Advertisement

ಬೆಂಬಲ ಬೆಲೆ ಅನ್ವಯ ಭತ್ತ ಖರೀದಿಗೆ ಶೂನ್ಯ ಪ್ರತಿಕ್ರಿಯೆ!

09:49 PM Feb 12, 2020 | Sriram |

ಉಡುಪಿ: 2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಜ್ಯ ಸರಕಾರ ರೈತರಿಂದ ನೇರವಾಗಿ ಭತ್ತ ಖರೀದಿಸಲು ಉಡುಪಿ ಜಿಲ್ಲೆಯಲ್ಲೂ ವ್ಯವಸ್ಥೆ ಮಾಡಿದೆ. ಆದರೆ ಇದಕ್ಕೆ ರೈತರಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ.

Advertisement

ಜಿಲ್ಲೆಯ ಮೂರು ತಾಲೂಕುಗಳಲ್ಲಿ ತೆರೆದಿರುವ ಭತ್ತ ಕೇಂದ್ರಗಳತ್ತ ಜಿಲ್ಲೆಯ ಒಬ್ಬ ಬೆಳೆಗಾರರೂ ಸುಳಿದಿಲ್ಲ. ಒಂದು ಕೆ.ಜಿ ಭತ್ತದ ಖರೀದಿಯೂ ಈ ವರೆಗೆ ನಡೆದಿಲ್ಲ.

ಮೂರು ಕೇಂದ್ರಗಳು
ಭತ್ತ ಬೇಸಾಯದ ರೈತರಿಂದ ಬೇಸಗೆ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸುವುದಕ್ಕಾಗಿ ಸರಕಾರವು ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ಈ ಮೂರು ಕೇಂದ್ರಗಳ ಎಪಿಎಂಸಿ ಪ್ರಾಂಗಣಗಳ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿತ್ತು. ಪ್ರತಿ ಕ್ವಿಂಟಾಲ್‌ ಸಾಮಾನ್ಯ ಭತ್ತಕ್ಕೆ 1815 ರೂ. ಗ್ರೇಡ್‌ 1 ಭತ್ತಕ್ಕೆ 1835 ರೂ. ಬೆಂಬಲ ಬೆಲೆ ನಿಗದಿ ಮಾಡಿತ್ತು.

10 ದಿನದಲ್ಲಿ ಯಾರೂ ಬಂದಿಲ್ಲ
ಜ.1ರಿಂ.ದ ಫೆ.29ರ ವರೆಗೆ ಬೆಂಬಲ ಬೆಲೆ ಅಡಿ ಖರೀದಿಗೆ ಸಮಯ ನಿಗದಿಪಡಿಸಲಾಗಿದೆ.

ಕೇಂದ್ರ ಆರಂಭಿಸಿ ಒಂದು ತಿಂಗಳು ಹತ್ತು ದಿನಗಳು ಕಳೆದಿವೆ. ಇದುವರೆಗೆ ಯಾರೂ ಕೂಡ ಖರೀದಿ ಕೇಂದ್ರಕ್ಕೆ ಬೆಳೆಯನ್ನು ತಂದಿಲ್ಲ.

Advertisement

ಘೋಷಣೆ ವಿಳಂಬ
ಮುಂಗಾರು ಅವಧಿಯಲ್ಲಿ 36 ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ಕೃಷಿಯ ಗುರಿ ಇರಿಸಿಕೊಳ್ಳಲಾಗಿತ್ತು. 35,485,62 ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಮಾಡಲಾಗಿತ್ತು. ಮುಂಗಾರು ಮಳೆ ಚೆನ್ನಾಗಿ ಬಿದ್ದ ಪರಿಣಾಮ ಫ‌ಸಲು ಕೂಡ ಉತ್ತಮವಾಗಿತ್ತು. ಮಳೆಗೆ ಬೆದರಿದ ರೈತಾಪಿ ವರ್ಗ ಕಟಾವು ಮುಗಿದ ತತ್‌ಕ್ಷಣ ಮಿಲ್‌ಗ‌ಳಿಗೆ ಉತ್ಪನ್ನವನ್ನು ಕೊಂಡು ಕೊಂಡು ಹೋಗಿ ಭತ್ತ ಮಾರಾಟ ಮಾಡಿದ್ದಾರೆ. ಬೆಂಬಲ ಬೆಲೆ ವಿಳಂಬ ಘೋಷಣೆಯಿಂದ ಭತ್ತ ಬೆಳೆಗಾರರಿಗೆ ಬೆಂಬಲ ಬೆಲೆ ಪ್ರಯೋಜನಕ್ಕೆ ಬರುತ್ತಿಲ್ಲ.

ಖರೀದಿ ಕೇಂದ್ರ ಸದಾ ತೆರೆದಿರಲಿ
ಬೆಂಬಲ ಬೆಲೆ ಯೋಜನೆಗೆ ಸಂಬಂಧಿಸಿದಂತೆ ಸರಕಾರದ ನಿಲುವೇ ಸರಿ ಇಲ್ಲ. ಭತ್ತ ಮಾತ್ರವಲ್ಲ ರೈತರ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಕೇಂದ್ರಗಳು ಯಾವತ್ತೂ ತೆರೆದಿರಬೇಕು. ಯಾವಾಗ ಬೆಲೆ ಕುಸಿಯುತ್ತದೆಯೋ ಆಗ ಈ ಕೇಂದ್ರಗಳು ಹೆಚ್ಚು ಸಕ್ರಿಯವಾಗಬೇಕು. ಹಾಗಾದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಕೃಷಿಗೆ ಸಂಬಂಧಿಸಿ ಹಲವು ತಾಲೂಕುಗಳಲ್ಲಿ ಕೇಂದ್ರಗಳ ಕಚೇರಿ ತೆರೆದಿವೆ ಅಲ್ಲೇ ಮೂಲ ಸೌಕರ್ಯ ಒದಗಿಸಿ ವ್ಯವಸ್ಥೆ ಕಲ್ಪಿಸಬಹುದೆನ್ನುವುದು ರೈತರ ಒತ್ತಾಯವಾಗಿದೆ.

ಸಂಗ್ರಹಕ್ಕೆ ಜಾಗದ ಕೊರತೆ
ಬೆಲೆ ಬಿದ್ದು ಹೋದಾಗ ರೈತರ ನೆರವಿಗೆ ಬರಲು ಸರಕಾರ ತುಂಬ ಸಮಯ ತೆಗೆದುಕೊಳ್ಳುತ್ತದೆ. ಅಷ್ಟು ಹೊತ್ತಿಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿರುತ್ತಾರೆ. ಒಂದು ವಾರದಿಂದ ಒಂದು ತಿಂಗಳ ಒಳಗಾಗಿ ಭತ್ತದ ಕಟಾವು ಮುಗಿದಿರುತ್ತದೆ. ಯಾವ ರೈತರು ಕೂಡ ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಅದಕ್ಕೆ ಅವರಲ್ಲಿ ಜಾಗವೂ ಇರುವುದಿಲ್ಲ. ಬೇಗ ಮಾರಾಟ ಮಾಡುವ ಅನಿವಾರ್ಯ ಇರುತ್ತದೆ .

ಬೆಂಬಲ ಬೆಲೆ ಕೇಂದ್ರ
ಉಡುಪಿ, ಕುಂದಾಪುರ, ಕಾರ್ಕಳ ಎಪಿಎಂಸಿ ಪ್ರಾಂಗಣ. (ಖರೀದಿ ಅವಧಿ-ಜ.1ರಿಂದ ಫೆ.29).

ಫೆ. 29ರ ವರೆಗೆ ಅವಕಾಶ
ಭತ್ತ ಖರೀದಿ ಕೇಂದ್ರಗಳನ್ನು ತೆರೆದರೂ ಭತ್ತ ನೀಡಲು ಯಾರು ಬಂದಿಲ್ಲ. ಫೆ.29ರ ತನಕ ನೋಂದಣಿಗೆ ಅವಕಾಶವಿದೆ. ಅಲ್ಲಿ ತನಕ ನಿರೀಕ್ಷೆ ಇರಿಸಿಕೊಂಡಿದ್ದೇವೆ.
-ಬಿ.ಕೆ ಕುಸುಮಾಧರ, ಉಪ ನಿರ್ದೇ ಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಡುಪಿ

ಪ್ರಯೋಜನವಿಲ್ಲ
ಭತ್ತದ ಬೆಳೆ ಕಟಾವಿಗೆ ಬರುವ ಹೊತ್ತಲ್ಲೇ ಬೆಂಬಲ ಬೆಲೆ ಘೋಷಣೆಯಾದರೆ ರೈತರಿಗೆ ಅನುಕೂಲ. ಕ್ಲಪ್ತ ಸಮಯಕ್ಕೆ ರೈತರಿಗೆ ನೆರವಾಗುವಂತಹ ವ್ಯವಸ್ಥೆಗಳನ್ನು ಸರಕಾರ ಮಾಡಬೇಕು. ಇನ್ಯಾವುದೋ ಅವಧಿಯಲ್ಲಿ ಬೆಂಬಲ ಘೋಷಿಸಿದರೆ ಏನೂ ಪ್ರಯೋಜನವಿಲ್ಲ.
-ಶರತ್‌ಕುಮಾರ್‌ ಶೆಟ್ಟಿ , ಅಧ್ಯಕ್ಷರು. ಎಪಿಎಂಸಿ ಕುಂದಾಪುರ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next