ನಂಜನಗೂಡು: ದೇಶದಲ್ಲಿ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಒಂಟಿಯಾಗಿದ್ದು, ಪಕ್ಷದ ಸ್ಥಿತಿ ಅಧೋಗತಿಯಲ್ಲಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.
ನಗರದ ಯಾತ್ರಿ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾವು ದುರಂಹಕಾರಿ, ಅಹಂಕಾರಿಯಲ್ಲ. ಬಯ್ಗುಳದ ರಾಜಕಾರಣಿಯೂ ಅಲ್ಲ. ತಮಗೆ ಅನ್ಯಾಯ ಎಸಗಿರುವುದನ್ನು ಜನತೆಯ ಮುಂದಿಟ್ಟು ಅವರ ಮೂಲಕವೇ ವಿರೋಧಿಗಳಿಗೆ ಪಾಠ ಕಲಿಸುತ್ತಿದ್ದೇನೆ. ಇದೇ ನಮ್ಮ ನೀತಿಯಾಗಿದೆ. ಇದರಿಂದಾಗಿಯೇ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಸಹಚರರು ಸೋಲುಂಡರು ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಜಗತ್ತಿನ ಅತಿ ದೊಡ್ಡ ಪ್ರಜಾಭುತ್ವದ ಅಧಿಕಾರದ ಚುಕ್ಕಾಣಿಗಾಗಿ ಹಣಾಹಣಿ ನಡೆಯುತ್ತಿದೆ. ಈ ಮಹಾಸಮರದಲ್ಲಿ ಕಾಂಗ್ರೆಸ್ ಅನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮೇಲ್ನೋಟಕ್ಕೆ ಮಾತ್ರ ಹೊಂದಾಣಿಕೆ ಮಾಡಿಕೊಂಡಂತಿದ್ದು, ಒಬ್ಬರಿಗೊಬ್ಬರು ಕೈಕೊಡುವುದನ್ನು ಸದ್ಯದಲ್ಲೇ ಬಯಲಾಗಲಿದೆ ಎಂದು ತಿಳಿಸಿದರು.
ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಬಿಜೆಪಿ ಗೆಲುವು ಶತಸಿದ್ಧ. ಈ ವಿಶಾಲವಾದ ಈ ಕ್ಷೇತ್ರಗಳಲ್ಲಿ ತಮ್ಮಷ್ಟು ಸುತ್ತಿದವರ್ಯಾರೂ ಇಲ್ಲ. ಈ ಭಾಗದ ಜನತೆ ಈಗಲೂ ತಮ್ಮನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಈ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
20 ವರ್ಷಗಳ ನಂತರ ಮತ್ತೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದೇನೆ. ಸಮುದಾಯ ಭವನಗಳು, ಬ್ರಾಡ್‌ಗೆಜ್, ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅಧ್ಯಯನ ಪೀಠ ಮತ್ತಿತರ ಅನೇಕ ಯೋಜನೆಗಳು ತಮ್ಮ ಅವಧಿಯಲ್ಲಿ ನಡೆದಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರ್ಷವರ್ಧನ, ಮುಖಂಡರಾದ ರಾಜೇಂದ್ರ, ಬಸವೇಗೌಡ, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ಯು.ಎನ್. ಪದ್ಮನಾಭರಾವ್ ಮತ್ತಿತರರು ಉಪಸ್ಥಿತರಿದ್ದರು