Advertisement

ಝೀರೋ ವೇಸ್ಟ್‌ ವೆಡಿಂಗ್‌

04:29 PM Jan 08, 2018 | |

ಮದ್ವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ ಎನ್ನುವ ಮಾತುಂಟು. ಆದರೆ, ಆ ಮದ್ವೆಗೆ ಚಪ್ಪರ ಎದ್ದೇಳುವುದು ಭೂಮಿಯ ಮೇಲೆ. ಅಕ್ಷತೆ ಹಾಕಲು ಬಂದ ಬಂಧುಗಳು, ಹಿತೈಷಿಗಳು ಊಟ ಮಾಡುವುದು ಇದೇ ಭೂಮಿ ಮೇಲೆಯೇ. ಹಾಗೆ ಊಟಕ್ಕೆ ಕುಳಿತಾಗ, ಕ್ಯಾಮೆರಾದತ್ತ ನಗು ಬೀರುತ್ತಾ, ಹೊಟ್ಟೆ ತಂಪಿಸಿಕೊಳ್ಳುವ ಒಬ್ಬ ಅತಿಥಿಯ ಮುಂದೆ, ಎಸೆಯಲ್ಪಡುವಂಥ 7 ವಸ್ತುಗಳು ಇರುತ್ತವೆ; ಟೇಬಲ್ಲಿಗೆ ಹಾಸಿದ ಕಾಗದ, ಹಸಿರು ಬಾಳೆಲೆ, ಒಂದು ಬಾಟಲಿ ನೀರು, ಪ್ಲಾಸ್ಟಿಕ್‌ ಲೋಟ, ಐಸ್‌ಕ್ರೀಮ್‌ ಕಪ್‌- ಪ್ಲಾಸ್ಟಿಕ್‌ ಚಮಚ, ಕೊನೆಯದಾಗಿ ಕೈ ತೊಳೆದುಕೊಳ್ಳಲು ಪ್ಲಾಸ್ಟಿಕ್‌ ಬೌಲ್‌… ಇವೆಲ್ಲವೂ ಭೂಮಿಯೊಡಲು ಸೇರುವ ಕಸ. ಮದುಮಕ್ಕಳ ದಿಬ್ಬಣದ ಜತೆಗೆ ಒಂದು ಟ್ರಕ್ಕು ಕಸವೂ ಮಂಟಪದಿಂದ ಹೊರಡುವುದು ಯಾರ ಅರಿವಿಗೂ
ಬರುವುದೇ ಇಲ್ಲ! 

Advertisement

ಅದೇ ಸ್ವಲ್ಪ ಹಿಂದಕ್ಕೆ ಬನ್ನಿ. ಒಂದಿಪ್ಪತ್ತು ವರ್ಷಗಳ ಹಿಂದೆ, ನೆಲದ ಮೇಲೆ ಊಟದ ಪಂಕ್ತಿ. ಬಾಳೆಲೆ ಮುಂದೆ ಸ್ಟೀಲ್‌ ಲೋಟ. ಆಗಿನ್ನೂ ಐಸ್‌ಕ್ರೀಮ್‌, ಕಲ್ಯಾಣ ಮಂಟಪಕ್ಕೆ ಕಾಲಿಟ್ಟಿರಲಿಲ್ಲ. ಪ್ಲಾಸ್ಟಿಕ್‌ ಚಮಚಕ್ಕೆ ಮದ್ವೆಯ ಆಹ್ವಾನ ಪತ್ರವೇ ತಲುಪುತ್ತಿರಲಿಲ್ಲ. ಮುಂದೊಂದು ದಿನ ಕೈತೊಳೆಯಲು ಬೌಲ್‌
ಕೊಡ್ತಾರೆಂಬ “ಸೋಮಾರಿ ಕಲ್ಪನೆ’ಗೆ ಆ ಕಾಲದಲ್ಲಿ ರೆಕ್ಕೆಯೇ ಮೂಡಿರಲಿಲ್ಲ. ಹಾಗೆ ನೋಡಿದರೆ, ಭಾರತದ ಪ್ರಾಚೀನ ಮದ್ವೆಯ ಕಲ್ಪನೆಯಲ್ಲೇ “ಝೀರೋ ವೇಸ್ಟ್‌’ನ ಲೇಪವಿತ್ತು. ಮದ್ವೆಯನ್ನು ಗ್ರ್ಯಾಂಡ್ ಮಾಡುವ ಉಮೇದಿನಲ್ಲಿ, ಪರಿಸರಕ್ಕೆ ನಾವೆಷ್ಟು ತ್ಯಾಜ್ಯವನ್ನು ಸೇರಿಸುತ್ತಿದ್ದೇವೆಂಬ ಪ್ರಶ್ನೆ
ಯಾರಿಗೂ ಕಾಡದಂಥ ಈ ಸಮಯದಲ್ಲಿ, ಬೆಂಗಳೂರಿನ ಒಂದು ಬಳಗ “ಝೀರೋ ವೇಸ್ಟ್‌ ವೆಡ್ಡಿಂಗ್‌’ನ ಹಾದಿ ತುಳಿದಿದೆ. ಈ ಬಳಗ ಇಲ್ಲಿಯ ತನಕ 10ಕ್ಕೂ ಅಧಿಕ ಮದ್ವೆಯನ್ನು ಶೂನ್ಯ ತ್ಯಾಜ್ಯದ ಮೂಲಕ ಮುಗಿಸಿದ್ದು, ಒಂದು ಅಪರೂಪದ ಸಾಹಸ.


ಡಾ. ಮೀನಾಕ್ಷಿ ಭರತ್‌, ಶ್ಯಾಮಲಾ ಸುರೇಶ್‌, ರಮಾಕಾಂತ್‌, ವಾಣಿ ಮೂರ್ತಿ ಸೇರಿದಂತೆ ಐದಾರು ಸಮಾನಾಸಕ್ತರು ಸೇರಿ, ಆರೇಳು ವರುಷದಿಂದ “ಶೂನ್ಯ ತ್ಯಾಜ್ಯ ವಿವಾಹ’ಕ್ಕೆ ಅಡಿಪಾಯ ಹಾಕಿದರು. ಇವರ ಬಂಧು- ಬಳಗವೆಲ್ಲ ಆಗಿದ್ದು “ಝೀರೋ ವೇಸ್ಟ್‌ ವೆಡ್ಡಿಂಗ್‌’! ಅಂದರೆ, ಮದ್ವೆ ಮುಗಿದ
ಮೇಲೆ ಒಂದು ಗ್ರಾಮ್‌ ಕಸವೂ ಭೂಮಿಗೆ ಹೊರೆಯಾಗಬಾರದೆಂಬ ಕಾಳಜಿ ಈ ಯೋಜನೆಯ ಹಿಂದಿದೆ. 

ಕಲ್ಪನೆ ಹುಟ್ಟಿದ್ದು ಹೇಗೆ?
“2004ರಲ್ಲಿ ವೆಲ್ಲೋರ್‌ ಶ್ರೀನಿವಾಸನ್‌ ಅವರು ತಮ್ಮ ಮಗನ ಮದ್ವೆಯನ್ನು “ಝೀರೋ ವೇಸ್ಟ್‌’ ಆಗಿ ಮಾಡಿದ್ದೇ ನನಗೆ ಸ್ಫೂರ್ತಿ’ ಅಂತಾರೆ
ಡಾ. ಮೀನಾಕ್ಷಿ ಭರತ್‌. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೂ ಮೊದಲೇ ಡಾ. ಮೀನಾಕ್ಷಿ, ಒಣ ಕಸ- ಹಸಿ ಕಸ ವಿಂಗಡಣೆಯನ್ನು
ತಮ್ಮ ಮನೆಯಲ್ಲಿ ಜಾರಿ ಮಾಡಿದ್ದರಂತೆ. ಕಸಮುಕ್ತ ನೀತಿ ಮೊದಲು ತಮ್ಮ ಲೈಫ್ಸ್ಟೈಲ್‌ ಆದಾಗ, ಬಂಧು- ಬಳಗಕ್ಕೂ ಆ ಕುರಿತು
ಜಾಗೃತಿ ಮೂಡಿಸಲು ಮುಂದಾದರು.  

ಮದ್ವೆ, ಬರ್ತ್‌ ಡೇ, ಪಾರ್ಟಿಗಳಿಗೆ ಈ ಬಳಗ ಹೋದಾಗ ಅಲ್ಲಿನ ಪ್ಲಾಸ್ಟಿಕ್‌ ತಟ್ಟೆ- ಲೋಟಗಳನ್ನು ಮುಟ್ಟುತ್ತಲೇ ಇರಲಿಲ್ಲ. ಮನೆಯಿಂದಲೇ ಸ್ಟೀಲ್‌ ತಟ್ಟೆ- ಲೋಟಗಳನ್ನು ಕೊಂಡೊಯ್ಯುತ್ತಿದ್ದರಂತೆ. ಪ್ಲಾಸ್ಟಿಕ್‌ ಬಾಟಲಿಗಳ ಬದಲು ಸ್ಟೀಲ್‌ ಬಾಟಲಿಗಳನ್ನೂ ಜತೆಗೊಯ್ಯುತ್ತಿದ್ದರು. ಊಟದ ಟೇಬಲ್ಲಿನಲ್ಲಿ ಬೇರೆಲ್ಲರೂ ಪ್ಲಾಸ್ಟಿಕ್‌ ಸರಕುಗಳ ಮುಂದೆ ಕುಳಿತಾಗ, ಇವರು ಪ್ರತ್ಯೇಕ ಪ್ರಜೆಗಳಂತೆ ಸ್ಟೀಲ್‌ ಸರಕುಗಳನ್ನು ಹೊರಗೆ ತೆಗೆಯುತ್ತಿದ್ದರು. “ಇದೆಲ್ಲ ಎಲ್ಲಿಂದ ಬಂತು? ನಿಮಗೆ ಸ್ಪೆಷೆಲ್ಲಾಗಿ ಕೊಟ್ರಾ?’ ಅಂತ ಕೇಳಿದವರಿಗೆಲ್ಲ, ಕಸದ ಪಾಠ ಬೋಧನೆ. ಆ ಪಾರ್ಟಿ ಮುಗಿದ ಬಳಿಕ, ಅಲ್ಲಿ ಉತ್ಪಾದನೆಯಾದ ಕಸವನ್ನೂ ಇದೇ ತಂಡವೇ ವಿಂಗಡಿಸುತ್ತಿತ್ತು. 

Advertisement

ಕಾಂಪೋಸ್ಟ್‌ ಆಗಬಲ್ಲ ಕಸವನ್ನು ಮನೆಗೆ ತಂದು, ಬಯೋಗ್ಯಾಸ್‌ಗೆ ಬಳಸಿದರು. “ನಾವು ಹೋಗುವ ಕಡೆಗಳಲ್ಲೆಲ್ಲ ಮೊಬೈಲ್‌ ಚಾರ್ಜರನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡಂತೆ ಸ್ಟೀಲ್‌ ತಟ್ಟೆ- ಲೋಟಗಳನ್ನು ಇಟ್ಟುಕೊಂಡಿರುತ್ತಿದ್ದೆವು. ಮದ್ವೆ, ಪಾರ್ಟಿ, ರೈಲ್ವೆ ಸ್ಟೇಷನ್ನುಗಳಲ್ಲಿ… ಹೀಗೆ ಹೋದಲ್ಲೆಲ್ಲ ಅದನ್ನು ಬಳಕೆಗೆ ತಂದೆವು. ಶುಭ ಸಮಾರಂಭಗಳು ಮುಗಿದಾಗ ನಾವೇ ಕಸವನ್ನು ವಿಂಗಡಿಸಿ, ಬಾಳೆಲೆಗಳನ್ನು ಗೋಶಾಲೆಗೆ ಕೊಡುತ್ತಿದ್ದೆವು’ ಎನ್ನುತ್ತಾರೆ ಶ್ಯಾಮಲಾ ಸುರೇಶ್‌.

ಕೇಟರರ್‌ ಮೇಲೆ ನಿಂತಿರುತ್ತೆ!
“ಝೀರೋ ವೇಸ್ಟ್‌ ವೆಡ್ಡಿಂಗ್‌ನಲ್ಲಿ ಹೆಚ್ಚು ಖರ್ಚು ಬರುವುದಿಲ್ಲ. ನಾವು ಕೇಟರರ್‌ಗೆ ಎಲ್ಲವನ್ನೂ ಮುಂಚಿತವಾಗಿ ಹೇಳಿರಬೇಕು. ಯಾವುದೇ ಥರ್ಮಾಕೋಲ್‌, ಪ್ಲಾಸ್ಟಿಕ್‌ ಪದಾರ್ಥ ಬಳಸಬೇಡಿ. ಸ್ಟೀಲ್‌ನ ಚಮಚ, ಲೋಟ, ಕಪ್‌ ಗಳನ್ನೇ ಬಳಸಿ ಅಂತ ಸೂಚಿಸಬೇಕು. ಇದನ್ನೆಲ್ಲ
ಹೊರಗಿನಿಂದ ಬಾಡಿಗೆ ತರುವುದಾದರೆ, ಒಂದು ಚಮಚಕ್ಕೆ 1 ರೂ., ಲೋಟಕ್ಕೆ 3 ರೂ.ನಂತೆ ಬಾಡಿಗೆ ಇರುತ್ತೆ. 5 ರೂ. ಕೊಟ್ಟು ಬಾಳೆಲೆ
ತರುವ ಬದಲು, ಅದೇ 5 ರೂ.ನ ಬಾಡಿಗೆಯಲ್ಲಿ ತಟ್ಟೆಯನ್ನು ತರಬಹುದು. ಟಿಶ್ಯೂ ಪೇಪರ್‌ ಅನ್ನು ದೂರವಿಟ್ಟು ಬಟ್ಟೆಯ ನ್ಯಾಪ್ಕಿನ್‌
ಬಳಸಬೇಕು. ಇವೆಲ್ಲವನ್ನೂ ಮರುಬಳಸಬಹುದು. ಇದೆಲ್ಲವೂ ಎಲ್ಲ ಕೇಟರರ್‌ ಬಳಿ ಇರುತ್ತೆ’ ಎನ್ನುತ್ತಾರೆ ಡಾ. ಮೀನಾಕ್ಷಿ ಭರತ್‌.

ಕಸ ಉತ್ಪತ್ತಿ ಆಗೋಲ್ಲ!
1 ಪೇಪರ್‌ ಕಪ್‌ ಮಾಡೋಕ್ಕೆ, 3 ಲೋಟ ನೀರು ಬೇಕು. ವಿದ್ಯುತ್‌ ಬೇಕು. ಆಯಿಲ್‌ ಬೇಕು. ಮರ ಬೇಕು. ಅದನ್ನು ಒಮ್ಮೆ ಬಳಸಿ, ಬಿಸಾಕಿಬಿಡುತ್ತೇವೆ. ಅದರ ಬದಲು, ಸ್ಟೀಲ್‌ ಲೋಟ ಬಳಸಿದರೆ, ಕಸವೇ ಉತ್ಪತ್ತಿ ಆಗೋಲ್ಲ. ಬಿಸಾಕುವ ಪ್ರಮೇಯವೂ ಬರೋಲ್ಲ. ಭೂಮಿ ಮೇಲೆ ಗಲೀಜೂ ನಿಲ್ಲೋಲ್ಲ. ಒಂದು ಕಪ್‌ ತೊಳೆಯಲು ಖರ್ಚಾಗುವ ನೀರು ಕೇವಲ ಅರ್ಧ ಲೋಟ! ಮೀನಾಕ್ಷಿ ಅವರು ತಮ್ಮ ಇಬ್ಬರು ಮಕ್ಕಳ ಮದ್ವೆಯನ್ನು ಇದೇ “ಝೀರೋ ವೇಸ್ಟ್‌’ ಯೋಜನೆಯಲ್ಲಿಯೇ ಮಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮಗನ ಮದ್ವೆಗೆ 800 ಮಂದಿ ಸೇರಿದ್ದರಂತೆ. ಆಗ ಪ್ಲೇಟು, ಚಮಚಗಳನ್ನೆಲ್ಲ
ಬಾಡಿಗೆಗೆ ತರಿಸಿದ್ದರು. ಊಟದ ಕಸ 30 ಕೆ.ಜಿ. ಉತ್ಪತ್ತಿಯಾಗಿತ್ತಂತೆ. ಅಡುಗೆಮನೆಯ ಕಸ 150 ಕೆ.ಜಿ. ಆಗಿತ್ತು. ಎಂಜಲನ್ನು ಬಯೋಗ್ಯಾಸ್‌ಗೂ,
ಅಡುಗೆಮನೆಯ ಕಸವನ್ನು ಕಾಂಪೋಸ್ಟ್‌ಗೂ ಬಳಸಿ, ಶೂನ್ಯ ತ್ಯಾಜ್ಯದಲ್ಲಿ ಮದ್ವೆ ಮುಗಿಸಿದರು.

ಫ‌ಲ ಕೊಟ್ಟ ಟೊಮೇಟೊ
6 ತಿಂಗಳ ಹಿಂದೆ ಶ್ಯಾಮಲಾ ಸುರೇಶ್‌ ದಂಪತಿ ಮದ್ವೆ ಮಾಡಿಕೊಂಡಿದ್ದೂ ಇದೇ ರೀತಿಯೇ. ಕಲಾವಿದರನ್ನು ಕರೆಯಿಸಿ, ಮಂಟಪದ ಅಲಂಕಾರ
ವನ್ನು ಎಕ್ಸಾಟಿಕ್‌ ಹೂವಿನ ಬದಲು ದೇಸೀ ಹೂವಿನಲ್ಲಿಯೇ ಮಾಡಿದರು. ನಡುನಡುವೆ ತೆಂಗಿನ ಕರಟದಂಥ ತ್ಯಾಜ್ಯದಿಂದ ಅಲಂಕರಿಸಿ
ದರು. ಬಂದ ಅತಿಥಿಗಳಿಗೆ ಚೈನೀಸ್‌ ಜ್ಯೂಟ್‌ನಲ್ಲಿ ಫ‌ಲತಾಂಬೂಲ ನೀಡುವ ಬದಲು ಬಟ್ಟೆಯ ಬ್ಯಾಗ್‌ಗಳಲ್ಲಿ ತೆಂಗಿನಕಾಯಿ ಇಟ್ಟು ಕೊಟ್ಟರು.
ಇದರೊಂದಿಗೆ ಟೊಮೇಟೊ ಬೀಜಗಳನ್ನೂ ನೀಡಿದ್ದರಂತೆ. ಈಗಲೂ ಎಷ್ಟೋ ಮಂದಿ, ತಮ್ಮ ಮನೆಯಲ್ಲಿ ಬೆಳೆದ ಟೊಮೇಟೊ ಹಣ್ಣುಗಳ ಫೋಟೋಗಳನ್ನು ಅವರಿಗೆ ಕಳುಹಿಸುತ್ತಿದ್ದಾರಂತೆ.

“ಊಟದ ಟೇಬಲ್ಲಿಗೆ ಸಾಮಾನ್ಯವಾಗಿ ಪೇಪರ್‌ ಹಾಕ್ತಾರೆ. ಆದರೆ, ನಾವು ಅದನ್ನು ಹಾಕಲಿಲ್ಲ. ಬಟ್ಟೆಗಳನ್ನು ಹಾಸಿದೆವು. ಇದರೊಂದಿಗೆ ಬಟ್ಟೆಯ ನ್ಯಾಪ್ಕಿನ್‌ ಅನ್ನು ತೊಳೆದು ಮರು ಬಳಸುತ್ತಿದ್ದೇವೆ’ ಎನ್ನುತ್ತಾರೆ ಶ್ಯಾಮಲಾ. ಅದ್ಧೂರಿ ಮದ್ವೆಯ ನೆಪದಲ್ಲಿ, ಭೂಮಿಗೆ ಜೀರ್ಣವಾಗದ ಕಸಗಳನ್ನು ಕೊಡುಗೆಯಾಗಿ ನೀಡುವುದಕ್ಕಿಂತ, ಈ “ಝೀರೋ ವೇಸ್ಟ್‌ ವೆಡ್ಡಿಂಗ್‌’ ಎಲ್ಲರಿಗೂ ಮಾದರಿ.

“ಝೀರೋ ವೇಸ್ಟ್‌ ವೆಡ್ಡಿಂಗ್‌’ ಹೇಗಿರುತ್ತೆ?
ಅದು ಆಮಂತ್ರಣ ಪತ್ರಿಕೆಯಿಂದಲೇ ಜಾರಿ. ಪತ್ರಿಕೆಯನ್ನು ಮುದ್ರಿಸುವುದಿಲ್ಲ. ವಾಟ್ಸಾಪ್‌, ಇಮೇಲ್‌ ಇಲ್ಲವೇ ಖುದ್ದಾಗಿ ಭೇಟಿ ಕೊಟ್ಟು ಕರೆಯುವುದು.
ಮಂಟಪ ಅಲಂಕಾರದಲ್ಲಿ ಎಲ್ಲೂ ಪ್ಲಾಸ್ಟಿಕ್‌ ಬಳಸುವುದಿಲ್ಲ. 
ತೆಂಗಿನಗರಿ, ಕಾಯಿಚಿಪ್ಪು… ಇತ್ಯಾದಿಗಳಿಂದ ಮಂಟಪ ಅಲಂಕಾರ.
ಅಡುಗೆ ಬಡಿಸುವಾಗ ಎಲ್ಲೂ ಪ್ಲಾಸ್ಟಿಕ್‌ ಅಥವಾ ಥರ್ಮಾಕೋಲ್‌ ವಸ್ತುಗಳನ್ನು ಬಳಸದಂತೆ ಕೇಟರರ್‌ಗೆ ಸೂಚಿಸುವುದು.
ಪ್ಲಾಸ್ಟಿಕ್‌ ಬಾಟಲಿ ನೀರಿನ ಬದಲು, 20 ಲೀಟರ್‌ ಕ್ಯಾನ್‌ ಬಳಸಿ, ಜಗ್ಗಿನ ಮೂಲಕ ಸ್ಟೀಲ್‌ ಲೋಟಕ್ಕೆ ನೀರು ಪೂರೈಸುವುದು.
ಟಿಶ್ಯೂ ಪೇಪರ್‌ಗಳ ಬದಲು ಬಟ್ಟೆಯ ನ್ಯಾಪ್ಕಿನ್‌ಗಳನ್ನು ಬಳಸುವುದು.
ಊಟಕ್ಕೆ ಸಂಪೂರ್ಣವಾಗಿ ಸ್ಟೀಲ್‌ ತಟ್ಟೆಯ ಬಳಕೆ. ಬಾಳೆಲೆ ಬಳಸಿದರೂ, ನಂತರ ಅದನ್ನು ಗೋಶಾಲೆಗೆ ನೀಡುವುದು.
ಮದುಮಕ್ಕಳು ಬೊಕೆ ಸ್ವೀಕರಿಸುವುದಿಲ್ಲ. ಪ್ಲಾಸ್ಟಿಕ್‌, ಕಾಗದದ ಕವರ್‌ ಇಲ್ಲದೇ ಗಿಫ್ಟ್ ಸ್ವೀಕರಿಸುವುದು. ಅಥವಾ ದೇಣಿಗೆಗೆ ಡಬ್ಬಿ ಇಟ್ಟು, ಆ ಹಣವನ್ನು ಯಾವುದಾದರೂ ಟ್ರಸ್ಟ್‌ಗೆ ದಾನವಾಗಿ ನೀಡುವುದು. ಇದನ್ನು ಮೊದಲೇ ಆಹ್ವಾನ ಪತ್ರಿಕೆಯಲ್ಲಿ ಸೂಚಿಸುವುದು. 
ಮದ್ವೆಯಲ್ಲಿ ಬಳಸಿದ ಹೂವುಗಳನ್ನು ಕಾಂಪೋಸ್ಟ್‌ ಮಾಡುವುದು.

ಊಟ ಮಾಡಿ ಉಳಿದ ಎಂಜಲನ್ನು ಕಾಂಪೋಸ್ಟಿಗೆ ಬಳಸುವುದು. ಊಟ ಮಾಡಿದ ನಂತರ ಎಲೆಯಲ್ಲಿ ಉಳಿದ ಎಂಜಲನ್ನು ಕಾಂಪೋಸ್ಟ್‌ಗೆ ಕಳಿಸುತ್ತೇವೆ. ಅಡುಗೆಮನೆಯಲ್ಲಿ ಥರ್ಮಾಕೋಲ್‌, ಪ್ಲಾಸ್ಟಿಕ್‌ ತಟ್ಟೆ, ಚಮಚಗಳನ್ನು ಬಹಿಷ್ಕರಿಸಿದ್ದೇವೆ. ಎಲ್ಲದಕ್ಕೂ ಸ್ಟೀಲ್‌ ಪಾತ್ರೆ ನಮ್ಮ ಮಂತ್ರ. ಬಾಟಲ್‌ ನೀರನ್ನೂ ಬಳಸುವುದಿಲ್ಲ. ಪಾತ್ರೆ ತೊಳೆಯಲು  ಸೀಗೆಕಾಯಿಯನ್ನು ಬಳಸಿ, ಆ ವ್ಯರ್ಥ ನೀರನ್ನು ತೋಟಕ್ಕೆ ಹಾಕುತ್ತೇವೆ. 
ಶ್ಯಾಮಲಾ ಸುರೇಶ್‌, ಝೀರೋ ವೇಸ್ಟ್‌ ವೆಡ್ಡಿಂಗ್‌ ತಂಡದ ಸದಸ್ಯೆ

ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next