ಧಾರವಾಡ: ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಆಗಮಿಸಲಿದ್ದು, ಈ ನಡುವೆಯೇ ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಆಡಳಿತಾರೂಢ ಕಾಂಗ್ರೆಸ್‌ನ ಜಿಪಂ ಅಧ್ಯಕ್ಷ-ಉಪಾಧ್ಯಕ್ಷರು ಮಂಗಳವಾರ ಸಂಜೆಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಬಹುತೇಕ ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರು ಜಿಪಂ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಅಧಿಕಾರಿಗಳೊಂದಿಗೆ ಹಾಗೂ ಸಿಇಒ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಯಾರಿಂದಲೂ ಸರಿಯಾದ ಉತ್ತರ ಹಾಗೂ ಸ್ಪಂದನೆ ಸಿಗದ ಕಾರಣ ಸಂಜೆ 4 ಗಂಟೆಯಿಂದ ಜಿಪಂ ಕಚೇರಿ ಪ್ರವೇಶ ದ್ವಾರದಲ್ಲಿ ಕುಳಿತು ಧರಣಿ ಕೈಗೊಂಡಿದ್ದಾರೆ. ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗಪ್ಪ ಘಾಟಿನ್, ಜಿ.ಪಂ ಸದಸ್ಯರಾದ ಅನ್ನಪ್ಪ ದೇಸಾಯಿ, ಚನ್ನಬಸಪ್ಪ ಮಟ್ಟಿ, ರೇಣುಕಾ ಇಬ್ರಾಹಿಂಪುರ ಸೇರಿದಂತೆ ಹಲವರು ಸದಸ್ಯರು ಸಾಥ್ ನೀಡಿದ್ದಾರೆ. ಜಿಪಂ ಸಿಇಒ ಡಾ| ಸತೀಶ ಅವರು 2-3 ಸಲ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಸಡಿಸಲದೇ ಧರಣಿ ಮುಂದುವರಿಸಿದ್ದಾರೆ.
ಕೊನೆಗೆ ಡಿಸಿ ದೀಪಾ ಅವರೊಂದಿಗೂ ಮಾತನಾಡಿದ ಸಿಇಒ, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಡಿಸಿ ಅವರ ಸೂಚನೆ ಅನ್ವಯ ಮತ್ತೆ ಮನವಿ ಮಾಡಿದ ಸಿಇಒ, ಬುಧವಾರ ಈ ಬಗ್ಗೆ ಚರ್ಚಿಸಿ ಬಗೆಹರಿಸುವ ಬಗ್ಗೆ ಡಿಸಿ ಭರವಸೆ ನೀಡಿದ್ದಾರೆ. ಹೀಗಾಗಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದಾರೆ. ಇದಕ್ಕೂ ಮಣಿಯದ ಪ್ರತಿಭಟನಾನಿರತರು, ಕಳೆದ ಎರಡು ತಿಂಗಳಿಂದ ಮನವಿ ಮಾಡಿ ಗಮನ ಸೆಳೆದರೂ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಂದಲೂ ಹೇಳಿದರೂ ಬೆಲೆ ನೀಡಿಲ್ಲ. ಹೀಗಾಗಿ ನಾವು ಧರಣಿ ಕೈಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ನೆರೆ ಪರಿಹಾರ ಕಾಮಗಾರಿ ವಿತರಣೆಯಲ್ಲಿ ನಮ್ಮನ್ನು ಪರಿಗಣಿಸಿಲ್ಲ. ಶಾಸಕರಿಗೆ ಅಷ್ಟೇ ಆದ್ಯತೆ ನೀಡಿದ್ದು, ಶಾಸಕರ ಸೂಚನೆಯ ಅನುಸಾರ ಕಾಮಗಾರಿಗಳನ್ನು ನೀಡಲಾಗಿದೆ. ಈ ಬಗ್ಗೆ ಜಿಪಂ ಸಿಇಒ, ಡಿಸಿ ಅವರಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಮನವಿ ಸಲ್ಲಿಸಿದ್ದು, ನೇರವಾಗಿ ನಿಯೋಗ ತೆರಳಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಾಗಲೇ ಜಿಪಂ ವ್ಯಾಪ್ತಿಯಲ್ಲಿನ ನೆರೆ ಪರಿಹಾರ ಕಾಮಗಾರಿಗಳ ಪೈಕಿ ಅರ್ಧದಷ್ಟು ಕಾಮಗಾರಿ ಆರಂಭಿಸಿದ್ದು, ಇನ್ನೊಂದಿಷ್ಟು ಉಳಿದುಕೊಂಡಿದೆ. ನೆರೆ ಪರಿಹಾರದ ಅನುದಾನ, ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ನಮಗೆ ಆಗಿರುವ ಅನ್ಯಾಯ ಸರಿಪಡಿಸುವವರೆಗೂ ಧರಣಿ ಕೈಗೊಳ್ಳುವುದಾಗಿ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹಾಗೂ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಸ್ಪಷ್ಟಪಡಿಸಿದರು.