ಬೆಂಗಳೂರು: ಅತ್ತ ಅಮೆರಿಕದಲ್ಲಿನ ಮೃಗಾಲಯದ ಪ್ರಾಣಿಗಳ ಮೇಲೆ ಕೋವಿಡ್ 19 ದಾಳಿ ಮಾಡಿದ ಬೆನ್ನಲ್ಲೇ ಇತ್ತ ರಾಜ್ಯದ ಮೃಗಾಲಯಗಳಲ್ಲಿ ಲಾಕ್‌ಡೌನ್ ಅವಧಿ ವಿಸ್ತರಣೆ ಮಾತು ಕೇಳಿ ಬರುತ್ತಿವೆ.
ಮನುಷ್ಯ-ವನ್ಯಪ್ರಾಣಿಗಳ ನೇರ ಸಂಪರ್ಕದ ಹಾಟ್‌ಸ್ಪಾಟ್ ಮೃಗಾಲಯಗಳು, ಅಲ್ಲಿರುವ ನೂರಾರು ವನ್ಯಪ್ರಾಣಿಗಳು ಕೋವಿಡ್ 19 ಸೋಂಕಿನ ಆತಂಕವಿಲ್ಲದೆ ಸುರಕ್ಷಿತವಾಗಿವೆ. ಆದರೆ, ಈಗ ಮನುಷ್ಯನಿಂದ ಪ್ರಾಣಿಗಳಿಗೆ ವೈರಸ್ ವರ್ಗಾವಣೆ ಆಗಿದ್ದರಿಂದ ಒಂದು ವೇಳೆ ಏ.14ಕ್ಕೇ ಲಾಕ್‌ಡೌನ್ ತೆರವುಗೊಳಿಸಿದರೂ, ಮೃಗಾಲಯಗಳು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಜನ ಸಂಚಾರ ನಿರ್ಬಂಧ ಮುಂದುವರಿಸುವುದು ಸೂಕ್ತ ಎಂಬ ಅಭಿಪ್ರಾಯ ಅರಣ್ಯ ಇಲಾಖೆ ಅಧಿಕಾರಿಗಳು -ವನ್ಯಜೀವಿ ತಜ್ಞರಿಂದ ವ್ಯಕ್ತವಾಗುತ್ತಿದೆ.
ವಿದೇಶದ ಮೃಗಾಲಯದಲ್ಲಿ ಮನುಷ್ಯನಿಂದ ವನ್ಯಪ್ರಾಣಿಗಳಿಗೂ ಕೋವಿಡ್ 19 ಸೋಂಕು ತಗುಲಿದ್ದು, ರಾಜ್ಯದಲ್ಲಿಯೂ ವನ್ಯಪ್ರಾಣಿಗಳಿಗೆ ಸೋಂಕು ತಗುಲಬಹುದು ಎಂಬ ಆತಂಕ ಹೆಚ್ಚಿದೆ. ಆದರೆ, ಅರಣ್ಯ ಇಲಾಖೆ ಹಾಗೂ ಮೃಗಾಲಯ ಪ್ರಾಧಿಕಾರ “ರಾಜ್ಯದ ಮೃಗಾಲಯಗಳಲ್ಲಿರುವ ಎಲ್ಲಾ ವನ್ಯಪ್ರಾಣಿಗಳು ಕೋವಿಡ್ 19 ವೈರಸ್ ನಿಂದ ಅಂತರ ಕಾಯ್ದುಕೊಂಡಿದ್ದು, ಸಂಪೂರ್ಣ ಸುರಕ್ಷಿತವಾಗಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
“ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಯಾರಲ್ಲಿ ಸೋಂಕು ಇದೆ ಅಥವಾ ಇಲ್ಲ ಎಂಬುದು ಗೊತ್ತೇ ಆಗುತ್ತಿಲ್ಲ. ಸೋಂಕಿತ ವ್ಯಕ್ತಿ ಮೃಗಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಈ ದೃಷ್ಟಿಯಿಂದ ಸರ್ಕಾರ ಮೃಗಾಲಯಗಳಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಲಾಕ್‌ಡೌನ್ ಕಡ್ಡಾಯವಾಗಿ ಮುಂದುವರಿಸಲೇಬೇಕು’ ಎಂದು ಇಲಾಖೆ ಅಧಿಕಾರಿಗಳು, ಮೃಗಾಲಯ ಸಿಬ್ಬಂದಿ ಹಾಗೂ ವನ್ಯಜೀವಿ ತಜ್ಞರು ಒತ್ತಾಯಿಸುತ್ತಿದ್ದಾರೆ.
“ರಾಜ್ಯದ ಎಲ್ಲಾ ಮೃಗಾಲಯಗಳು ಮಾ.14ರಿಂದಲೇ ಬಂದ್ ಆಗಿವೆ. ಜತೆಗೆ ಜನರ ಭೇಟಿ ನಿಷೇಧ ಹಿನ್ನೆಲೆ ಮೃಗಾಲಯದ ಸಿಬ್ಬಂದಿಗಳನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಅನಾರೋಗ್ಯವಿದ್ದರೆ ಮೃಗಾಲಯದ ಒಳಗೆ ಅನುಮತಿ ನೀಡಿರಲಿಲ್ಲ. ಎಲ್ಲಾ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಜತೆಗೆ ಸೋಮವಾರ ಮತ್ತು ಮಂಗಳವಾರ ಮೃಗಾಲಯ ಪ್ರಾಣಿಗಳ ಆರೋಗ್ಯ ಪರೀಕ್ಷೆ ಮಾಡಿದ್ದು ರೋಗ ಲಕ್ಷಣ ಕಂಡುಬಂದಿಲ್ಲ’ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ ರವಿ ಹೇಳಿದ್ದಾರೆ. ಸಂಘರ್ಷ ವರದಿಯಾಗಿಲ್ಲ: ರಾಜ್ಯ ಹುಲಿಗಳ ಸಂಖ್ಯೆಯಲ್ಲಿ 2ನೇ ಸ್ಥಾನ ಹಾಗೂ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿವೆ. ಈ ಪೈಕಿ ಶೇ.90 ಹುಲಿ, ಆನೆಯಂತಹ ಪ್ರಾಣಿಗಳು ಅರಣ್ಯದಲ್ಲೇ ವಾಸಿಸುತ್ತಿವೆ. ಇಲ್ಲಿ ಮನುಷ್ಯನೊಟ್ಟಿಗೆ ಸಂಪರ್ಕ ತೀರಾ ವಿರಳ. ಸಫಾರಿ ಬಂದ್ ಮಾಡಲಾಗಿದೆ. ಲಾಕ್‌ಡೌನ್‌ನಿಂದ ಅರಣ್ಯ ಹಾಗೂ ಅರಣ್ಯ ಸುತ್ತ ಮಾನವ ಅಥವಾ ವಾಹನಗಳ ಓಡಾಟ ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ರಾಜ್ಯ ಅರಣ್ಯಪಡೆ ಮುಖ್ಯಸ್ಥ ಪುನಾಟಿ ಶ್ರೀಧರ್.
ರಕ್ಷಣಾ ಪರಿಕರ ಇವೆ: ಕೇಂದ್ರ ಸರ್ಕಾರದ ಸೂಚನೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದು, ರೋಗ ಲಕ್ಷಣ ಕಂಡು ಬಂದ ಪ್ರಾಣಿಯನ್ನು ಸಿಸಿ ಕ್ಯಾಮೆರಾದಲ್ಲಿ ನಿರಂತರ ನಿಗಾದಲ್ಲಿಡಲಾ ಗುತ್ತದೆ. ರಾಜ್ಯದ ಎಲ್ಲಾ ಮೃಗಾಲಯಗಳ ಲ್ಲಿಯೂ ಅಗತ್ಯ ವೈದ್ಯರು ಇದ್ದಾರೆ. ಮೈಸೂರು, ಬನ್ನೇರುಘಟ್ಟ, ಶಿವಮೊಗ್ಗ ಮೃಗಾಲಯಗಳಲ್ಲಿ ಈಗಾಗಲೇ ಥರ್ಮಲ್ ಸ್ಕ್ರೀನಿಂಗ್ ಉಪಕರಣ ವಿದ್ದು, ಚಿತ್ರದುರ್ಗ, ಹಂಪಿ, ಕಲಬುರಗಿ, ಗದಗ ಮೃಗಾಲಯಗಳಿಗೆ ತಲುಪಿಸಲಾಗುತ್ತದೆ ಎಂದು ಮೃಗಾ ಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ ಮಾಹಿತಿ ನೀಡಿದರು.
ಆನೆಗಳ ಕಾಳಜಿಗೆ ಬೇಕಿದೆ ಕ್ರಮ : ಹೆಚ್ಚಾಗಿ ಮನುಷ್ಯನೊಂದಿಗೆ ಮುಖಾಮುಖೀ ಆಗುವ ಪ್ರಾಣಿ ಆನೆ. ಸದ್ಯ ರಾಜ್ಯದ ಅನೇಕ ದೇವಸ್ಥಾನ, ಮಠಗಳಲ್ಲಿ ಆನೆಗಳನ್ನು ಸಾಕಲಾಗಿದೆ. ಕೆಲವೆಡೆ ಕರಡಿ, ಜಿಂಕೆ, ಮೊಲ, ಕಾಡುಪಕ್ಷಿಗಳನ್ನೂ ಸಾಕಿರುತ್ತಾರೆ. ಕೊರೊನಾ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲುವ ಸಾಧ್ಯತೆಗಳಿದ್ದು ಅರಣ್ಯ ಇಲಾಖೆ ಮಾರ್ಗಸೂಚಿ ಹೊರಡಿಸುವ ಅಗತ್ಯತೆ ಹೆಚ್ಚಿದೆ.
ವನ್ಯಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲುವುದು ದೃಢಪಟ್ಟಿದೆ. ವನ್ಯಜೀವಿ ಮೃಗಾಲಯಗಳ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮೃಗಾಲಯಗಳು, ಕಾಡುಗಳಿಗೆ ಜನರ ಭೇಟಿಯನ್ನು ಇನ್ನಷ್ಟು ದಿನ ನಿಷೇಧಿಸಬೇಕು.
–ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ
– ಜಯಪ್ರಕಾಶ್ ಬಿರಾದಾರ್