ಬಾಗಲಕೋಟೆ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮೂಲ ಸೌಲಭ್ಯಗಳನ್ನು ಈಡೇರಿಸುವಂತೆ ಮತ್ತು ಜಿಲ್ಲೆಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸುವಂತೆ ಹಾಗೂ ಸರ್ವಾಧಿಕಾರಿ ಧೋರಣೆಯ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಕರವೇ ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಪಂ ಸಿಇಒ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಆಗಮಿಸಿದ ಕರವೇ ಕಾರ್ಯಕರ್ತರು, ಕೆಲಕಾಲ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ನಂತರ ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರು ಮಾತನಾಡಿ, ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಸರಬರಾಜಿಗಾಗಿ ಜಾರಿಗೆ ತಂದ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿರುವುದು ಮತ್ತು ಕಳಪೆ, ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಸರಕಾರದ (ಜನರ) ಹಣವನ್ನು ಪೋಲು ಮಾಡಿದ್ದಲ್ಲದೇ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದ ಸಂಕೇತ. ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಜೂ.2ರಂದು ಸಂಜೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ ಪ್ರಮುಖ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ವಿನಂತಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ತೆರಳಿದ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಅವರು ಇಲಾಖೆಯ ಇತರೆ ಸಿಬ್ಬಂದಿ ಸಮ್ಮುಖದಲ್ಲಿ ಕೇವಲ ಕುಡಿಯಲು ಮಾತ್ರ ನೀರು ಕೊಡುತ್ತೇನೆ, ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ತೊಳೆಯಲು, ಪಾತ್ರೆ ತೊಳೆಯಲು, ಜಾನುವಾರುಗಳಿಗೆ ನೀರು ಕೊಡಲಾಗುವುದಿಲ್ಲ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ಆರೋಪಿಸಿದರು.
ಭಾಗ್ಯಾ ಬೆಟಗೇರಿ, ಬಸವರಾಜ ಧರ್ಮಂತಿ, ಬಸವರಾಜ ನೀಲನಾಯಕ, ಜಗದೀಶ ಎಂ.ಬಿ., ಗಣಪತಿ ಭೋವಿ, ಬಸವರಾಜ ಅಂಬಿಗೇರ, ಆತ್ಮಾರಾಮ ನೀಲನಾಯಕ, ಮಲ್ಲು ಕಟ್ಟಿಮನಿ, ರಂಜಾನ ನದಾಫ್, ಮಂಜುನಾಥ ಕಳ್ಳಿಗುಡ್ಡ, ಚಿನ್ನಪ್ಪ ಕುಂದರಗಿ, ಶ್ರೀಮಂತ ಹೊಸಕೋಟಿ, ಅಶೋಕ ಪೂಜಾರ, ಮಲ್ಲು ಮಡಿವಾಳರ, ರವಿ ಅಂಗಡಿ, ಶರಣು ಗಾಣಿಗೇರ, ಢೋಂಗ್ರಿಸಾಬ ನದಾಫ್, ಸಂಗು ಅಂಬಿಗೇರ, ಅಶೋಕ ಶಿಳ್ಳಿಕ್ಯಾತರ, ಮಹೇಶ ದೊಡ್ಡಣ್ಣವರ ಹಾಗೂ ರಂಗನಾಥ ಮೊಕಾಶಿ ಸೇರಿದಂತೆ ಕಾರ್ಯಕರ್ತರು ಪತ್ರಿಭಟನೆಯಲ್ಲಿ ಭಾಗವಹಿಸಿದ್ದರು.