Advertisement

ಹೆಚ್ಚುವರಿ ರಸಗೊಬ್ಬರ ಅನುದಾನಕ್ಕೆ ಪ್ರಸ್ತಾವನೆ

03:49 PM Aug 19, 2020 | Suhan S |

ಧಾರವಾಡ: ಜಿಲ್ಲೆಗೆ ರಸಗೊಬ್ಬರದ ಹೆಚ್ಚುವರಿ ಅನುದಾನ ಕೋರಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿ.ಪಂ. ಸಾಮಾನ್ಯ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚೆ ಕೈಗೊಂಡು ಒಮ್ಮತದ ನಿರ್ಧಾರ ಪ್ರಕಟಿಸುವುದರ ಜೊತೆಗೆ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

Advertisement

ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯ ಉಮೇಶ ರಾಮಪ್ಪ ಹೆಬಸೂರ ಅವರು, ಜಿಲ್ಲೆಯ ರೈತರಿಗೆ ಯೂರಿಯಾ ಹಾಗೂ ಜಿಪ್ಸಮ್‌ ಪೂರೈಕೆ ಕುರಿತ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ. ಮಾತನಾಡಿ, ಜಿಲ್ಲೆಗೆ ಈ ಬಾರಿ ಬೇಡಿಕೆಗಿಂತ ಹೆಚ್ಚು ಯೂರಿಯಾ ಸರಬರಾಜು ಆಗಿದೆ. ಇನ್ನು 3-4 ದಿನಗಳಲ್ಲಿ ಎರಡು ಜಂಬೋ ರೇಕುಗಳಲ್ಲಿ 2650 ಟನ್‌ ಯೂರಿಯಾ ಬರಲಿದೆ. ಈ ಗೊಬ್ಬರವನ್ನು ಬೇಡಿಕೆ ಇರುವ ಕಡೆ ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಜಿಪ್ಸಮ್‌ ಗೊಬ್ಬರ ಬೇಡಿಕೆ ಬಗ್ಗೆ ಸದಸ್ಯೆ ರೇಣುಕಾ ಇಬ್ರಾಹಿಂಪುರ ಸಭೆಯ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಿಇಒ ಡಾ| ಬಿ.ಸಿ. ಸತೀಶ, ಈ ಕುರಿತು ಸಾಮಾನ್ಯ ಸಭೆಯ ಗೊತ್ತುವಳಿ ನಿರ್ಣಯವನ್ನು ಆಧರಿಸಿ ಸರ್ಕಾರಕ್ಕೆ ಹೆಚ್ಚು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸೀಲ್‌ಡೌನ್‌ ಗೊಂದಲ-ನಿವಾರಣೆ: ಸದಸ್ಯ ಚನ್ನಬಸಪ್ಪ ಮಟ್ಟಿ ಮಾತನಾಡಿ, ಈ ಹಿಂದೆ ಸೋಂಕು ಪತ್ತೆಯಾದ ಸ್ಥಳದ 3 ಕಿಮೀ ಸುತ್ತ ಸೀಲ್‌ಡೌನ್‌ ಮಾಡಲಾಗುತ್ತಿತ್ತು. ಇದೀಗ ಮನೆಗಳಿಗೆ ಮಾತ್ರ ಮಾಡಲಾಗುತ್ತಿದೆ. ಹೀಗಾಗಿ ಇಲಾಖೆ ನಡೆಸುತ್ತಿರುವ ಎಲ್ಲ ಕಾರ್ಯಗಳು ಬೋಗಸ್‌ ಎನ್ನುವಂತಾಗಿದೆ. ಇದಲ್ಲದೆ ಒಬ್ಬ ಸೋಂಕಿತನ ಚಿಕಿತ್ಸೆಗೆ ಸರ್ಕಾರ 3 ಲಕ್ಷ ರೂ. ನೀಡುತ್ತದೆ ಎಂಬ ಮಾತು ಕೇಳುತ್ತಿವೆ. ಇದು ನಿಜವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಡಾ| ಬಿ.ಸಿ.ಸತೀಶ, ಆರಂಭದ ಹಂತದಲ್ಲಿ ಜಿಲ್ಲೆಯಲ್ಲಿ 2-3 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆಗ ಪ್ರಕರಣ ಪತ್ತೆಯಾದ ಸ್ಥಳದಿಂದ 3 ಕಿಮೀ ವ್ಯಾಪ್ತಿಯಲ್ಲಿ ಸೀಲ್‌ಡೌನ್‌ ಮಾಡಲಾಗುತ್ತಿತ್ತು. ಆದರೆ ಈಗ ಸಾಕಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. ಅವರ ಸಮಗ್ರ ಮಾಹಿತಿ ಪಡೆದು ಸೀಲ್‌ಡೌನ್‌ ಮಾಡುವ ಹೊತ್ತಿಗೆ ಸೋಂಕು ತಗುಲಿದ ವ್ಯಕ್ತಿ ಗುಣವಾಗಿ ಬಿಡುಗಡೆಯಾಗುತ್ತಾರೆ. ಹೀಗಾಗಿ ಮನೆ ಮಾತ್ರ ಸೀಲ್‌ಡೌನ್‌ ಮಾಡಲಾಗುತ್ತಿದೆ. ಇನ್ನು ಸರ್ಕಾರ ಹಣ ನೀಡುತ್ತದೆ ಎಂಬುದು ಸುಳ್ಳು. ಔಷಧ, ಪಿಪಿಇ ಕಿಟ್‌ ಹೀಗೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಎನ್‌ಡಿಆರ್‌ಎಫ್‌ ಅನುದಾನದಲ್ಲಿ ಹಣ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು. ಕಳೆದ ಜ.9 ಹಾಗೂ ಫೆ.20ರಂದು ಜರುಗಿದ ಸಾಮಾನ್ಯ ಸಭೆಗಳ ನಡುವಳಿಗಳನ್ನು ದೃಢೀಕರಿಸಿದ ಬಳಿಕ ಅವುಗಳ ಮೇಲೆ ತೆಗೆದುಕೊಂಡ ಅನುಸರಣಾ ವರದಿಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಸಕ್ತ ಸಾಲಿನ ಕಾರ್ಯಕ್ರಮಗಳನ್ನು ವಿವರಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next