ಪಣಜಿ: ಈ ಬಾರಿಯ ಭಾರತೀಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ [ಇಫಿ] ಪ್ರೇಕ್ಷಕರನ್ನು ಮತ್ತು ಕುತೂಹಲಿಗರನ್ನು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವುದು ಇಫಿ ಸುವರ್ಣ ವರ್ಷ ಕುರಿತಾದ ಇಂಟರ್ಯಾಕ್ಟಿವ್ ಪ್ರದರ್ಶನ.
ಕಲಾ ಅಕಾಡೆಮಿ ಆವರಣದಲ್ಲಿ ರೂಪಿಸಲಾದ ಈ ಪ್ರದರ್ಶನ ಮಳಿಗೆಯಲ್ಲಿ ಒಳಹೊಕ್ಕರೆ ಇಫಿ 50 ವರ್ಷಗಳಲ್ಲಿ ನಡೆದು ಬಂದ ದಾರಿ ತಿಳಿಯಬಲ್ಲದು.
ಈ ಪ್ರದರ್ಶನದಲ್ಲಿ ವಿಶೇಷವೆಂದರೆ ವಿದ್ಯುನ್ಮಾನ ತಂತ್ರಜ್ಣಾನವನ್ನು ಬಳಸಿಕೊಂಡು ರೂಪಿಸಿರುವುದು. ಇಫಿಯ 50 ವರ್ಷದ ಸಂಗತಿಗಳನ್ನು ನಿಮಗಿದು ಗೊತ್ತೇ ಎಂಬ ಮಾದರಿ ಮೂಲಕ ಹೇಳುತ್ತಾ ಹೋದರೆ, ಹೆಬ್ಬಾಗಿಲು ತುಂಬಾ ಇಫಿಯಲ್ಲಿ ಪ್ರದರ್ಶಿತವಾದ ಪ್ರಮುಖ ಚಿತ್ರಗಳ ವಿದ್ಯುನ್ಮಾನ ಪೋಸ್ಟರ್‌ಗಳು ಸ್ವಾಗತಿಸುತ್ತವೆ. ಅದರಲ್ಲಿ ಕನ್ನಡದ ಸ್ಕೂಲ್ ಮಾಸ್ಟರ್ ಸಹ ವಿಜೃಂಭಿಸುತ್ತಿದೆ.
ಬಳಿಕ ನಿಮಗೆ ಸಿಗುವುದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಬಗ್ಗೆ. ಅಲ್ಲಿ ಕನ್ನಡದ ಮೇರು ನಟ ಡಾ. ರಾಜಕುಮಾರ್ ಬಗ್ಗೆಯೂ ಇದೆ. ಅದಾಗಿ ಇಫಿಯ ಮನೆಯೊಳಗೆ ಹೊಕ್ಕರೆ ವಿವಿಧ ರೀತಿಯಲ್ಲಿ ಪ್ರೇಕ್ಷಕರಿಗೆ ಇಫಿಯ ೫೦ ವರ್ಷದ ಹಾದಿಯನ್ನು ವಿವರಿಸಲಾಗುತ್ತದೆ.
ಭಿತ್ತಿಚಿತ್ರಗಳಲ್ಲಿ ಇಫಿ, ಸುದ್ದಿಗಳಲ್ಲಿ ಇಫಿ, ಛಾಯಾಚಿತ್ರಗಳಲ್ಲಿ ಇಫಿ ಹೀಗೆ ವಿವಿಧ ವಿಭಾಗಗಳಿವೆ. ಇವೆಲ್ಲವೂ ವಿದ್ಯುನ್ಮಾನವಾಗಿರುವುದರಿಂದ ಟಚ್ ಸ್ಕ್ರೀನ್ ಮೂಲಕ ನಿಮಗೆ ಬೇಕಾದದ್ದನ್ನು ನೋಡಬಹುದು. ಹಾಗೆಯೇ 23 ನಿಮಿಷಗಳ ಸಣ್ಣದೊಂದು ಸಾಕ್ಷ್ಯಚಿತ್ರವೂ ಪ್ರದರ್ಶಿತವಾಗುತ್ತಿದೆ. ಇದಲ್ಲದೇ, ಈಗಿನ ಟೆಕ್ನಾಲಜಿಯನ್ನು ಹೇಳುವ ಸಲುವಾಗಿ ವಿಆರ್ ಮತ್ತು ಎಆರ್ ಘವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ] ಟೆಕ್ನಾಲಜಿಯ ಅನುಭವಕ್ಕೂ ವೇದಿಕೆ ಕಲ್ಪಿಸಲಾಗಿದೆ.
ಇಷ್ಟೇ ಅಲ್ಲ ; ಅಲ್ಲಿಗೆ ಹೋಗಿ ಕ್ವಿಜ್ ನ್ನೂ ಆಡಬಹುದು. ತಮಗೆ ಇಷ್ಟ ಬಂದ ನಟ/ನಟಿಯರನ್ನೂ ಟಚ್ ಸ್ಕ್ರೀನ್ ನಲ್ಲಿ ಸೃಷ್ಟಿಸಿ ಅವರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವುದೊಂದು ಇದ್ದಿದ್ದರೆ ಇಫಿ ಫೆಸ್ಟಿವಲ್ ಗಿಂತ ಹೆಚ್ಚು ಜನ ಅಲ್ಲೇ ಇರುತ್ತಿದ್ದರೇನೋ?