Advertisement

‘ಚುನಾವಣೆ ಹಬ್ಬದಂತಿರಲಿ’

03:26 PM Apr 01, 2019 | Team Udayavani |

ಬೆಳ್ತಂಗಡಿ : ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಅಚರಿಸುವ ಮೂಲಕ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಎಚ್‌.ಆರ್‌. ನಾಯಕ್‌ ಹೇಳಿದರು.

Advertisement

ಉಜಿರೆ ಎಸ್‌.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗೆ ಚುನಾವಣಾ ಆಯೋಗದಿಂದ ರವಿವಾರ ಹಮ್ಮಿಕೊಂಡ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮತದಾರರಲ್ಲಿ ಯಾವುದೇ ರೀತಿ ಬೇಧ-ಭಾವ ಇಟ್ಟುಕೊಳ್ಳದೆ ಸಮಾನ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ, ಗೊಂದಲವಿಲ್ಲದ ಚುನಾವಣೆ ವಾತಾವರಣ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಿಬಂದಿ ಸಹಕರಿಸಬೇಕು ಎಂದರು.

ಸಮಯಪಾಲನೆಗೆ ಆದ್ಯತೆ
ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ‘ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿ ಸಮಯ ಪಾಲನೆಗೆ ಆದ್ಯತೆ ನೀಡಬೇಕು. ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಯನ್ನು ಸಮರ್ಪಕವಾಗಿ ಅರ್ಥೈಸಿಕೊಂಡರೆ ಇನ್ನೊಬ್ಬರಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ’ ಎಂದರು. ಭುವನೇಶ್‌ ಹಾಗೂ ವೆಂಕಟರಮಣ ಶರ್ಮ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸ್ವೀಪ್‌ ಅಧಿಕಾರಿ ಕುಸುಮಾಧರ್‌, ಗಣಪತಿ ಭಟ್‌ ಕುಳಮರ್ವ, ಅಜಿತ್‌ ಕುಮಾರ್‌ ಕೊಕ್ರಾಡಿ, ಶಿವಶಂಕರ್‌, ಪ್ರಸನ್ನ, ಶಂಭುಶಂಕರ್‌ ಮತದಾನದ ಪ್ರಕ್ರಿಯೆಗಳು ಹಾಗೂ ವಿವಿ ಪ್ಯಾಟ್‌ ಜೋಡಣೆ, ಸಮಯ ಪರಿಪಾಲನೆ, ನಿಯಮಾವಳಿ ಕುರಿತು ಮಾಹಿತಿ ನೀಡಿದರು. ಶಿಕ್ಷಕ ಧರಣೇಂದ್ರ ಕೆ. ಜೈನ್‌ ಪ್ರಾಸ್ತಾವಿಸಿದರು. ಸಹಾಯಕ ಚುನಾವಣೆ ಅಧಿಕಾರಿಯ ಸಹಾಯಕ ಸುಭಾಶ್‌ ಜಾಧವ್‌ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.

10 ಕೊಠಡಿಗಳಲ್ಲಿ ಏಕಕಾಲದಲ್ಲಿ ತರಬೇತಿ
10 ಕೊಠಡಿಗಳಲ್ಲಿ ಏಕಕಾಲದಲ್ಲಿ ತರಬೇತಿ ಕಾರ್ಯಾಗಾರ ಆರಂಭಗೊಂಡು ಸಂಜೆಯವರೆಗೆ ನಡೆಯಿತು. 24 ಸೆಕ್ಟರ್‌ ಅಧಿಕಾರಿಗಳು 6 ಮಂದಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಹಮ್ಮಿಕೊಳ್ಳಲಾಯಿತು. ತಾಲೂಕಿನಲ್ಲಿ ಒಟ್ಟು 241 ಮತಗಟ್ಟೆಗಳಿಂದ ಮೊದಲ ಹಂತವಾಗಿ 268 ಪ್ರಥಮ ಮತಗಟ್ಟೆ ಸಿಬಂದಿ 404 ಸಹಾಯಕ ಮತಗಟ್ಟೆ ಸಿಬಂದಿ ತರಬೇತಿಯಲ್ಲಿ ಪಾಲ್ಗೊಂಡರು.

Advertisement

ಮಾಹಿತಿ ಕೈಪಿಡಿ ಹಸ್ತಾಂತರ
ಅಧ್ಯಕ್ಷ ಅಧಿಕಾರಿಯವರ ಮಾಹಿತಿ ಕೈಪಿಡಿಯನ್ನು ಸಿಬಂದಿಗೆ ಹಸ್ತಾಂತರಿಸುವ ಮೂಲಕ ಸಹಾಯಕ ಚುನಾವಣಾಧಿಕಾರಿ ಎಚ್‌.ಆರ್‌. ನಾಯಕ್‌ ಕಾರ್ಯಾಗಾರ ಉದ್ಘಾಟಿಸಿದರು. ತರಬೇತಿ ಪಡೆದ ಮತಗಟ್ಟೆ ಸಿಬಂದಿ, ತಾನು ಈ ಹಿಂದೆ ಹಲವಾರು ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೆ ಎಂಬುದನ್ನು ಮರೆತು ಇದೇ ಮೊದಲ ಬಾರಿಗೆ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂಬಂತೆ ಕೆಲಸ ನಿರ್ವಹಿಸಿ ಎಂದು ಸಿಬಂದಿಗೆ ಅವರು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next