ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಇದುವರೆಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ (ಎಂಕೆಸಿಸಿ) ಹೆಸರಿನಲ್ಲಿ ಸಿಗುತ್ತಿದ್ದ ಶೂನ್ಯ ಬಡ್ಡಿ ದರದ ಸಾಲ ಇನ್ನು ಮುಂದೆ ಅವಿಭಕ್ತ ಕುಟುಂಬಗಳ ಎಲ್ಲ ರೈತರಿಗೂ ಲಭ್ಯವಾಗದು. ಈ ಸಂಬಂಧ ರಾಜ್ಯ ಸರಕಾರ ಹೊಸ ನಿಯಮಾವಳಿ ಹೊರಡಿಸಿದೆ.
ಪ್ರಾ.ಕೃ.ಪ.ಸ. ಸಂಘ ಗಳಲ್ಲಿ ರೈತರಿಗೆ ಎಂಕೆಸಿಸಿ ಹೆಸರಲ್ಲಿ 3 ಲಕ್ಷ ರೂ. ತನಕ ಸಾಲ ಸಿಗುತ್ತಿದೆ. ವರ್ಷದೊಳಗೆ ಅಸಲು ಮೊತ್ತ ಪಾವತಿಸಿದರೆ ನವೀಕರಿಸಲು ಅವಕಾಶ ಇದೆ. ಈ ಸಾಲ ಶೇ. 12 ಬಡ್ಡಿ ಹೊಂದಿ ದ್ದರೂ ಶೇ. 7.4 ಬಡ್ಡಿಯನ್ನು ರಾಜ್ಯ ಸರಕಾರ ಹಾಗೂ ಇನ್ನುಳಿದ ಶೇ. 4.6ನ್ನು ಕೇಂದ್ರ ಸರಕಾರ ಮತ್ತು ನಬಾರ್ಡ್ ಭರಿಸುತ್ತವೆ. ಅವಿಭಕ್ತ ಕುಟುಂಬಗಳಲ್ಲಿ ಕೃಷಿ ಜಮೀನನ್ನು ಪಾಲು ಮಾಡಿಕೊಂಡರೂ ಒಂದೇ ಮನೆಯಲ್ಲಿ, ಒಂದೇ ಪಡಿತರ ಚೀಟಿ ಪಡೆದು ವಾಸವಿರುವ ಅನೇಕ ಮಂದಿ ಇದ್ದಾರೆ. ಉದಾಹರಣೆಗೆ ಮೂವರು ಸಹೋದರರು ಇದ್ದರೆ ಆಸ್ತಿ ಪಾಲು ಮಾಡಿ ಕೊಂಡು ಅವರವರ ಹೆಸರಲ್ಲಿ ಪಹಣಿ ಪತ್ರ ಹೊಂದಿರು ತ್ತಾರೆ. ಆದರೂ ಒಂದೇ ಮನೆಯಲ್ಲಿದ್ದು ಒಂದೇ ಪಡಿತರ ಚೀಟಿ ಹೊಂದಿರುತ್ತಾರೆ. ಕೆಲವೆಡೆ ಪತಿ-ಪತ್ನಿ ಬೇರೆ ಬೇರೆ ಪಹಣಿ ಪತ್ರ ಹೊಂದಿರುವುದೂ ಇದೆ. ಇದುವರೆಗೆ ಇಂಥವರೂ ಪ್ರಾ.ಕೃ.ಪ.ಸ. ಸಂಘಗಳಿಂದ 3 ಲಕ್ಷ ರೂ. ವರೆಗಿನ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಪಡೆಯಲು ಅರ್ಹರಾಗಿದ್ದರು.
ಬದಲಾದ ನಿಯಮ ಆದರೆ ಇತ್ತೀಚೆಗೆ ಕರ್ನಾಟಕ ಸರಕಾರವು 2019ರ ಎ. 1ರಿಂದ ಪೂರ್ವಾನ್ವಯ ಆಗುವಂತೆ ಹೊಸ ನಿಯಮ ಪ್ರಕಟಿಸಿದೆ. ಇದರಂತೆ ಒಂದು ಕುಟುಂಬದಲ್ಲಿ ಆಸ್ತಿ ಎಷ್ಟು ಜನರಿಗೆ ಪಾಲಾಗಿದ್ದರೂ ಪಹಣಿ ಪತ್ರ ಪ್ರತ್ಯೇಕವಾಗಿದ್ದರೂ ಹೆಸರು ಒಂದೇ ಪಡಿತರ ಚೀಟಿಯಲ್ಲಿ ಇದ್ದರೆ ಒಟ್ಟು 3 ಲಕ್ಷ ರೂ. ಸಾಲ ಮಾತ್ರ ಶೂನ್ಯ ಬಡ್ಡಿ ದರಕ್ಕೆ ಅರ್ಹವಾಗುತ್ತದೆ. ಉದಾಹರಣೆಗೆ ಒಂದು ಕುಟುಂಬದ ಮೂವರು ತಲಾ 2 ಲಕ್ಷ ರೂ.ಗಳಂತೆ 6 ಲಕ್ಷ ರೂ. ಸಾಲ ಪಡೆದಿದ್ದರೆ 3 ಲಕ್ಷ ರೂ.ಗೆ ಶೂನ್ಯ ಬಡ್ಡಿದರ ಅನ್ವಯಿಸುತ್ತದೆ. ಉಳಿದ ಸಾಲಕ್ಕೆ ರಾಜ್ಯ ಸರಕಾರದ ಭಾಗವಾದ ವಾರ್ಷಿಕ ಶೇ. 7.4 ಬಡ್ಡಿದರ ಪಾವತಿಸಬೇಕು. ಈ ಹೊಸ ಕಾನೂನಿನಿಂದ ಅನೇಕ ಅವಿಭಕ್ತ ಕುಟುಂಬಗಳು ಕಂಗಾಲಾಗಿವೆ. ಕೊರೊನಾ, ಮಾರುಕಟ್ಟೆ ಸಮಸ್ಯೆ ಇತ್ಯಾದಿಗಳಿಂದ ಈಗಾಗಲೇ ಕಂಗೆಟ್ಟಿರುವ ರೈತ ರಿಗೆ ಈ ನಿಯಮ ಗಾಯದ ಮೇಲೆ ಬರೆ ಎಳೆದಿದೆ.
ಬೇರೆ ಬೇರೆ ಪಹಣಿ ಪತ್ರ ಹೊಂದಿದ್ದರೂ ಸಾಲ ಪಡೆದವರ ಹೆಸರು ಒಂದೇ ಪಡಿತರ ಚೀಟಿಯಲ್ಲಿದ್ದರೆ 3 ಲಕ್ಷ ರೂ. ಮೊತ್ತಕ್ಕೆ ಮಾತ್ರ ಶೂನ್ಯ ಬಡ್ಡಿದರ ಅನ್ವಯಿಸುತ್ತದೆ.
– ಪ್ರವೀಣ್ ನಾಯಕ್, ಉಪ ನಿಬಂಧಕರು, ಸಹಕಾರ ಇಲಾಖೆ, ಮಂಗಳೂರು
Related Articles
ಈ ನಿಯಮವನ್ನು ಕೈ ಬಿಡುವಂತೆ ಈಗಾ ಗಲೇ ಹಲವಾರು ಮನವಿಗಳು ಬಂದಿದ್ದು, ಸರಕಾರದ ಗಮನಕ್ಕೆ ತರಲಾಗುವುದು.
– ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ