Advertisement

ಉದ್ಯಾನಗಳಲ್ಲಿ ಕೇಳಿಸದ ಪ್ರೇಮಪಕ್ಷಿಗಳ ಕಲರವ

03:44 PM Feb 15, 2021 | Team Udayavani |

ಹುಬ್ಬಳ್ಳಿ: ಸದಾ ಜೋಡಿ ಹಕ್ಕಿಗಳಿಂದ ತುಂಬಿರುತ್ತಿದ್ದ ನಗರದ ಉದ್ಯಾನಗಳು ಪ್ರೇಮಿಗಳ ದಿನವಾದ ರವಿವಾರ ಬಿಕೋ ಎನ್ನುತ್ತಿದ್ದವು. ಪ್ರೇಮ ಪಕ್ಷಿಗಳ ಚಿಲಿಪಿಲಿಯ ಸದ್ದು ಇರಲಿಲ್ಲ. ಹೆಚ್ಚಿನವರು ನಗರ ಹೊರವಲಯದತ್ತ ಮುಖ ಮಾಡಿದ್ದರು.

Advertisement

ಇನ್ನೂ ಕೆಲವರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕಿದ್ದರು. ಜೋಡಿಯಾಗಿ ಕಾಲ ಕಳೆಯಲು ಬಂದ ಪ್ರೇಮಿಗಳಿಗೆ ಒಂದೆಡೆ ಉದ್ಯಾನಗಳು ಬಂದ್‌ ಆಗಿದ್ದವು. ನೃಪತುಂಗ ಬೆಟ್ಟ ಉದ್ಯಾನವನವನ್ನೂ ಬಂದ್‌ ಮಾಡಲಾಗಿತ್ತು. ಇನ್ನು ಗೇಟ್‌ ತೆರೆದಿದ್ದ ಉದ್ಯಾನಗಳ ಮುಂದೆ ಪೊಲೀಸರ ಬಿಗಿ ಪಹರೆಯಿಂದಾಗಿ ಜೋಡಿ ಹಕ್ಕಿಗಳು ಅತ್ತ ಸುಳಿಯಲಿಲ್ಲ. ಇಂದಿರಾ ಗಾಜಿನಮನೆ ಉದ್ಯಾನವನ, ಉಣಕಲ್ಲ ಕೆರೆ ಉದ್ಯಾನವನಗಳು ಖಾಲಿಯಾಗಿದ್ದವು.

ಕೆಲ ಉದ್ಯಾನಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವೇಶ ದ್ವಾರಗಳಿಗೆ ಬೀಗ ಜಡಿಯಲಾಗಿತ್ತು. ಇಲ್ಲಿಯೂ ಕೂಡ ಪೊಲೀಸರ ಕಾವಲು ಏರ್ಪಡಿಸಲಾಗಿತ್ತು. ಕೆಲ ಸಂಘಟನೆಗಳು ಉದ್ಯಾನದಲ್ಲಿ ಜೋಡಿಯಾಗಿ ಕಂಡುಬಂದರೆ ವಿವಾಹ ಮಾಡಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಲ್ಲೆಡೆ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಗಮಿಸುವ ಜನರಿಗೆ ಹಾಗೂ ಜೋಡಿಗಳಿಗೆ ಪೊಲೀಸರು ತಿಳಿ ಹೇಳಿ ವಾಪಸ್‌ ಕಳುಹಿಸುತ್ತಿರುವುದು ಕಂಡುಬಂದಿತು.

ಇನ್ನು ನೃಪತುಂಗ ಬೆಟ್ಟದ ಹೊರಭಾಗದಲ್ಲಿ ಕುಟುಂಬದೊಂದಿಗೆ ಆಗಮಿಸಿದ್ದ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿರುವುದು ಕಂಡುಬಂತು. ನಾವು ರವಿವಾರ ರಜೆ ಇರುವ ಕಾರಣ ಮಕ್ಕಳೊಂದಿಗೆ ಆಗಮಿಸಿದ್ದು ಬಿಡುವಂತೆ ಮನವಿ ಮಾಡಿದರು. ಆದರೆ ಪೊಲೀಸರು ಒಳಗಡೆ ಯಾರನ್ನೂ ಬಿಡಲು ಅವಕಾಶವಿಲ್ಲ ಎಂದು ಹೇಳಿ ಅಲ್ಲಿಂದ ಕಳುಹಿಸಿದರು. ಪ್ರೇಮಿಗಳ ದಿನ ರವಿವಾರ ಬಂದಿದ್ದರಿಂದ ಕಾಲೇಜು ಕ್ಯಾಂಪಸ್‌ಗಳಲ್ಲೂ ಪ್ರೇಮ ಸಂಭ್ರಮವಿರಲಿಲ್ಲ. ಮಾಲ್‌-ಹೋಟೆಲ್‌ಗ‌ಳಲ್ಲೂ ಜೋಡಿಹಕ್ಕಿಗಳ ಸಂಖ್ಯೆ ಕಡಿಮೆಯಿತ್ತು

ವ್ಯಾಲೆಂಟೈನ್ಸ್‌ ಡೇ ವಿರೋಧಿಸಿ ಪಾದಪೂಜೆ

Advertisement

ಧಾರವಾಡ: ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀರಾಮ ಸೇನೆ ವತಿಯಿಂದ ಹಿರಿಯರ ಪಾದಪೂಜೆ ಕೈಗೊಳ್ಳುವ ಮೂಲಕ ವ್ಯಾಲೆಂಟೈನ್ಸ್‌ ಡೇ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಯಿತು.

ಹಿರಿಯರ ಪಾದಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆಯಲಾಯಿತು. ನಂತರ ನಗರದ ಕೆಸಿ ಪಾರ್ಕ್‌, ಸಾಧನಕೇರಿ ಪಾರ್ಕ್‌ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು. ಶ್ರೀರಾಮ ಸೇನೆ ಮುಖಂಡರಾದ ಮಂಜು ಕಾಟಕರ್‌, ಮಹಾಲಿಂಗ ಅಗಳಿ, ಅಣ್ಣಪ್ಪ ದೇವಟಗಿ, ರಾಜು ಗಾಡಗೋಳಿ, ವಿಜಯ ದೇವರಮನಿ, ಬುದ್ಧು ಪಾಟೀಲ್‌, ಮೈಲಾರ ಗುಡ್ಡಪ್ಪನವರ, ರಾಮದಾಸ್‌ ದವಳಿ, ವಿಶ್ವಾಸ ಮೊದಲಾದವರಿದ್ದರು.

ಆಪ್‌ನಿಂದ “ಲವ್‌ ಹುಬ್ಬಳ್ಳಿ-ಧಾರವಾಡ’ ಪಾದಯಾತ್ರೆ

ಹುಬ್ಬಳ್ಳಿ: ವ್ಯಾಲೆಂಟೈನ್ಸ್‌ ಡೇ ನಿಮಿತ್ತ ಆಮ್‌ ಆದ್ಮಿ ಪಕ್ಷದ ವತಿಯಿಂದ ವಿಶ್ವದರ್ಜೆಯ ಹು-ಧಾ ಕಟ್ಟುವ ಸಂಕಲ್ಪದ ಜಾಗೃತಿ ಮೂಡಿಸುವ ಉದ್ದೇಶದಿಂದ “ಐ ಲವ್‌ ಹುಬ್ಬಳ್ಳಿ-ಧಾರವಾಡ’ ಪಾದಯಾತ್ರೆ ನಡೆಯಿತು.

ಚನ್ನಮ್ಮ ವೃತ್ತದಲ್ಲಿ ವಿವಿಧ ಧರ್ಮದ ಗುರುಗಳು ಪಾದಯಾತ್ರೆಗೆ ಚಾಲನೆ ನೀಡಿದರು. ಲ್ಯಾಮಿಂಗ್ಟನ್‌ ರಸ್ತೆ, ದುರ್ಗದ ಬಯಲು ವೃತ್ತ, ನಗರೇಶ್ವರ ದೇವಸ್ಥಾನ ಮಾರ್ಗವಾಗಿ ಪ್ರಮುಖ ರಸ್ತೆಗಳಲ್ಲಿ ತೆರಳಿ ಹಳೇಹುಬ್ಬಳ್ಳಿ ಸರ್ಕಲ್‌ ಮಾರ್ಗವಾಗಿ ಸಿದ್ಧಾರೂಢ ಮಠಕ್ಕೆ ತೆರಳಿ ಬಹಿರಂಗದ ಸಮಾವೇಶದ ಮೂಲಕ ಮುಕ್ತಾಯಗೊಂಡಿತು.

ಪಾದಯಾತ್ರೆಯುದ್ದಕ್ಕೂ ಪ್ರಮುಖ ವೃತ್ತದಲ್ಲಿ ಬಹಿರಂಗ ಸಮಾವೇಶಗಳು ನಡೆದವು. ಪಾದಯಾತ್ರೆಗೆ ಚಾಲನೆ ನೀಡಿದ ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಪ್ರೇಮಿಗಳ ದಿನದಂದು ಐ ಲವ್‌ ಹುಬ್ಬಳ್ಳಿ-ಧಾರವಾಡ ಅಭಿಯಾನ ಉತ್ತಮವಾಗಿದೆ. ನಗರದ ಬಗ್ಗೆ ಹೆಮ್ಮೆ ಹುಟ್ಟಿಸುವ ಅಭಿಯಾನವಾಗಿದ್ದು, ಮುಂದಿನ ಹು-ಧಾ ಹೇಗಿರಬೇಕು? ಇರುವ ನಗರವನ್ನು ಹೇಗೆ ಕಾಪಾಡಿಕೊಳ್ಳಬೇಕು? ಎನ್ನುವ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯವವಾಗಿದೆ ಎಂದರು.

ಇಸ್ಲಾಂ ಧರ್ಮ ಗುರು ಮೌಲಾನ್‌ ಸಯ್ಯದ್‌ ಶೇಖ್‌ ಮಾತನಾಡಿ, ಹಿಂದೂ, ಮುಸ್ಲಿಂ, ಸಿಖ್‌, ಕ್ರಿಶ್ಚನ್‌ ಎನ್ನದೆ ಎಲ್ಲರೂ ಒಂದೇ ಎಂದು ಬಾಳುವ ಮನೋಭಾವನೆಯೇ ಭಾರತ. ಅವಳಿನಗರದ ಅಭಿವೃದ್ಧಿ  ಅಭಿಯಾನಕ್ಕೆ ಆಮ್‌ ಆದ್ಮಿಯವರು ಪ್ರೀತಿಯ ದಿನದಂದೇ ಚಾಲನೆ ನೀಡಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಇದನ್ನೂ ಓದಿ :ಅಧಿಕಾರಕ್ಕಿಂತ ಅಂತರಂಗದ ಮೌಲ್ಯವೇ ಹೆಚ್ಚು

ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಎಲ್ಲರೂ ಒಗ್ಗೂಡಿ ಹು-ಧಾ ಕಟ್ಟುವ ಅವಶ್ಯಕತೆ ಇದೆ. ನಗರದಲ್ಲಿ ಪ್ರತಿಯೊಂದು ಯೋಜನೆಯಲ್ಲಿ ದೂರದೃಷ್ಟಿ ಇಲ್ಲದಂತಾಗಿದೆ. ಈ ವರ್ಷ ಮಾಡಿದ ರಸ್ತೆಯನ್ನು ಮುಂದಿನ ವರ್ಷದೊಳಗೆ ಅಗೆದು ಮೂರಾಬಟ್ಟೆ ಮಾಡಿರುತ್ತಾರೆ. ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳಿಗೆ ಜನರ ಹಣದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ನಿಸಾರ್‌ ಅಹಮ್ಮದ್‌ ಛಗನ, ನವೋದ್ಯಮಿ ಉದ್ಯಮದ ಸಂಸ್ಥಾಪಕರಾದ ಡಾ| ನೀಲಂ ಮಹೇಶ್ವರಿ, ಶಶಿಕುಮಾರ ಕುಂದನ ಮಾತನಾಡಿದರು. ಪ್ರತಿಭಾ ದಿವಾಕರ, ಶಶಿಕುಮಾರ್‌ ಸುಳ್ಳದ, ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಶರೀಫ್‌ ಸಾಬ ಮಡಿಕೇಶ್ವರ, ನವೀನಸಿಂಗ್‌ ರಜಪೂತ, ಶಶಿಕುಮಾರ್‌ ಬಾಗಲಕೋಟೆ, ವಿಜಯಲಕ್ಷ್ಮೀ ಹೊಳ್ಳೆನ್ನವರ, ವಿದ್ಯಾ ನಾಡಿಗೇರ, ಗುರುನಾಥ ನಾಯಕ, ಲಕ್ಷ್ಮಣ ರಾಥೋಡ, ವಿಜಯ ಸಾಯಿ, ತ್ಯಾಗರಾಜ, ಅಬ್ದುಲ್‌, ಮೆಹಬೂಬ್‌ ಹರವಿ, ಅಶ್ವಿ‌ನ್‌ ಕುಬಸದಗೌಡರ, ಲತಾ ಅಂಗಡಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next