Advertisement

ತೆನೆ ಹೊತ್ತ ಮಹಿಳೆಗೆ ‘ಕೈ’ ಕೊಟ್ಟ ಮಂಗಳಾದೇವಿ ಬಿರಾದಾರ ಬೆಂಬಲಿಗ

05:21 PM Mar 07, 2021 | Team Udayavani |

ಮುದ್ದೇಬಿಹಾಳ: ಮೂಲ ಬಿಜೆಪಿ ಕಾರ್ಯಕರ್ತರಾಗಿದ್ದು 2018ರ ವಿಧಾನಸಭಾ ಚುನಾವಣೆ ಸಂದರ್ಭ ಜೆಡಿಎಸ್‌ಗೆ ವಲಸೆ ಬಂದಿದ್ದ ಹಂಡೇವಜೀರ ಸಮಾಜದ ಮುಖಂಡ, ವಿಜಯಪುರ ಜಿಲ್ಲಾ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರವಿಂದ ಕಾಶಿನಕುಂಟಿ ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ರಾಜೀನಾಮೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ ಲೋಡ್‌ ಮಾಡುವ ಮೂಲಕ ತೀವ್ರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

Advertisement

ಜೆಡಿಎಸ್‌ನಲ್ಲಿ ಉಸಿರು ಕಟ್ಟುವ ವಾತಾವರಣ ಇರುವುದರಿಂದ, ನನ್ನದೇ ನಡೆಯಬೇಕು, ನನ್ನ ಕೇಳದೇ ಏನನ್ನೂ ಮಾಡಬಾರದು ಅನ್ನೋ ಕೆಟ್ಟ ಸ್ವಭಾವ ಹೊಂದಿರುವವರು ಪಕ್ಷದಲ್ಲಿರುವುದರಿಂದ ತಾವು ರಾಜಿನಾಮೆ ಕೊಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಜೆಡಿಎಸ್‌ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಅವರ ಕಟ್ಟಾ ಬೆಂಬಲಿಗರಾಗಿರುವ ಅರವಿಂದ ಅವರ ಈ ನಡೆ ಕುರಿತು ತರಹೇವಾರಿ ಚರ್ಚೆಗಳು ಇಲ್ಲಿ ನಡೆಯುತ್ತಿವೆ.

2018ರ ವಿಧಾನಸಭಾ ಚುನಾವಣೆಗೂ ಮುನ್ನ ಮಂಗಳಾದೇವಿಯವರು ಬಿಜೆಪಿಯಲ್ಲಿದ್ದರು. ಎರಡು ಅವ ಧಿಗೆ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪ ರ್ಧಿಸಿದ್ದರು. 2018ರಲ್ಲಿ ತಮಗೆ ಬಿಜೆಪಿ ಟಿಕೆಟ್‌ ಸಿಗಲಿಲ್ಲ ಎಂದು ಮುನಿಸಿಕೊಂಡು ಬಿಜೆಪಿ ತೊರೆದು ಜೆಡಿಎಸ್‌ಗೆ ಪದಾರ್ಪಣೆ ಮಾಡಿ ಜೆಡಿಎಸ್‌ ಟಿಕೆಟ್‌ ಮೇಲೆ ಸ್ಪರ್ಧಿಸಿದ್ದರು. ಆಗ ಅರವಿಂದ ಅವರು ಕೂಡ ಬಿಜೆಪಿ ತೊರೆದು ಮಂಗಳಾದೇವಿಯವರ ಜೊತೆಗೆ ಜೆಡಿಎಸ್‌ ಗೆ ಬಂದು ಕ್ರಿಯಾಶೀಲರಾಗಿದ್ದರು. ಕಳೆದ ಗ್ರಾಪಂ ಚುನಾವಣೆಯಲ್ಲಿ ತಮ್ಮ ಪತ್ನಿಯನ್ನು ಢವಳಗಿ ಗ್ರಾಪಂನ ಅಗಸಬಾಳ ಮತಕ್ಷೇತ್ರದಿಂದ ಜೆಡಿಎಸ್‌ ಬೆಂಬಲಿತರಾಗಿ ಗೆಲ್ಲಿಸಿದ್ದರು. ನಂತರ ಢವಳಗಿ ಗ್ರಾಪಂನ ಆಡಳಿತ ಮಂಡಳಿ ಬಿಜೆಪಿ ಬೆಂಬಲಿತರ ವಶವಾಗಿತ್ತು.

ಆಗ ಇವರ ಪತ್ನಿ ಬಿಜೆಪಿ ಬೆಂಬಲಿತರನ್ನು ಬೆಂಬಲಿಸಿದ್ದರು. ಹೀಗಾಗಿ ಇವರು ಮತ್ತೆ ಮರಳಿ ಗೂಡಿಗೆ (ಬಿಜೆಪಿಗೆ) ಬರಲು ಸಿದ್ದತೆ ನಡೆಸಿ ಜೆಡಿಎಸ್‌ನಿಂದ ದೂರವಾಗತೊಡಗಿದ್ದಾರೆಯೇ ಅಥವಾ ನಿಜವಾಗಿಯೂ ಜೆಡಿಎಸ್‌ನಲ್ಲಿ ಉಸಿರುಕಟ್ಟುವ ವಾತಾವರಣ ಇದೆಯೇ ಎನ್ನುವ ಚರ್ಚೆ ತಾಲೂಕಿನಲ್ಲಿ ಶುರುವಾಗಿದೆ.

ರಾಜೀನಾಮೆ ಸಾರಾಂಶ: ಸನ್ಮಾನ್ಯ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು, ಜಾತ್ಯತೀತ ಜನತಾದಳ, ವಿಜಯಪುರ, ತಮ್ಮಲ್ಲಿ ನಾನು ಅರವಿಂದ ಕಾಸಿನಕುಂಟಿ (ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ) ವಿನಂತಿಸುವುದೇನೆಂದರೆ. ನಾನು ಹಿಂದಿನ ಪಕ್ಷವನ್ನು ತೊರೆದು ಈ ಪಕ್ಷ ಒಳ್ಳೆಯದೆಂದು ಬಂದೆ. ಈ ಪಕ್ಷದಲ್ಲಿಯೂ ಸಹ ಉಸಿರುಕಟ್ಟುವ ವಾತಾವರಣ ಇರುವುದರಿಂದ ಹಾಗೂ ನನ್ನದೆ ನಡೆಯಬೇಕು, ನನ್ನ ಕೇಳದೆ ಏನು ಮಾಡಬಾರದು ಅನ್ನುವ ಕೆಟ್ಟ ಸ್ವಭಾವ ಹೊಂದಿರುವ ವ್ಯಕ್ತಿಗಳು ಇದ್ದಾರೆ. ಬೇರೆಯವರ ಬೆಳವಣಿಗೆ ಸಹಿಸಲು ಆಗದ ಮನೋಭಾವದವರು ಈ ಪಕ್ಷದಲ್ಲಿ ಇದ್ದಾರೆ. ಇಂಥವರ ಜೊತೆಗೆ ನನಗೆ ಪಕ್ಷ ಕಟ್ಟಲು ಸಾಧ್ಯವೇ ಇಲ್ಲ. ಅದಕ್ಕಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಲು ವಿನಂತಿ.

Advertisement

ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next