ಮೈಸೂರು: ಸ್ವಪಕ್ಷೀಯ ಜೆಡಿಎಸ್ ಸದಸ್ಯರ ಒತ್ತಡಕ್ಕೆ ಮಣಿದು ರಾಜೀನಾಮೆ ಘೋಷಣೆ ಮಾಡಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯಿಮಾ ಸುಲ್ತಾನ ಕಡೆಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿ ಬಂದಿದ್ದಾರೆ.
ಪಕ್ಷದಲ್ಲಿನ ಆಂತರಿಕ ಒಪ್ಪಂದದಂತೆ 20 ತಿಂಗಳಿಗೆ ರಾಜೀನಾಮೆ ನೀಡದ ನಯಿಮಾಸುಲ್ತಾನ ವಿರುದ್ಧ ಜೆಡಿಎಸ್ ಸದಸ್ಯರು ತಿರುಗಿಬಿದ್ದಿದ್ದರು. ಹೀಗಾಗಿ ಕಳೆದ ಆಗಸ್ಟ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ವಾಪಸ್ ಪಡೆದು ಅಧಿಕಾರದಲ್ಲಿ ಮುಂದುವರಿದಿದ್ದರು.
ಇದರಿಂದ ಜೆಡಿಎಸ್ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದ ನಯಿಮಾ ಸುಲ್ತಾನ ಅವರು ಡಿ.21ರಂದು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಕರೆದಾಗ, ಸಭೆ ನಡೆಸಲು ಅವಕಾಶ ಕೊಡದ ಜೆಡಿಎಸ್ ಸದಸ್ಯರು ಪಟ್ಟು ಹಿಡಿದು ರಾಜೀನಾಮೆ ಘೋಷಣೆ ಮಾಡಿಸಿ,
ಬೆಂಗಳೂರಿಗೆ ಕರೆದೊಯ್ದು ರಾಜೀನಾಮೆ ಕೊಡಿಸಿದ್ದಾರೆ. 15 ದಿನಗಳಲ್ಲಿ ರಾಜೀನಾಮೆ ಹಿಂಪಡೆಯದಿದ್ದರೆ ಅಂಗೀಕಾರವಾಗಲಿದ್ದು, ಸದ್ಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಸಚಿವ ಸಾ.ರಾ.ಮಹೇಶ್ ಅವರ ಸಹೋದರ ಸಾ.ರಾ.ನಂದೀಶ್ ಪ್ರಭಾರ ಅಧ್ಯಕ್ಷರಾಗಲಿದ್ದಾರೆ.
ದಳ-ಕೈ ದೋಸ್ತಿ ಸಾಧ್ಯತೆ: ಸದ್ಯ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆಯಿಂದ ಅಧಿಕಾರ ಹಿಡಿದಿದ್ದು, ರಾಜ್ಯಮಟ್ಟದ ತೀರ್ಮಾನದಂತೆ ಜೆಡಿಎಸ್-ಕಾಂಗ್ರೆಸ್ ಒಂದಾಗುವ ಸಾಧ್ಯತೆಗಳು ಹೆಚ್ಚಿವೆ. ಸ್ಥಳೀಯವಾಗಿ ಜೆಡಿಎಸ್‌ನ ಜಿಲ್ಲಾ ಪಂಚಾಯ್ತಿ ಸದಸ್ಯರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆಗೆ ವಿರೋಧ ವ್ಯಕ್ತಪಡಿಸಿದ್ದರೂ ಅಂತಿಮವಾಗಿ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದಿರುವುದು ಹೊಸ ಮೈತ್ರಿಯ ಮುನ್ಸೂಚನೆಯಾಗಿದೆ.