Advertisement

ಅಂದದ ಯೋಚನೆಗೆ ಅಂಕುಡೊಂಕು ಚೌಕಟ್ಟು

05:31 AM Mar 10, 2019 | |

ಒಂದು ಸಿನಿಮಾದೊಳಗೆ ಐದು ಕಥೆಗಳು. ಕನ್ನಡಕ್ಕೆ ಈ ಪ್ರಯೋಗ ಹೊಸದೇನಲ್ಲ. ದಶಕಗಳ ಹಿಂದೆಯೇ ಪುಟ್ಟಣ್ಣ ಕಣಗಾಲ್‌ ಅವರು ಅಂಥದ್ದೊಂದು ಪ್ರಯೋಗ ಮಾಡಿದ್ದರು. ಆದರೆ, ಒಂದು ಚಿತ್ರದೊಳಗೆ ಐದು ಹಾರರ್‌ ಕಥೆ ಇರುವಂಥದ್ದು ಕನ್ನಡಕ್ಕೆ ಹೊಸ ಪ್ರಯೋಗವಂತೂ ಹೌದು. ಹಾಗಂತ, ಆ ಹಾರರ್‌ನ ಹೊಸ ಪ್ರಯೋಗ ಯಶಸ್ವಿ ಎನ್ನಬಹುದಾ? ಉತ್ತರಿಸುವುದು ಕಷ್ಟ. “ಒಂದ್‌ ಕಥೆ ಹೇಳ್ಲಾ’ ಎಂಬ ಚಿತ್ರದಲ್ಲಿ ಒಂದಲ್ಲ, ಎರಡಲ್ಲ, ಐದು ಹಾರರ್‌ ಕಥೆಗಳಿವೆ.

Advertisement

ಇಡೀ ಚಿತ್ರ ಹಾರರ್‌ ಚಿತ್ರವಾಗಿದ್ದರೂ, ಬೇರೆ ಬೇರೆ ರೂಪವಿರುವ ದೆವ್ವದ ಕಥೆ ಹೇಳಿದ್ದಾರೆ ನಿರ್ದೇಶಕರು. ಇದು ಹೊಸ ಪ್ರಯತ್ನ. ಆದರೆ, ಆ ಪ್ರಯತ್ನ ಅಷ್ಟೊಂದು ಪರಿಣಾಮಕಾರಿ ಎನಿಸಿಲ್ಲ ಎಂಬುದು ಸಹ ಅಷ್ಟೇ ನಿಜ. ನಿರ್ದೇಶಕರ ಯೋಚನಾ ಲಹರಿ ಚೆನ್ನಾಗಿಯೇ ಇದೆ. ಆದರೆ, ಅದಕ್ಕೊಂದು ಚೆಂದದ ಚೌಕಟ್ಟು ಇಲ್ಲ ಎಂಬುದು ಬೇಸರದ ಸಂಗತಿ. ಹೌದು, ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ವಿಕಾರವಾಗಿ ಕಾಣುವ ದೆವ್ವಗಳ ಸೃಷ್ಟಿಯೇ ಹೆಚ್ಚು.

ಅದರಲ್ಲೂ ಇಂತಹ ಚಿತ್ರಗಳಿಗೆ ಎಫೆಕ್ಟ್ಸ್ ಮತ್ತು ಹಿನ್ನೆಲೆ ಸಂಗೀತ ಪ್ರಮುಖ ಪಾತ್ರವಹಿಸಬೇಕು. ಇಲ್ಲಿ ಐದು ಕಥೆಗಳೇನೋ ವಿಭಿನ್ನವಾಗಿಯೇ ಇವೆ. ಆದರೆ, ವಿಶೇಷ ಎನಿಸುವಂತಹ ಎಫೆಕ್ಟ್ಸ್ ಇಲ್ಲ. ಬೆಚ್ಚಿಬೀಳಿಸುವಂತಹ ಹಿನ್ನೆಲೆ ಸಂಗೀತವೂ ಇಲ್ಲ. ವಿಕಾರ ಎನಿಸುವ ದೆವ್ವಗಳೂ ಇಲ್ಲ. ಹಾಗಾಗಿ, ಇಲ್ಲಿರುವ ಐದು ಕಥೆಗಳಲ್ಲೂ ದೆವ್ವಗಳ ಆಟ ಸ್ವಲ್ಪ ಸಪ್ಪೆ ಎನಿಸಿವೆ. ನಿರ್ದೇಶಕರ ವಿಭಿನ್ನ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಬಹುದಾದರೂ, ತೆರೆಯ ಮೇಲೆ ಅಳವಡಿಸಿರುವ ದೃಶ್ಯಗಳಿಗೆ ಇನ್ನಷ್ಟು ತಾಕತ್ತು ತುಂಬುವಂತಹ ಪ್ರಯತ್ನ ಆಗಬೇಕಿತ್ತು.

ಈ ರೀತಿಯ ಚಿತ್ರಣ ಕನ್ನಡಕ್ಕೆ ಹೊಸದೇನಲ್ಲ. ಕನ್ನಡದಲ್ಲೇ ಇಂತಹ ನಿರೂಪಣೆಯುಳ್ಳ ಚಿತ್ರಗಳು ಬಂದಿರುವುದುಂಟು. ಆದರೆ, ಇಲ್ಲಿ ಬರುವ ಒಂದೊಂದು ದೆವ್ವದ ಕಥೆಗಳಲ್ಲಿ ಆಗಾಗ ಸಣ್ಣ ತಿರುವುಗಳನ್ನು ಕೊಡುತ್ತ, ಕೊಂಚ ಮಟ್ಟಿಗೆ ಕುತೂಹಲ ಹೆಚ್ಚಿಸುತ್ತ ಹೋಗಿದ್ದಾರೆ ನಿರ್ದೇಶಕರು. ನಿಜಕ್ಕೂ ದೆವ್ವಗಳು ಮನುಷ್ಯರ ಜೊತೆ ಸೇರಿ ತಮ್ಮ ಕಥೆ ಹೇಳಿಕೊಳ್ಳುತ್ತವೆಯಾ, ದೆವ್ವ, ಆತ್ಮ ಎಂಬುದು ನಿಜಾನಾ, ಭ್ರಮೆನಾ? ಇಂತಹ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಕಷ್ಟ.

ಆದರೂ, “ಒಂದ್‌ ಕಥೆ ಹೇಳ್ಲಾ’ ಚಿತ್ರ ನೋಡಿದವರಿಗೆ ಗೊಂದಲ ಮತ್ತು ಪ್ರಶ್ನೆ ಎರಡೂ ಎದುರಾಗುವುದು ಸತ್ಯ. ಒಂದಷ್ಟು ಗೊಂದಲವೂ ಇದೆ ಒಂದಷ್ಟು ಉತ್ತರವೂ ಇದೆ. ಆದರೂ, ಇಲ್ಲಿರುವ ಐದು ಕಥೆಗಳಲ್ಲೂ ದೆವ್ವ ಹೇಗೆ ಪ್ರಮುಖ ಪಾತ್ರವಹಿಸುತ್ತದೆ ಎಂಬ ಅನುಮಾನವಿದ್ದರೆ, ಒಂದೊಂದ್‌ ಕಥೆ ಕೇಳ್‌ಸ್ಕೊಂಡ್‌ ಬರಬಹುದು. ಮೊದಲೇ ಹೇಳಿದಂತೆ, ಇಂತಹ ಹಾರರ್‌ ಕಥೆಗಳಿಗೆ ಎಫೆಕ್ಟ್ಸ್ ಜೋರಾಗಿರಬೇಕು, ಅದಕ್ಕೆ ತಕ್ಕಂತಹ ಹಿನ್ನೆಲೆ ಸಂಗೀತವೂ ಜೊತೆಗೂಡಬೇಕು.

Advertisement

ಎಲ್ಲಕ್ಕಿಂತಲೂ ಹೆಚ್ಚಾಗಿ ಭಯ ಹುಟ್ಟಿಸುವಂತಹ ದೃಶ್ಯಗಳಿರಬೇಕು. ಇಲ್ಲಿರುವ ಐದು ಹಾರರ್‌ ಕಥೆಗಳಲ್ಲಿ ಮೂರು ಹಾರರ್‌ ಕಥೆಗಳು ತೀರಾ ಸರಳ ಮತ್ತು ಸಪ್ಪೆಯೆನಿಸಿದರೆ, ಎರಡು ಹಾರರ್‌ ಕಥೆಗಳಲ್ಲಿ ಮಾತ್ರ ಕೆಲ ದೃಶ್ಯಗಳು ಭಯ ಬೀಳಿಸುವಂತಿವೆ. ಹಾರರ್‌ ಫೀಲ್‌ ಕೊಡುತ್ತವೆ. ಉಳಿದಂತೆ, ಹಾರರ್‌ ಚಿತ್ರಗಳಿಗೆ ಕತ್ತಲು-ಬೆಳಕಿನಾಟವೇ ಜೀವಾಳ. ಆದರೆ, ಇಲ್ಲಿ ಅಂತಹ ಕತ್ತಲು ಬೆಳಕಿನಾಟಕ್ಕೆ ಇನ್ನೂ ಹೆಚ್ಚು ಒತ್ತು ಕೊಡಬಹುದಿತ್ತು.

ಆದರೂ, ಇರುವ ಪರಿಕರ ಬಳಸಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಭಯ ಬೀಳಿಸುವ ಪ್ರಯತ್ನಕ್ಕೆ ಛಾಯಾಗ್ರಾಹಕರ ಕೆಲಸ ಕಾರಣವಾಗುತ್ತದೆ. ಹಾರರ್‌ ಚಿತ್ರಗಳಲ್ಲಿ ಭಯಕ್ಕೆ ಜಾಗವಿದ್ದಷ್ಟು, ನಗುವಿಗೂ ಜಾಗ ಇದ್ದೇ ಇರುತ್ತೆ. ಇಲ್ಲಿ ಹೇಳಿಕೊಳ್ಳುವಂತಹ ಭಯವೂ ಇಲ್ಲ. ಜೋರು ನಗುವಂತಹ ಹಾಸ್ಯವೂ ಇಲ್ಲ. ಆರಂಭದಲ್ಲಿ ನಿರೂಪಣೆ ಕೊಂಚ ನಿಧಾನ ಎನಿಸಿದರೂ, ದ್ವಿತಿಯಾರ್ಧ ಚಿತ್ರ ವೇಗ ಪಡೆದುಕೊಳ್ಳುತ್ತದೆ.

ಇಬ್ಬರು ಹುಡುಗಿಯರೊಂದಿಗೆ ಮೂವರು ಹುಡುಗರು ಕಾರಲ್ಲಿ ಹೋಮ್‌ಸ್ಟೇವೊಂದಕ್ಕೆ ಪಯಣ ಬೆಳೆಸುವ ವೇಳೆ, ಒಬ್ಬೊಬ್ಬರು ಒಂದೊಂದು ಹಾರರ್‌ ಕಥೆ ಹೇಳುತ್ತಾ ಹೋಗುತ್ತಾರೆ. ಅವರ ಎಲ್ಲಾ ಕಥೆಗಳಲ್ಲೂ ವಿಚಿತ್ರ ದೆವ್ವಗಳು ಹೇಗೆಲ್ಲಾ ವರ್ತಿಸುತ್ತವೆ, ಕಾಡುತ್ತವೆ ಎಂಬುದನ್ನು ನಿರ್ದೇಶಕರು ತೋರಿಸುತ್ತಾ ಹೋಗುತ್ತಾರೆ. ಕೊನೆಗೆ ಹೋಮ್‌ಸ್ಟೇ ಸೇರುವ ಆ ಐವರನ್ನು ಹೋಮ್‌ಸ್ಟೇ ನೋಡಿಕೊಳ್ಳುವಾತ ಬರಮಾಡಿಕೊಳ್ಳುತ್ತಾನೆ.

ಅವರನ್ನು ಚೆನ್ನಾಗಿಯೇ ಉಪಚರಿಸುತ್ತಾನೆ. ಬಂದವರಿಗೊಂದು ಕಥೆ ಹೇಳುತ್ತಾನೆ. ಆ ಕಥೆ ಮರುಕ ಹುಟ್ಟಿಸುವಂತಿದ್ದರೂ ಅದರ ನಂತರದ ಸನ್ನಿವೇಶಗಳು ಭಯಾನಕವಾಗಿರುತ್ತವೆ. ಅದು ಏನು ಎಂಬ ಕುತೂಹಲವಿದ್ದರೆ, ಚಿತ್ರ ನೋಡಲ್ಲಡ್ಡಿಯಿಲ್ಲ. ತೆರೆಯ ಮೇಲೆ ಕಾಣಿಸಿಕೊಂಡಿರುವ ಪ್ರತಿಯೊಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದೊಂದು ಕಥೆ ಹೇಳುವ ಐವರ ಅಭಿನಯದಲ್ಲಿನ್ನೂ ಜೋಶ್‌ ಇರಬೇಕಿತ್ತು.

ಆದರೂ, ಕ್ಲೈಮ್ಯಾಕ್ಸ್‌ನಲ್ಲಿ ಅವರ ಚೀರಾಟ, ಓಡಾಟವೆಲ್ಲವೂ ಒಂದು ರೀತಿಯ ಮಜ ಎನಿಸುತ್ತದೆ. ಕೊನೆಯಲ್ಲೊಂದು ಟ್ವಿಸ್ಟ್‌ ಇದೆ. ಅದೇ ಚಿತ್ರದ ಪ್ಲಸ್‌. ರೋಣದ ಬಕ್ಕೇಶ್‌ ಮತ್ತು ಕಾರ್ತಿಕ್‌ ಸಿ.ರಾವ್‌ ಅವರ ಸಂಗೀತದಲ್ಲಿನ್ನೂ ತಾಕತ್ತು ಪ್ರದರ್ಶಿಸಬಹುದಿತ್ತು. ಕೀರ್ತನ್‌ ಪೂಜಾರಿ ಕೈಚಳಕದಲ್ಲಿ ಒಂದಕ್ಕಿಂತ ಒಂದು ಕಥೆಯ ದೃಶ್ಯಗಳು ಬೆಚ್ಚಿಬೀಳಿಸದಿದ್ದರೂ, ತಕ್ಕಮಟ್ಟಿಗೆ ಫೀಲ್‌ ಕೊಡುತ್ತದೆ.

ಚಿತ್ರ: ಒಂದ್‌ ಕಥೆ ಹೇಳ್ಲಾ
ನಿರ್ಮಾಣ: ಕಿರಣ್‌, ಯೋಗೀಶ್‌, ವೀರಣ್ಣ ಇತರರು.
ನಿರ್ದೇಶನ: ಗಿರೀಶ್‌ ಜಿ.
ತಾರಾಗಣ: ತಾಂಡವ್‌ ರಾಮ್‌, ಶಕ್ತಿ ಸೋಮಣ್ಣ, ಪ್ರತೀಕ್‌, ತಾರಾ, ಪ್ರಿಯಾಂಕ, ಪ್ರಣತಿ, ಕಾರ್ತಿಕ್‌ರಾವ್‌, ರಮಾಕಾಂತ್‌, ಸೌಮ್ಯ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next