ಗದಗ: ಇತ್ತೀಚೆಗಷ್ಟೇ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಸರಕಾರ ಎಲ್ಲ ಚುನಾವಣೆಗಳನ್ನು 6 ತಿಂಗಳ ಕಾಲ ಮುಂದೂಡಿಕೆ ಮಾಡಿ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಚುನಾವಣಾ ಆಯೋಗ ಜಿಪಂ-ತಾಪಂ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದೆ. ಇದರಿಂದ ಜಿಲ್ಲೆಯ ಚುನಾವಣಾ ಸ್ಪರ್ಧಾಕಾಂಕ್ಷಿಗಳು ಮತ್ತು ಸ್ಥಳೀಯ ರಾಜಕೀಯ ವಲಯಲ್ಲಿ ಕುತೂಹಲ ಕೆರಳಿಸಿದೆ.
ಎರಡು ತಿಂಗಳ ಹಿಂದೆಯೇ ಚುನಾವಣಾ ಆಯೋಗ ಜಿಪಂ, ತಾಪಂ ಚುನಾವಣೆಯ ಸಿದ್ಧತೆ ಆರಂಭಿಸಿತ್ತು. ಜಿಲ್ಲೆಯ ಜನಸಂಖ್ಯೆಗೆ ಅನುಸಾರವಾಗಿ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸಲಾಗಿದೆ. ಜತೆಗೆ ಜಿಪಂನ ಐವರು ಸದಸ್ಯ ಬಲ ಹೆಚ್ಚಿಸಿದ್ದು, 19 ಸದಸ್ಯರಿಂದ 24ಕ್ಕೆ ಏರಿಕೆಯಾಗಿದೆ.
ನರಗುಂದ-ಗಜೇಂದ್ರಗಡ ತಾಲೂಕುಗಳನ್ನು ಹೊರತುಪಡಿಸಿ, ಇನ್ನುಳಿದ 5 ತಾಲೂಕುಗಳಿಗೆ ತಲಾ ಒಂದು ಜಿಪಂ ಕ್ಷೇತ್ರ ಹೆಚ್ಚಿಸಿದೆ. ಕೇತ್ರ ಪುನರ್ ವಿಂಗಡಣೆ ಬಳಿಕ ಗದಗ 15, ಮುಂಡರಗಿ 9, ನರಗುಂದ, ರೋಣ, ಗಜೇಂದ್ರಗಡ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿಗಳು ತಲಾ 11 ಸದಸ್ಯ ಬಲ ಹೊಂದಿವೆ. ಈ ಮೂಲಕ ಹಿಂದೆ ಇದ್ದ 79 ತಾಪಂ ಕ್ಷೇತ್ರಗಳಲ್ಲೇ ಎಲ್ಲ 7 ತಾಲೂಕುಗಳನ್ನು ಸರಿದೂಗಿಸಲಾಗಿದೆ.
ಮೀಸಲು ಕ್ಷೇತ್ರಗಳಲ್ಲಿ ನಾರಿಯರು: ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸಿರುವ ಬೆನ್ನಲ್ಲೇ ಇದೀಗ ರಾಜ್ಯ ಚುನಾವಣಾ ಆಯೋಗ ಜಿಪಂ, ತಾಪಂ ಒಟ್ಟು ಸ್ಥಾನಗಳನ್ನು ಸಾಮಾಜಿಕ ಮೀಸಲಾತಿ ಅನ್ವಯ ವರ್ಗೀಕರಿಸಿದೆ. ಪಂಚಾಯತ್‌ನ ಒಟ್ಟು ಸದಸ್ಯ ಸಂಖ್ಯೆ ಆಧರಿಸಿ ಮಹಿಳೆಯರಿಗೆ ಶೇ.50 ಸ್ಥಾನಗಳನ್ನು ನಿಗದಿಪಡಿಸಿದೆ. ಜತೆಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ “ಅ’, ಹಿಂದಳಿದ ವರ್ಗ “ಬ’ ಮತ್ತು ಸಾಮಾನ್ಯ ವರ್ಗದ ಸ್ಥಾನಗಳನ್ನು ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಜಿಪಂ ಒಟ್ಟು 24 ಸ್ಥಾನಗಳಲ್ಲಿ 12 ಮಹಿಳೆಯರಿಗೆ ಮೀಸಲು ಕಲ್ಪಿಸಿದೆ.
ಅನುಸೂಚಿತ ಜಾತಿ 4(2), ಅನುಸೂಚಿತ ಪಂಗಡ 2(1), ಹಿಂದುಳಿದ ವರ್ಗ “ಅ’ 5(2), ಹಿಂದಳಿದ ವರ್ಗ “ಬ’ 1(1) ಮತ್ತು 12(6) ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ನಿಗದಿಗೊಳಿಸಿದೆ. ಜಿಲ್ಲೆಯ 7 ತಾಪಂನ ಒಟ್ಟು 79 ಸ್ಥಾನಗಳಲ್ಲಿ 43 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಜಾತಿಗೆ ಮೀಸಲಿರುವ 15 ಸ್ಥಾನಗಳಲ್ಲಿ 10, ಅನುಸೂಚಿತ ಪಂಗಡಕ್ಕೆ ಸಿಕ್ಕಿರುವ 7 ಕ್ಷೇತ್ರಗಳು ಮಹಿಳಾ ಮೀಸಲಾಗಿವೆ. ಹಿಂದುಳಿದ ವರ್ಗ ಮೀಸಲು ಕ್ಷೇತ್ರದ 11ರಲ್ಲಿ 10 ಮಹಿಳೆಯರ ಪಾಲಾಗಿರುವುದು ವಿಶೇಷ. ಆದರೆ ಕ್ಷೇತ್ರವಾರು ಮೀಸಲಾತಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.