Advertisement
ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಕಸ ವಿಲೇವಾರಿ, ಚರಂಡಿ, ರಸ್ತೆ ನಿರ್ಮಾಣ, ಯುಜಿಡಿ ಸಂಪರ್ಕ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳಿಂದ ವಂಚಿತವಾಗಿ ಸ್ಥಳೀಯ ನಿವಾಸಿಗಳು ಕಚೇರಿಗೆ ಪ್ರತಿನಿತ್ಯ ಅಲೆದಾಡುವ ಸ್ಥಿತಿ ಬಂದೋದಗಿದೆ.
Related Articles
Advertisement
ಕಲುಷಿತಗೊಳ್ಳುತ್ತಿರುವ ನೀರು: ಪುರಸಭೆ ವ್ಯಾಪ್ತಿಯಲ್ಲಿ ಹಾದುಹೋಗುವ ಶಿಂಷಾ ನದಿ ಹಾಗೂ ಕೆಮ್ಮಣ್ಣು ನಾಲೆಗೆ ಕಳೆದ ಹಲವಾರು ವರ್ಷಗಳಿಂದಲೂ ಯುಜಿಡಿ ಸಂಪರ್ಕದ ತ್ಯಾಜ್ಯ ನೀರು ಹರಿಯುತ್ತಿದ್ದು ಇದರಿಂದಾಗಿ ನೀರು ಕಲುಷಿತಗೊಳ್ಳುವ ಜತೆಗೆ ಈ ವ್ಯಾಪ್ತಿಯ ಜನ ಜಾನುವಾರುಗಳಿಗೆ ಚರ್ಮ ವ್ಯಾದಿ ಕಾಯಿಲೆಗಳು ಕಂಡು ಬರುತ್ತಿದ್ದರೂ ಅಧಿಕಾರಸ್ಥ ರಾಜಕಾರಣಿಗಳು ಇತ್ತ ಗಮನಹರಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಪ್ರತಿಭಟನೆ ನಡೆಸಿದರು ಪ್ರಯೋಜನವಾಗಿಲ್ಲ: ಯುಜಿಡಿ ಸಂಪರ್ಕದ ತ್ಯಾಜ್ಯ ನೀರನ್ನು ನಾಲೆಗೆ ಹಾಗೂ ಶಿಂಷಾ ನದಿಗೆ ಹರಿಬಿಡದಂತೆ ಸ್ಥಳೀಯ ಸಂಘ, ಸಂಸ್ಥೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಅಶುಚಿತ್ವ ಹಾಗೂ ಅನೈರ್ಮಲ್ಯಕ್ಕೆ ಕಾರಣರಾಗುವ ಮೂಲಕ ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ.
ನೀರಿನ ಸಮಸ್ಯೆ: ಕೆಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಒಂದು ವಾರಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ನೀರಿನ ಹಾಹಾಕಾರ ಉಂಟಾಗಿ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಪ್ರತಿಷ್ಠೆಗಾಗಿ ಟ್ಯಾಂಕರ್ ಮೂಲಕ ಆಯಾ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವ ಮೂಲಕ ನೀರಿನ ಸಮಸ್ಯೆ ನೀಗಿಸಲು ಮುಂದಾಗುತ್ತಿದ್ದಾರಷ್ಟೇ.
ಬೀದಿ ನಾಯಿಗಳ ಹಾವಳಿ ತಪ್ಪಿಸಿ: ಪಟ್ಟಣ ವ್ಯಾಪ್ತಿಯ ಜನಸಂದಣಿ ಪ್ರದೇಶಗಳಲ್ಲೇ ಅಶುಚಿತ್ವ ತಾಂಡವವಾಡುವ ಜತೆಗೆ ಕಸ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಂಡೆ ದಿನನಿತ್ಯ ಕಾಲ ದೂಡುವ ಪರಿಸ್ಥಿತಿ ಬಂದೊದಗಿದ್ದು ರಾಶಿಗಟ್ಟಲೆ ಬಿದ್ದಿರುವ ಕಸವನ್ನು ವಿಲೇವಾರಿ ಮಾಡದ ಜತೆಗೆ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ಪದಾರ್ಥಗಳನ್ನು ಹಾಕುವುದರಿಂದ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ.
ಪಟ್ಟಣದ ಎಚ್.ಕೆ.ವಿ ನಗರ, ಸಿದ್ಧಾರ್ಥನಗರ, ವಿಶ್ವೇಶ್ವರಯ್ಯ ನಗರ, ವಿವೇಕಾನಂದ ನಗರ ಸೇರಿದಂತೆ ಇನ್ನಿತರೆ ವಾರ್ಡ್‌ಗಳಲ್ಲಿ ಯುಜಿಡಿ ಸಂಪರ್ಕದ ತ್ಯಾಜ್ಯ ನೀರು ಮ್ಯಾನ್‌ಹೋಲ್ಗಳಲ್ಲಿ ಉಕ್ಕಿ ಹರಿಯುತ್ತಿದ್ದು ಸ್ಥಳೀಯ ನಿವಾಸಿಗಳು ಸಂಚರಿಸಲು ಹೆಣಗಾಡಬೇಕಾದ ಸ್ಥಿತಿ ಬಂದೊದಗಿದೆ.
ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲ: ಯುಜಿಡಿ ಸಂಪರ್ಕದ ಯಂತ್ರೋಪಕರಣಗಳು ತುಕ್ಕು ಹಿಡಿದಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರೂ. ವೆಚ್ಚದ ಯಂತ್ರಗಳು ಗುಜರಿಯ ಪಾಲಾಗುತ್ತಿದ್ದು ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡುವಂತೆ ಮೇಲಧಿಕಾರಿಗಳ ಆದೇಶವಿದ್ದರೂ ಕವಡೆ ಕಾಸಿನ ಕಿಮ್ಮತ್ತು ಇಲ್ಲದೆ ತ್ಯಾಜ್ಯ ನೀರು ಪ್ರತಿನಿತ್ಯ ಶಿಂಷಾ ಒಡಲನ್ನು ಸೇರುತ್ತಿರುವುದು ದುರಂತವೇ ಸರಿ.
ಅಧಿಕಾರಿಗಳಿಂದ ವಿಳಂಬ ಧೋರಣೆ: ಪುರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳು, ಚರಂಡಿಯಲ್ಲಿ ಹೂಳು ತುಂಬಿರುವುದು, ರಸ್ತೆ ಬದಿಯಲ್ಲಿ ಆಳೇತ್ತರದ ಗಿಡಗಂಟಿಗಳು ಬೆಳೆದು ನಿಂತು ಪಟ್ಟಣದ ನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದು ಬೆರಳೆಣಿಕೆಯಷ್ಟಿರುವ ಪೌರ ಕಾರ್ಮಿಕರ ಸಮಸ್ಯೆಯಿಂದಾಗಿ ಅಶುಚಿತ್ವ ತಾಂಡವಾಡುತ್ತಿದ್ದು ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಅಧಿಕಾರಿಗಳು ಸಮರ್ಪಕವಾಗಿ ವೇತನ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.
ಕ್ರಿಯಾ ಯೋಜನೆ ಸಿದ್ಧಪಡಿಸಬೇಕು: ಪುರಸಭೆಗೆ ನೆಲ ಬಾಡಿಗೆ, ಅಂಗಡಿ ಮಳಿಗೆ, ವಾಹನ ಶುಲ್ಕ, ತೆರಿಗೆ ಹಣ ಸೇರಿದಂತೆ ಇನ್ನಿತರೆ ಮೂಲಗಳಿಂದ ಕೋಟ್ಯಂತರ ರೂ. ಹಣ ಹರಿದುಬರುತ್ತಿದ್ದರೂ ಅಭಿವೃದ್ಧಿ ಒಟ್ಟಾರೆ ಕೆಲ ವಾರ್ಡ್‌ಗಳಲ್ಲಿ ಹತ್ತು ಹಲವು ಸಮಸ್ಯೆಗಳು ತಲೆ ದೋರಿದ್ದು ಅಧಿಕಾರ ನಡೆಸುವ ಅಧಿಕಾರಿಗಳು ಚುನಾಯಿತ ಪ್ರತಿನಿ ಧಿಗಳ ಜತೆ ಚರ್ಚಿಸಿ ಪಟ್ಟಣದ ಅಭಿವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆ ತಯಾರಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಿದೆ.
● ಎಸ್.ಪುಟ್ಟಸ್ವಾಮಿ