆಯಲ್ಲಿ ಹಿನ್ನಡೆ ಆಗಿರಬಹುದು. ಅವರ ನೇತೃತ್ವದಲ್ಲೇ ಲೋಕಸಭಾ ಚುನಾವಣೆ ನಡೆಯಲಿದೆ. ಅವರೇ ಮತ್ತೆ ಮುಂದಿನ ಪ್ರಧಾನಿ ಆಗುವುದನ್ನ ಯಾರಿಂದಲೂ ತಪ್ಪಿಸಲು ಆಗುವುದೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತ ಜಗತ್ತಿನ ೫ ನೇ ಅತಿ ದೊಡ್ಡ ಆರ್ಥಿಕ ಶಕ್ತಿಯ ದೇಶ ವಾಗಿದೆ. ಎಂಟು ವರ್ಷಗಳಲ್ಲಿ ೫೩೦ ಬಿಲಿಯನ್ ಡಾಲರ್ ಬಂಡವಾಳವನ್ನು ಭಾರತದಲ್ಲಿ ಹೂಡಿಕೆ ಮಾಡಲಾ ಗಿದೆ. ಸ್ಟಾರ್ಟಪ್‌ನಲ್ಲಿ ವಿಶ್ವದ ಮೂರನೇ ರಾಷ್ಟ್ಟವಾಗಿದೆ. ೨೦೨೩ರಲ್ಲಿ ಅಮೆರಿಕಾ, ಚೀನಾಕ್ಕಿಂತಲೂ ಹೆಚ್ಚಿನ ಜಿಡಿಪಿ ಹೊಂದಿದೆ. ಈಗ ಭಾರತದ ಜಿಡಿಪಿ ಶೇ.೯.೧ ರಷ್ಟಿದೆ. ವಿವಿಧ ಯೋಜನೆಗಳ ಮೂಲಕ ಜನರ ಖಾತೆಗೆ ನೇರ ಹಣ ವರ್ಗಾವಣೆ ಆಗಿದೆ. ಆದರೂ, ಕರ್ನಾಟಕದ ಕಾಂಗ್ರೆಸ್‌ನವರು ಬಾಯಿ ಬಡುಕರಂತೆ ಮೋದಿಯವರ ಬಗ್ಗೆ ಮನ ಬಂದಂತೆ ಮಾತನಾಡುತ್ತಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೊಟ್ಟಿರುವ ಭರವಸೆಗಳ ಈಡೇರಿಸದೆ ನಾಡಿನ ಜನರಿಗೆ ದ್ರೋಹ ಮಾಡಿದರೆ ನಾವು ಸಹಿಸಲು ಸಾಧ್ಯವೇ ಇಲ್ಲ. ಕೇಂದ್ರದ ಫಸಲ್ ಬಿಮಾ ಯೋಜನೆಯ ಅನುದಾನ ರೈತರಿಗೆ ಕೊಡಲಿಕ್ಕೂ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಸರ್ಕಾರ ದಿವಾಳಿಯಾಗಿದೆ. ಜನರ ಹಿತ ಮರೆತು ರಾಜಕೀಯ ದೊಂಬರಾಟ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟಂತಹ ಭರಸವೆಗಳ ಈಡೇರಿಸಬೇಕು. ಇಲ್ಲವಾದಲ್ಲಿ ಅಽಕಾರದಿಂದ ಬಿಟ್ಟು ತೊಲಗಬೇಕು ಎಂದು ಒತ್ತಾಯಿಸಿ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next