Advertisement

ಗಲಾಟೆಯಿಂದ ಲಾಭ ಜಾಸ್ತಿ

09:02 AM Apr 30, 2019 | Hari Prasad |

ಬಸವನ ಬಾಗೇವಾಡಿಯ ಗುರು ಸಿದ್ಧಪ್ಪನವರು ಗಲಾಟೆ ಹೂವನ್ನು ಬೆಳೆಯುತ್ತಿದ್ದಾರೆ. ಕೈತುಂಬ ಫ‌ಸಲು, ಜೇಬಿನ ತುಂಬ ಲಾಭ ಗಳಿಸುತ್ತಿರುವ ಇವರು ಮಾದರಿ ರೈತರಾಗಿದ್ದಾರೆ.

Advertisement

ಬರದ ಜಿಲ್ಲೆಯೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಬಿಸಿಲ ತಾಪಮಾನ ಗರಿಷ್ಠ 35ರಷ್ಟು ಇದೆ. ಹೀಗಿದ್ದರೂ, ಜಿಲ್ಲೆಯಯ ರೈತರು ಸುಮ್ಮನೆ ಕೂತಿಲ್ಲ. ಬಸವನ ಬಾಗೇವಾಡಿ ತಾಲೂಕಿನ ಗುರುಸಿದ್ದಪ್ಪ ಹೂಗಾರರನ್ನೇ ತಗೊಳ್ಳಿ. ಇವರಿಗೆ ಬದುಕಿನಲ್ಲಿ ಯಾವ “ಗಲಾಟೆ’ಯೂ ಇಲ್ಲ. ಏಕೆಂದರೆ, ಇವರು ನಂಬಿರುವ ಗಲಾಟೆ ಹೂ ಕೈ ತುಂಬ ಲಾಭ ತಂದು ಕೊಡುತ್ತಿದೆ.

ಮೊದಲು ತಮ್ಮ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯುತ್ತಿದ್ದರು. ಸರಿಯಾದ ಬೆಲೆ ಸಿಗದೆ ಕೈ ಸುಟ್ಟುಕೊಂಡರು. ಗೆಳೆಯನ ಸಲಹೆಯಂತೆ ಅರ್ಧ ಎಕರೆಯಲ್ಲಿ ಬೆಳೆದ ಗಲಾಟೆ ಹೂವಿನಿಂದ ಮಾದರಿ ರೈತರಾಗಿದ್ದಾರೆ. ಇವರು ಮಾಸ್ಟರ್‌ ಆಫ್ ಆರ್ಟ್ಸ್ನಲ್ಲಿ ಡಿಪ್ಲೊಮೋ ಪದವಿ ಪಡೆದಿದ್ದಾರೆ. ಕೆಲಸ ಸಿಗದೇ ಇದ್ದುದರಿಂದ ಕೃಷಿ ಕಡೆ ವಾಲಿದರು. ಗುರುಸಿದ್ದಪ್ಪ ಅವರ ತೋಟದಲ್ಲಿ ಕಾರಣ ಎರಡು ಕೊಳವೆ ಬಾವಿ ಪೈಕಿ ಒಂದರಲ್ಲಿ ಮಾತ್ರ ನೀರಿದೆ. ಇದರಿಂದ ದೀರ್ಘಾವಧಿ ಬೆಳೆ ಬೆಳೆಯಲು ಅಸಾಧ್ಯವೆಂದು ತಿಳಿದು ಕೇವಲ ಅರ್ಧ ಎಕರೆಯಲ್ಲಿ ಮಾತ್ರ ಗಲಾಟೆ ಹೂವನ್ನು ಬೆಳೆಯಲು ನಿರ್ಧರಿಸಿದರು.

70 ರೂ.ಗೆ 100 ಸಸಿಯಂತೆ 5 ಸಾವಿರ ಸಸಿ ಖರೀದಿಸಿ ನಾಟಿ ಮಾಡಿದರು. ಹತ್ತು ದಿನದ ನಂತರ ಹಾಯಿಸುವ ನೀರಿನೊಂದಿಗೆ ಸಾವಯವ ಗೊಬ್ಬರ ಅಥವಾ ಡಿಎಪಿ ಗೊಬ್ಬರವನ್ನ ನೀಡಿದ್ದಾರೆ. ಎರಡು ತಿಂಗಳವರೆಗೆ ಸಸಿಗಳಿಗೆ 3 ದಿನಕ್ಕೆ ಒಂದು ಸಾರಿಯಾದರೂ ಈ ರೀತಿ ನೀರು ಹಾಯಿಸಬೇಕಂತೆ. 60 ದಿನಗಳ ನಂತರ ಸಸಿಗಳು ಹೂ ಬಿಡಲು ಆರಂಭಿಸುತ್ತವೆ.

ಸರಿಯಾಗಿ 3 ತಿಂಗಳು ಆಗುವಷ್ಟರಲ್ಲಿ ಫ‌ಸಲು ಕೈಗೆ. ಈ ಹೂವು ನೋಡಲು ಸೇವಂತಿಗೆಯಂತೆ ಕಾಣುತ್ತದೆ. ಇದರಲ್ಲಿ ಹಳದಿ, ಮತ್ತು ಕೆಂಪು ಹೀಗೆ ಬೇರೆ ಬೇರೆ ಬಣ್ಣಗಳ ಹೂವಿಗೆ ಬೇಡಿಕೆ ಹೆಚ್ಚು. ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆ ಗುರುಸಿದ್ದಪ್ಪರ ಗಲಾಟೆ ಹೂ ರವಾನೆಯಾಗುತ್ತದೆ. ಒಟ್ಟಾರೆ ಈ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದರೂ ಇಲ್ಲಿಯ ರೈತರು ಸಮೃದ್ದ ಬೆಳೆ ಬೆಳೆದು ಸುಂದರ ಬದುಕನ್ನು ಕಡ್ಡಿಕೊಂಡಿದ್ದಾರೆ.

Advertisement

ಸಸಿ ನಾಟಿ ಮಾಡುವುದು ಹೇಗೆ ?
ಮೊದಲು ಜಮೀನನ್ನ ಹದಗೊಳಿಸಿರಬೇಕು. ಬಳಿಕ ಟ್ರ್ಯಾಕ್ಟರ್‌ ಮೂಲಕ 3 ಅಡಿ ಅಂತರದಲ್ಲಿ ಸಾಲುಗಳನ್ನ ಬಿಡಿಸಬೇಕು. ಅವು ಹಸಿಹಸಿಯಾಗಿರುವುದಕ್ಕೆ ನೀರು ಹಾಯಿಸಿ, 2 ಅಡಿ ಅಳತೆಗೊಂದರಂತೆ ಸಸಿ ನಾಟಿ ಮಾಡಬೇಕು. “ಜಮೀನಿನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೆ ಡ್ರಿಪ್‌ ಇರಿಗೇಷನ್‌ ಮಾಡುವುದು ಸೂಕ್ತ. ನೀರು ಜಾಸ್ತಿ ಇದ್ದರೆ ನಮ್ಮಂತೆ ಹಾಯಿಸುವುದರ ಮೂಲಕ ನೀರುಣಿಸಬಹುದು. 3 ದಿನಕ್ಕೆ ಒಮ್ಮೆ ನೀರು ಬಿಟ್ಟರೆ ಸಾಕು. ಸಸಿ ನಾಟಿಮಾಡಿದ 2 ತಿಂಗಳಲ್ಲಿ ಗೊಬ್ಬರ ಕೊಡಬೇಕು. 3 ತಿಂಗಳಲ್ಲಿ ಬಂಪರ್‌ ಬೆಳೆ ಬರುತ್ತದೆ ಎನ್ನುತ್ತಾರೆ ಗುರುಸಿದ್ದಪ್ಪ.

ಇವರಿಗೆ ಅರ್ಧ ಎಕರೆಗೆ ಅಂದಾಜು 6 ರಿಂದ 7 ಸಾವಿರ ಖರ್ಚಾಗಿದ್ದು, 60 ರಿಂದ 70 ಸಾವಿರದವರೆಗೂ ಗಳಿಸಬಹುದಂತೆ. 3 ತಿಂಗಳ ಬಳಿಕ ಹೂ ಕಟಾವು ಮಾಡಿ ಮಾರುಕಟ್ಟೆ ಸಾಗಿಸಬಹುದು. ಅಮಾವಾಸ್ಯೆ ಮತ್ತು ಹಬ್ಬ ಹರಿದಿನಗಳಲ್ಲಿ ಕೆ.ಜಿಗೆ ಅಂದಾಜು 100 ರಿಂದ 150 ರವರೆಗೂ ಮಾರಾಟವಾಗುತ್ತದೆ. ಇನ್ನುಳಿದ ದಿನಗಳಲ್ಲಿ ಕನಿಷ್ಠ 30 ರಿಂದ 60 ರೂ ವರೆಗೆ ಮಾರಾಟವಾಗುತ್ತದೆ.

— ಪ್ರಶಾಂತ್‌ ಜಿ. ಹೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next