Advertisement

ರಸಗೊಬ್ಬರ ಅಂಗಡಿಗಳಿಗೆ ಜಿಪಂ ಅಧ್ಯಕ್ಷೆ ಸುವರ್ಣಾ ಭೇಟಿ

05:24 PM Aug 19, 2020 | Suhan S |

ಕಲಬುರಗಿ: ಜಿಲ್ಲೆಯಲ್ಲಿ ರೈತರಿಗೆ ಯೂರಿಯಾ ರಸಗೊಬ್ಬರ ಕೊರತೆಯಾಗುತ್ತಿದೆ ಎಂದು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ ನಗರದ ಗಂಜ ಪ್ರದೇಶದಲ್ಲಿರುವ ವಿವಿಧ ಬೀಜ ಮತ್ತು ರಸಗೊಬ್ಬರ ಅಂಗಡಿಗಳಿಗೆ ಅಧಿಕಾರಿಗಳೊಂದಿಗೆ ದಿಢೀರ್‌ ಭೇಟಿ ನೀಡಿ ರಸಗೊಬ್ಬರಗಳ ದಾಸ್ತಾನು ಪರಿಶೀಲಿಸಿದರು.

Advertisement

ಚನ್ನವೀರ ಅಗ್ರೋ ಏಜೆನ್ಸಿಯವರು ಯೂರಿಯಾ ರಸಗೊಬ್ಬರ ದಾಸ್ತಾನು ಇದ್ದರೂ ಕೃತಕ ಅಭಾವ ಸೃಷ್ಟಿಸಿ ರೈತರಿಂದ ಹೆಚ್ಚುವರಿ ಹಣ ಪಡೆದು ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಸದರಿ ಅಂಗಡಿಯ ಲೈಸನ್ಸ್‌ ಅಮಾನತುಗೊಳಿಸುವಂತೆ ಸ್ಥಳದಲ್ಲಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ ಅವರಿಗೆ ಸೂಚನೆ ನೀಡಿದರು.

ಬಕ್ಕಂಪ್ರಭು ಅಗ್ರೋ ಕೇಂದ್ರಕ್ಕೂ ಭೇಟಿ ನೀಡಿದ ಅಧ್ಯಕ್ಷರು ಅಲ್ಲಿಯೂ ರಸಗೊಬ್ಬರ ದಾಸ್ತಾನಿದ್ದರೂ ಇನ್ನು ಬಂದಿಲ್ಲ ಎಂದು ಸುಳ್ಳು ಹೇಳಿದರು. ಸ್ಥಳದಲ್ಲಿದ್ದ ರೈತರು ಅಂಗಡಿಯವರು ರಸಗೊಬ್ಬರ ಹೆಚ್ಚಿಗೆ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ಅಧ್ಯಕ್ಷರಲ್ಲಿ ತೋಡಿಕೊಂಡರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷೆ ಅವರು ಸದರಿ ಅಗ್ರೋ ಕೇಂದ್ರದವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲು ಖಡಕ್‌ ಸೂಚನೆ ನೀಡಿದರು.

ತಪಾಸಣೆ ನಂತರ ಮಾತನಾಡಿದ ಸುವರ್ಣಾ ಹಣಮಂತರಾಯ ಮಾಲಾಜಿ ಅವರು, ಜಿಲ್ಲೆಯಲ್ಲಿ ಯೂರಿಯಾ ದಾಸ್ತಾನು ಕೊರತೆ ಇರುವುದಿಲ್ಲ. ರೈತರು ಗಾಬರಿಯಾಗುವ ಅವಶ್ಯಕತೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದರಲ್ಲದೇ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕವಾಗಿ ಬೀಜ ಮತ್ತು ರಸಗೊಬ್ಬರವನ್ನು ದೊರಕುವ ರೀತಿಯಲ್ಲಿ ಎಲ್ಲಾ ಅಂಗಡಿಗಳಿಗೆ ಪ್ರತಿ ದಿನ ಭೇಟಿ ನೀಡಿ, ಮೇಲುಸ್ತುವಾರಿ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕ್ರಿಮಿನಲ್‌ ಕೇಸ್‌: ಬೀಜ ಮತ್ತು ರಸಗೊಬ್ಬರ ಅಂಗಡಿಯವರು ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಕೂಡಲೇ ಅವರ ಲೈಸನ್ಸ್‌ ರದ್ದುಪಡಿಸುವುದು ಹಾಗೂ ಸದರಿ ಅಂಗಡಿಯವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಖಡಕ್‌ ಸೂಚನೆ ನೀಡಿದರು. ಕೃಷಿ ಇಲಾಖೆಯ ಅಧಿಕಾರಿಗಳು, ಮುಖಂಡ ಹಣಮಂತರಾಯ ಮಾಲಾಜಿ ಇದ್ದರು.

Advertisement

ಯೂರಿಯಾ ಕೊರತೆಯಿಲ್ಲ: ಜಿಲ್ಲೆಯ ಕೃಷಿ ಪರಿಕರ ಮಳಿಗೆಗಳಲ್ಲಿ ಯೂರಿಯಾ ರಸಗೊಬ್ಬರ ದಾಸ್ತಾನಿದ್ದು, ರೈತರು ದೃತಿಗೆಡದೆ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಮಗೆ ಅವಶ್ಯಕವಿರುವ ರಸಗೊಬ್ಬರವನ್ನು ನಿಗದಿತ ದರದಲ್ಲಿ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ. ದಪ್ಪ ಕಾಳು ಯೂರಿಯಾ ಮತ್ತು ಸಣ್ಣ ಕಾಳು ಯುರಿಯಾ ಎರಡರಲ್ಲೂ ಸಹ ಸಾರಜನಕ ಒಂದೇ ಪ್ರಮಾಣದಲ್ಲಿ (ಓ:46%)ಇರುವುದರಿಂದ ಎರಡರಲ್ಲಿಯೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದ್ದರಿಂದ ಸಣ್ಣ/ದೊಡ್ಡ ಕಾಳಿನ ಯೂರಿಯಾ ರಸಗೊಬ್ಬರ ಲಭ್ಯವಿರುವುದು ಉಪಯೋಗಿಸಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next