ವಿಜಯಪುರ: ಶನಿವಾರ ಬೆಳಿಗ್ಗೆ 6.22ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 4.4 ಪ್ರಮಾಣದಲ್ಲಿ ಕಂಪನವಾಗಿದೆ. ಈ ಭೂಕಂಪ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಕೇಂದ್ರೀಕೃತವಾಗಿತ್ತು. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಪರಿಸರದಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ತನ್ನ ಪ್ರಭಾವ ಬೀರಿದ್ದು, ಜಿಲ್ಲೆಯ ಜನರು ಆತಂಕದಲ್ಲಿ ಬದುಕುವಂತೆ ಮಾಡಿದೆ.
ಭೂಕಂಪ ಸಂಭವಿಸುತ್ತಲೇ ಜಿಲ್ಲಾಡಳಿತ ತಹಶಿಲ್ದಾರರಿಂದ ಸ್ಥಾನಿಕ ವರದಿಗೆ ಸೂಚಿಸಿದ್ದು, ವಿಜಯಪುರ, ತಿಕೋಟಾ, ಬಬಲೇಶ್ವರ, ಚಡಚಣ ಸೇರಿದಂತೆ ತಹಶಿಲ್ದಾರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ವಿವಿಧ ಬಡಾವಣೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುವ ಜೊತೆಗೆ, ಜನರಲ್ಲಿ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದಾರೆ.
ಈ ಹಿಂದೆ ವಿಜಯಪುರ ಜಿಲ್ಲೆಯ ಮನಗೂಳಿ, ಬಸವನಬಾಗೇವಾಡಿ ಪರಿಸರದಲ್ಲಿ ಕೇಂದ್ರಿತವಾಗಿದ್ದ ಭೂಕಂಪನದ ಬಿಂದು, ಇದೀಗ ವಿಜಯಪುರ ನಗರ ಹಾಗೂ ಸುತ್ತಲೂ ಕೇಂದ್ರೀಕೃತವಾಗುತ್ತಿದೆ ಎನ್ನಲಾಗಿದೆ. ವಿಜಯಪುರ ನಗರ ಹಾಗೂ ಸುತ್ತಲಿನ ಗ್ರಾಮೀಣ ಪರಿಸರದಲ್ಲಿ ಪದೇ ಪದೆ ಭೂಕಂಪನ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ:ತಿಂಗಳ ಹಿಂದೆ ಕಾಣೆಯಾಗಿದ್ದ ಕಮಾಂಡೋ ವಿಂಗ್ ಸೇನಾಧಿಕಾರಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ
ಶನಿವಾರ ಸಂಭವಿಸಿದ ಭೂಕಂಪನ ಶಿರನಾಳ, ಮಖಣಾಪುರ, ತಿಡಗುಂದಿ, ಡೊಮನಾಳ ಮಧ್ಯದಲ್ಲಿ ಕನ್ನೂರ ಗ್ರಾಮದ ಪರಿಸರದಲ್ಲಿ ಕೇಂದ್ರಿತ ಆಗಿರುವುದನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಅಧಿಕೃತ ಮಾಹಿತಿ ನೀಡಿದೆ.
ವಿಜಯಪುರ ನಗರದಲ್ಲಿ ಸೇರಿದಂತೆ ಜಿಲ್ಲೆಯಲ್ಲಿ ಭೂಕಂಪನ ಪ್ರಮಾಣ ಹೆಚ್ಚುತ್ತಲೇ ಸಾಗಿದ್ದು, ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಜಿಲ್ಲೆಯಲ್ಲಿ ಮಣ್ಣಿನ ಹಾಗೂ ಹಳೆಯ ಮನೆಗಳೇ ಹೆಚ್ಚಿರುವ ಕಾರಣ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಪ್ರಮಾಣ ಇನ್ನೂ ಹೆಚ್ಚಿದರೆ ದೊಡ್ಡ ಪ್ರಮಾಣದ ಹಾನಿಯಾಗುವ ಅಪಾಯವಿದೆ ಎಂದು ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ ಭೂಕಂಪ ಸಂಭವಿಸಿರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದ್ದು, ಯಾವುದೇ ಆಸ್ತಿ, ಜೀವಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಶನಿವಾರದ ಭೂಕಂಪನ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ತನ್ನ ಪ್ರಭಾವ ಬೀರಿದೆ. ವಿಜಯಪುರ ಜಿಲ್ಲೆಯ ತಿಕೋಟಾ, ವಿಜಯಪುರ, ಬಬಲೇಶ್ವರ, ಮುದ್ದೇಬಿಹಾಳ, ಇಂಡಿ, ಚಡಚಣ, ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ, ಸೊಲ್ಲಾಪುರ ಜಿಲ್ಲೆಯ ಪಂಢರಪುರ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಭೂಕಂಪದ ಅನುಭವ ಆಗಿದೆ.