Advertisement

ಜಿಲ್ಲೆಯಾದ್ಯಂತ ಶ್ರೀರಾಮ ನಾಮಸ್ಮರಣೆ

05:32 PM Apr 14, 2019 | Team Udayavani |

ಚಿತ್ರದುರ್ಗ: ನಗರ ಹಾಗೂ ಜಿಲ್ಲೆಯಾದ್ಯಂತ ಶನಿವಾರ ಶ್ರೀರಾಮನವಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ವಿವಿಧ ಬಡಾವಣೆ ಮತ್ತು
ಬೀದಿಗಳಲ್ಲಿನ ರಾಮಾಂಜನೇಯ ದೇವಸ್ಥಾನ ಮತ್ತು ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

Advertisement

ಶ್ರೀರಾಮನ ಜನ್ಮದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಭಕ್ತರು ಶ್ರೀರಾಮ ನಾಮಸ್ಮರಣೆ ಮಾಡಿದರು.
ಬುರುಜನಹಟ್ಟಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ
ಶ್ರೀರಾಮ ದೇವರ ಭಾವಚಿತ್ರ ಹಾಗೂ ಆಂಜನೇಯಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ನೆಹರು ನಗರ ಒಂದನೇ ತಿರುವಿನಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನಡೆದ ಬಳಿಕ ರಾಮದೇವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಮಧ್ಯಾಹ್ನ ಭಕ್ತಾದಿಗಳಿಗಾಗಿ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ
ಸ್ವೀಕರಿಸಿದರು. ರಾಮನವಮಿ ಹಿಂದಿನ ದಿನ ಭಕ್ತಾದಿಗಳಿಂದ ಸಾಮೂಹಿಕ ರುದ್ರಾಭಿಷೇಕ ಕಾರ್ಯಕ್ರಮ ನಡೆಯಿತು. ಸ್ಟೇಡಿಯಂ
ರಸ್ತೆಯಲ್ಲಿನ ಆಂಜನೇಯಸ್ವಾಮಿ ದೇವಸ್ಥಾನ, ಮದಕರಿನಾಯಕ
ವೃತ್ತದಲ್ಲಿರುವ ರಕ್ಷಾ ಆಂಜನೇಯ ಸ್ವಾಮಿ, ರಂಗಯ್ಯನಬಾಗಿಲು ಬಳಿ ಇರುವ ರಾಮಮಂದಿರ, ಆಂಜನೇಯ ಸ್ವಾಮಿ, ಗಣಪತಿ ದೇವಸ್ಥಾನ, ಭೋವಿ ಗುರುಪೀಠದ ಸಿದ್ಧರಾಮೇಶ್ವರ ಮಠದ
ಆವರಣದಲ್ಲಿರುವ ರಾಮಮಂದಿರ, ಬೆಟ್ಟದ ಆಂಜನೇಯ ಸ್ವಾಮಿ, ತಮಟಕಲ್ಲಿನಲ್ಲಿರುವ ಆಂಜನೇಯ ಸ್ವಾಮಿ, ಜಿಲ್ಲಾ ಕ್ರೀಡಾಂಗಣ
ರಸ್ತೆಯ ಆಂಜನೇಯ ಸ್ವಾಮಿ, ವಾಸವಿ ವಿದ್ಯಾಸಂಸ್ಥೆ ಹತ್ತಿರವಿರುವ ರಾಮಮಂದಿರ, ಆಂಜನೇಯ ಸ್ವಾಮಿ, ಆನೆಬಾಗಿಲು
ಬಳಿಯ ಆಂಜನೇಯ ಸ್ವಾಮಿ, ಬರಗೇರಿ ಆಂಜನೇಯ ಸ್ವಾಮಿ ಸೇರಿದಂತೆ ನಗರದ ವಿವಿಧ ರಾಮ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ರಾಮ, ಲಕ್ಷ್ಮಣ, ಸೀತಾ ಮಾತೆ ಮತ್ತು ಆಂಜನೇಯಸ್ವಾಮಿ ಮೂರ್ತಿಗಳಿಗೆ
ಪುಷ್ಪಾಲಂಕಾರ ಮಾಡಲಾಗಿತ್ತು. ಭಕ್ತಾದಿಗಳಿಗೆ ಪಾನಕ ಕೊಸುಂಬರಿ ವಿತರಿಸಲಾಯಿತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಭಕ್ತಾಗಳಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಶನಿವಾರ ನಡೆದ ರಾಮನವಮಿ
ಆಚರಣೆಯಲ್ಲಿ ನಗರದ ಜೋಗಿಮಟ್ಟಿ ರಸ್ತೆ ಸಂಪೂರ್ಣ ಕೇಸರಿಮಯವಾಗಿತ್ತು. ಶ್ರೀರಾಮ, ಆಂಜನೇಯ, ಓಂ ಚಿಹ್ನೆಯುಳ್ಳ
ಬಾವುಟಗಳು ರಾರಾಜಿಸಿದವು. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next