Advertisement

ತುರ್ತು ನಿರ್ವಹಣೆ ಹೆಸರಿನಲ್ಲಿ ಇತರೆ ಕಾಮಗಾರಿಗೆ ಸರ್ಕಾರ ಯತ್ನ

06:48 AM Apr 27, 2019 | Lakshmi GovindaRaju |

ಬೆಂಗಳೂರು: “ತುರ್ತು ನಿರ್ವಹಣಾ ಕಾಮಗಾರಿ ಹೆಸರಿನಲ್ಲಿ ಚುನಾವಣಾ ಆಯೋಗದ ದಾರಿ ತಪ್ಪಿಸಿ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿರುವುದು ಖಂಡನೀಯ. ಇಂತಹ ಕೆಲಸಗಳನ್ನು ಬದಿಗಿಟ್ಟು ಬರ ಪರಿಸ್ಥಿತಿ ನಿರ್ವಹಣೆಗೆ ಒತ್ತು ನೀಡಬೇಕು’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಒತ್ತಾಯಿಸಿದರು.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮುಗಿದ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ನೈಸರ್ಗಿಕ ವಿಪತ್ತು, ಕುಡಿಯುವ ನೀರಿನ ಕೊರತೆ, ಅಪಘಾತಗಳು ಸಂಭವಿಸಿದಾಗ ಪರಿಹಾರ, ನಿರ್ವಹಣಾ ಕಾರ್ಯ ಕೈಗೊಳ್ಳಲು ನೀತಿ ಸಂಹಿತೆಯಡಿ ವಿನಾಯ್ತಿ ಇದೆ.

ಅದರ ನೆಪದಲ್ಲೇ ಇತರೆ ಕಾಮಗಾರಿಗಳಿಗೂ ಅನುಮತಿ ಪಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿರುವ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ಅವರು ಇತರೆ ಕಾಮಗಾರಿಗಳಿಗೆ ಟೆಂಡರ್‌ ಆಹ್ವಾನಿಸಲು ಅವಕಾಶ ನೀಡದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.

ಬೃಹತ್‌ ಮೂಲ ಸೌಕರ್ಯ ಕಾಮಗಾರಿಗಳ ಹೆಸರಿನಲ್ಲಿ ಮುಖ್ಯಮಂತ್ರಿಗಳು ತಮ್ಮ ಚುನಾವಣಾ ಖರ್ಚು- ವೆಚ್ಚವನ್ನು ಗುತ್ತಿಗೆದಾರರು ಇಲ್ಲವೇ ಇನ್ಯಾರ ಮೂಲವೋ ಪಡೆಯುವ ಪ್ರಯತ್ನ ಮಾಡಬಾರದು. ಬರಪೀಡಿತ ತಾಲೂಕುಗಳ ಘೋಷಣೆ ಬಳಿಕ ಸದನದಲ್ಲಿ ಚರ್ಚೆ ನಡೆದಿದ್ದು ಹೊರತುಪಡಿಸಿದರೆ ನಂತರ ಬರ ನಿರ್ವಹಣೆ ಕಾರ್ಯಕ್ಕೆ ಗಮನ ನೀಡಿಲ್ಲ.

ಬರಪೀಡಿತ ಪ್ರದೇಶಗಳು, ಬೆಂಗಳೂರು ಸೇರಿ ಹಲವೆಡೆ ಕುಡಿಯುವ ನೀರಿನ ತೀವ್ರ ತೊಂದರೆಯಿದೆ. ಜಾನುವಾರುಗಳು ಮೇವಿಲ್ಲದೆ ಸಂಕಷ್ಟದಲ್ಲಿವೆ. ಕೂಡಲೇ ಬರ ನಿರ್ವಹಣೆಯತ್ತ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದರು.

Advertisement

ಲಿಂಗಾಯತ- ವೀರಶೈವ ವಿಚಾರದಲ್ಲಿ ತಮ್ಮ ನಿಲುವು ಪ್ರಕಟಿಸುವಂತೆ ಗೃಹ ಸಚಿವರಿಗೆ ಕೇಳಿದರೂ ಉತ್ತರವಿಲ್ಲ. ಬದಲಿಗೆ ಅವರದೇ ಪಕ್ಷದವರು ಕಿತ್ತಾಡುತ್ತಿದ್ದಾರೆ. ಒಂದೆಡೆ ಸಚಿವ ಡಿ.ಕೆ.ಶಿವಕುಮಾರ್‌ ಕ್ಷಮೆ ಕೇಳಿದರೆ ಮತ್ತೂಂದೆಡೆ ಗೃಹ ಸಚಿವ ಎಂ.ಬಿ.ಪಾಟೀಲ್‌, ಮಾಜಿ ಸಚಿವ ವಿನಯ ಕುಲಕರ್ಣಿ ಧರ್ಮವನ್ನು ವಿಭಜಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಶ್ರುತಿ ಬೆಳ್ಳಕ್ಕಿ ಪ್ರಕರಣದಲ್ಲಿ ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾಗಿ ಎ.ಎಸ್‌.ಪೊನ್ನಣ್ಣ ಅವರನ್ನು ಸರ್ಕಾರ ನೇಮಕ ಮಾಡಿದೆ. ಮಹೇಶ್‌ ವಿಕ್ರಮ್‌ ಹೆಗ್ಡೆ ಅವರನ್ನು ವಿಚಾರಣೆ ಹೆಸರಿನಲ್ಲಿ ಎರಡು ದಿನ ಸಿಐಡಿ ಕಚೇರಿಗೆ ಕರೆಸಲಾಗಿದೆ. ಇದು ಸರ್ಕಾರದ ಸೇಡಿನ ರಾಜಕಾರಣವನ್ನು ತೋರಿಸುತ್ತದೆ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next