Advertisement

ಬೀದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದ ಸಾಲ

06:00 AM Oct 28, 2018 | |

ಬೆಂಗಳೂರು: ರಾಜ್ಯದಲ್ಲಿ ಬೀದಿ ವ್ಯಾಪಾರಿಗಳಿಗೆ ದೀಪಾವಳಿ ಕೊಡುಗೆಯಾಗಿ ಶೂನ್ಯ ಬಡ್ಡಿ ದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ “ಬಡವರ ಬಂಧು’ ಯೋಜನೆ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ತರಕಾರಿ ಮಾರುಕಟ್ಟೆ, ತಳ್ಳುಗಾಡಿ ಹಾಗೂ ಬೀದಿ ಬದಿ ಪ್ರತಿನಿತ್ಯ ಮಾರಾಟ ತರಕಾರಿ, ಹೂವು-ಹಣ್ಣು ಮಾರಾಟ ಮಾಡುವ 53 ಸಾವಿರ ಬೀದಿ ವ್ಯಾಪಾರಿಗಳಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ಸಿಗಲಿದೆ.

Advertisement

ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಲೈಸೆನ್ಸ್‌ ಇದ್ದರೆ ಸಾಕು. ಯಾವುದೇ ಖಾತರಿಯಿಲ್ಲದೆ ಹತ್ತು ಸಾವಿರ ರೂ.ವರೆಗೆ ಸಾಲ ಪಡೆಯಬಹುದು. ಮರುಪಾವತಿಯ ಆಯ್ಕೆಯೂ ವ್ಯಾಪಾರಿಗಳದೇ ಆಗಿರಲಿದ್ದು,  ಹತ್ತು ಸಾವಿರ ರೂ. ಮೂಲ ಬಂಡವಾಳವಾಗಿ ಮಾಡಿಕೊಂಡು ಪಿಗ್ಮಿ ವಿಧಾನದಂತೆ ದುಡಿದ ನಿತ್ಯ 100 ರೂ. ಪಾವತಿಸಿ ತೀರಿಸಬಹುದು.

ಡಿಸಿಸಿ ಬ್ಯಾಂಕುಗಳು ಹಾಗೂ ನೋಡಲ್‌ ಏಜೆನ್ಸಿಗಳಿಗೆ ಯೋಜನೆಯ ಅನುಷ್ಟಾನದ ಹೊಣೆ ವಹಿಸಲಾಗಿದ್ದು, ಒಂದು ಸಾವಿರ ವ್ಯಾಪಾರಿಗಳಿಗೆ ಒಂದರಂತೆ ಮೊಬೈಲ್‌ ವಾಹನಗಳು ಸಾಲ ನೀಡಲು ಸಂಚಾರ ಮಾಡಲಿವೆ.ಬೀದಿ ವ್ಯಾಪಾರಿಗಳನ್ನು ಮೀಟರ್‌ ಬಡ್ಡಿ ಮಾಫಿಯಾ ಕಪಿಮುಷ್ಠಿಯಿಂದ ಬಿಡಿಸಿ ಯಾರ ಹಂಗೂ ಇಲ್ಲದೆ ಸ್ವಂತ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.

ಈ ಯೋಜನೆಯಡಿ ಡಿಸಿಸಿ ಬ್ಯಾಂಕುಗಳು ತಮ್ಮ ಬಳಿ ಇರುವ ಹಣದಲ್ಲಿ ಸಾಲ ನೀಡಲಿದ್ದು ರಾಜ್ಯ ಸರ್ಕಾರವೇ ಬಡ್ಡಿ ಮರು ಪಾವತಿಸಲಿದೆ. ಒಂದೊಮ್ಮೆ ಸಾಲ ಪಡೆದ ವ್ಯಾಪಾರಿಗಳು ಅಪಘಾತ ಅಥವಾ ಅನಾರೋಗ್ಯದಿಂದ ಮೃತಪಟ್ಟರೂ ಸರ್ಕಾರ ಸಾಲದ ಹಣ ಬ್ಯಾಂಕುಗಳಿಗೆ ಪಾವತಿಸಲಿದೆ. ಈ ಬಗ್ಗೆ ಡಿಸಿಸಿ ಬ್ಯಾಂಕುಗಳಿಗೆ ಖಾತರಿಯನ್ನೂ ನೀಡಲಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ 53 ಕೋಟಿ ರೂ.ವರೆಗೆ ಸಾಲ ನೀಡಲು ಉದ್ದೇಶಿಸಲಾಗಿದ್ದು, ವಾರ್ಷಿಕವಾಗಿ 2 ಕೋಟಿ ರೂ.ವರೆಗೆ ಸರ್ಕಾರಕ್ಕೆ ಬಡ್ಡಿ ಹೊರೆ ಬೀಳಲಿದೆ.

ಆದ್ಯತೆ
ಈ ಹಿಂದೆ ಯೋಜನೆಯಡಿ ಸಾಲ ನೀಡಿ ಸಂಜೆ ವೇಳೆಗೆ ವಾಪಸ್‌ ಪಡೆಯುವ ಚಿಂತನೆ ಮಾಡಲಾಗಿತ್ತು. ಆದರೆ, ಮಂಗಳೂರು, ಬೆಂಗಳೂರು, ಕಲಬುರಗಿ ಸೇರಿ ರಾಜ್ಯದ ವಿವಿಧೆಡೆ ಸಹಕಾರ ಸಚಿವರು ಹಾಗೂ ಅಧಿಕಾರಿಗಳು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ ವೇಳೆ, ಬೆಳಗ್ಗೆ ಕೊಟ್ಟು ರಾತ್ರಿ ವಾಪಸ್‌ ಪಡೆದರೆ ನಾವು ಮತ್ತೆ ಬೆಳಗ್ಗೆ ವ್ಯಾಪಾರ ಆರಂಭಿಸಲು ಹಣಕ್ಕಾಗಿ ಮೊಬೈಲ್‌ ವಾಹನ ಬರುವವರೆಗೂ ಕಾಯಬೇಕಾಗುತ್ತದೆ. ಅದರ ಬದಲು ನೀವು ನೀಡುವ ಸಾಲ ಮೂಲ ಬಂಡವಾಳವಾಗಿ ಇಟ್ಟುಕೊಂಡು ಅದರಲ್ಲಿ ದುಡಿದ ಲಾಭದಲ್ಲಿ ಪಿಗ್ಮಿ ಮಾದರಿಯಲ್ಲಿ ಮರು ಪಾವತಿ ಮಾಡಿದರೆ ನಮಗೆ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಅವರ ಬೇಡಿಕೆಗೆ ಆದ್ಯತೆ ನೀಡಿ ಯೋಜನೆಯಲ್ಲಿ ಮಾರ್ಪಾಡು ಮಾಡಿ ಅನುಷ್ಟಾನಗೊಳಿಸಲು ಸರ್ಕಾರ ನಿರ್ಧರಿಸಿದೆ.

Advertisement

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಬಡವರ ಬಂಧು’ ಯೋಜನೆ ದೀಪಾವಳಿಗೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದೇವೆ. ಹಣಕಾಸು ಇಲಾಖೆಯ ಒಪ್ಪಿಗೆಯೂ ದೊರೆತಿದ್ದು  ಆದೇಶ ಹೊರಡಿಸುವುದಷ್ಟೇ ಬಾಕಿಯಿದೆ.
ಬಂಡೆಪ್ಪ ಕಾಶಂಪೂರ್‌, ಸಹಕಾರ ಸಚಿವರು

ಸಣ್ಣ ವ್ಯಾಪಾರಿಗಳಿಗೂ ವಿಸ್ತರಣೆ ?
ಬೀದಿ ಬದಿ ವ್ಯಾಪಾರಿಗಳ ನಂತರ ಎರಡನೇ ಹಂತದಲ್ಲಿ 50 ಸಾವಿರ ರೂ.ವರೆಗೆ ಸಣ್ಣ ವ್ಯಾಪಾರಿಗಳಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ಒದಗಿಸುವ ಯೋಜನೆ ಜಾರಿಗೊಳಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಹಿಂದುಳಿದ, ವಾಲ್ಮೀಕಿ, ಅಂಬೇಡ್ಕರ್‌, ಅಲ್ಪಸಂಖ್ಯಾತರ ನಿಗಮಗಳ ಮೂಲಕ ಯೋಜನೆ ಅನುಷ್ಟಾನಕ್ಕೆ ರೂಪು-ರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next