Advertisement

Zilla Panchayat and Taluk Panchayat ಚುನಾವಣೆ: ಇನ್ನೂ ವಿಳಂಬ ಆಗದಿರಲಿ

12:58 AM Dec 21, 2023 | Team Udayavani |

ಕಳೆದ ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿರುವ, ಅವಧಿ ಮುಗಿದಿರುವ ರಾಜ್ಯದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಕೊನೆಗೂ ಕಾಲ ಕೂಡಿಬಂದಂತೆ ಕಂಡುಬರುತ್ತಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ. ರಾಜ್ಯ ಸರಕಾರ ಹೈಕೋರ್ಟ್‌ಗೆ ನೀಡಿರುವ ಈ ಭರವಸೆಯಿಂದ ರಾಜ್ಯದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಿಗೆ ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಆಶಾವಾದ ಮೂಡಿದೆ. ಸರಕಾರ ನೀಡಿರುವ ಭರವಸೆಯಂತೆಯೇ ಎಲ್ಲ ಪ್ರಕ್ರಿಯೆಗಳು ನಡೆದದ್ದೇ ಆದಲ್ಲಿ ಮುಂದಿನ ಎರಡು ತಿಂಗಳುಗಳ ಒಳಗಾಗಿ ಈ ಸಂಸ್ಥೆಗಳಿಗೆ ಚುನಾವಣೆ ನಡೆದು ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳು ಅಧಿಕಾರ ಸೂತ್ರವನ್ನು ಹಿಡಿಯಲಿದ್ದಾರೆ.

Advertisement

ಆದರೆ ಮುಂದಿನ ವರ್ಷದ ಎಪ್ರಿಲ್‌-ಮೇಯಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಇದನ್ನು ಮುಂದಿಟ್ಟು ರಾಜ್ಯ ಸರಕಾರ ಮತ್ತು ರಾಜಕೀಯ ಪಕ್ಷಗಳು ಮತ್ತೆ ತಮ್ಮ ಹಳೆ ವರಾತವನ್ನು ಮುಂದುವರಿಸಿದ್ದೇ ಆದಲ್ಲಿ ಹಾಗೂ ಚುನಾವಣ ಆಯೋಗ ಕೂಡ ಲೋಕಸಭೆ ಚುನಾವಣೆ ಸಿದ್ಧತೆಯ ನೆಪವನ್ನು ಮುಂದೆ ಮಾಡಿದ್ದೇ ಆದಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಮತ್ತಷ್ಟು ಕಾಲ ಮುಂದೂಡಲ್ಪಡುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಏತನ್ಮಧ್ಯೆ ರಾಜ್ಯದ ಹಲವಾರು ನಗರಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ಚುನಾವಣೆ ನಡೆದು ವರ್ಷಗಳೇ ಉರುಳಿದ್ದರೂ ಅಧ್ಯಕ್ಷ ಮತ್ತು ಉಪಾ ಧ್ಯಕ್ಷ ಹುದ್ದೆಗಳಿಗೆ ಇನ್ನೂ ಸರಕಾರ ಮೀಸಲಾತಿ ನಿಗದಿಪಡಿಸದೇ ಇರುವುದರಿಂದ ಚುನಾಯಿತ ಪ್ರತಿನಿಧಿಗಳಿನ್ನೂ ಅಧಿಕೃತವಾಗಿ ಕಾರ್ಯನಿರ್ವಹಿಸಲಾಗದ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಸಂಸ್ಥೆಗಳಲ್ಲಿ ಸದ್ಯಕ್ಕಂತೂ ಅಧಿಕಾರಿ ಗಳದ್ದೇ ದರ್ಬಾರು.
ಪಂಚಾಯತ್‌ ರಾಜ್‌ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಇಂತಹ ಗೊಂದಲ ಹೊಸದೇನಲ್ಲವಾಗಿದ್ದು, ಸರಕಾರ ರಾಜಕೀಯ ಕಾರಣಗಳಿಗಾಗಿ ಕ್ಷೇತ್ರ ಪುನರ್‌ ವಿಂಗಡಣೆ, ಮೀಸಲಾತಿ ನಿಗದಿಯಂತಹ ವಿಷಯಗಳನ್ನು ಮುಂದಿ ಟ್ಟು ವಿನಾಕಾರಣ ಈ ಸಂಸ್ಥೆಗಳನ್ನು ನಿರ್ಜೀವಗೊಳಿಸುತ್ತಲೇ ಬಂದಿವೆ. ಒಂದು ವೇಳೆ ಚುನಾವಣೆ ನಡೆದರೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲು ನಿಗದಿ ಪ್ರಕ್ರಿಯೆಯನ್ನು ಸರಕಾರಗಳು ರಾಜಕೀಯ ಕಾರಣಗಳಿಗಾಗಿಯೇ ವಿಳಂಬ ಮಾಡುತ್ತಲೇ ಬಂದಿವೆ. ಇದರಿಂದಾಗಿ ಈ ಸಂಸ್ಥೆಗಳು ಸೊರಗು ವಂತಾಗಿವೆ. ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಗ್ರಾಮ ಮಟ್ಟದಿಂದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ರೂಪಿಸಿ ಜಾರಿಗೆ ತರಲಾಗಿದ್ದರೂ ಸರಕಾರದ ಇಚ್ಛಾಶಕ್ತಿ ಮತ್ತು ಬದ್ಧತೆಯ ಕೊರತೆ ಹಾಗೂ ಅತಿಯಾದ ರಾಜಕೀಯ ಹಸ್ತಕ್ಷೇಪದಿಂದ ಈ ಸಂಸ್ಥೆಗಳು “ನಾಮ್‌ ಕೆ ವಾಸ್ತೆ’ ಎಂಬಂತಾಗಿವೆ.

ಇನ್ನಾದರೂ ರಾಜ್ಯ ಸರಕಾರ ತನ್ನ ಹೊಣೆಗಾರಿಕೆಯನ್ನು ಅರಿತುಕೊಂಡು ತನ್ನ ಕರ್ತವ್ಯಗಳನ್ನು ಆದಷ್ಟು ಬೇಗ ನಿರ್ವಹಿಸಿ, ಜಿ.ಪಂ. ಮತ್ತು ತಾ.ಪಂ. ಗಳಿಗೆ ಚುನಾವಣೆ ನಡೆಸಲು ಚುನಾವಣ ಆಯೋಗಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಚುನಾವಣೆಯ ಬಳಿಕ ಮೀಸಲಾತಿ ಘೋಷಿಸು ವುದರ ಬದಲಾಗಿ ಚುನಾವಣ ಪೂರ್ವದಲ್ಲಿಯೇ ಮೀಸಲಾತಿ ಯನ್ನು ನಿಗದಿಪಡಿಸಿ ಈ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಸುಗಮವಾಗಿ ಆಡಳಿತ ನಡೆಸಲು ಸರಕಾರ ಅನುವು ಮಾಡಿಕೊಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next