Advertisement

ಝೀ ಟಿ.ವಿ ಸುಬ್ಬಲಕ್ಷ್ಮಿಗೆ ಬರೀ ರೋಲು

11:01 AM Aug 02, 2017 | |

ಬಾಲನಟಿಯಾಗಿ, ಕಂಠದಾನ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ, ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ, ನಿರೂಪಕಿಯಾಗಿ… ಹೀಗೆ ನಾನಾ ಥರದ ರೋಲುಗಳನ್ನು ಮಾಡಿ ಚಿರಪರಿಚಿತವಾಗಿರುವ ಹೆಸರು ದೀಪಾ. ಸದ್ಯಕ್ಕೆ ಈಕೆಯನ್ನು ಸುಬ್ಬಲಕ್ಷ್ಮಿಎಂದು ಕರೆದರೇ ಹೆಚ್ಚು ಸೂಕ್ತ. ಏಕೆಂದರೆ ಮನೆಮನೆಗಳಲ್ಲೂ ಸುಬ್ಬಲಕ್ಷ್ಮಿ ಅಭಿಮಾನಿಗಳು ಇದ್ದಾರೆ. ಸುಬ್ಬಲಕ್ಷ್ಮಿಯಂತೆ ನಾನು ಮುಗ್ಧಳಲ್ಲ, ನಾನು ತುಂಬಾ ಪ್ರಾಕ್ಟಿಕಲ್‌ ಎನ್ನುವ ಈ ಹುಡುಗಿ, ಹಳ್ಳಿ ಹುಡುಗಿಯಾಗಿ ಪಾತ್ರದ ಪರಕಾಯ ಪ್ರವೇಶ ಮಾಡಿರುವುದು ನೋಡಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ನಟ ಸುದೀಪ್‌ ನಿರ್ದೇಶಿಸಿ, ನಟಿಸಿದ್ದ ‘ಮೈ ಆಟೋಗ್ರಾಫ್’, ‘ಶಾಂತಿ ನಿವಾಸ’ ಸಿನಿಮಾಗಳಲ್ಲಿ, “ಪ್ರೀತಿ ಇಲ್ಲದ ಮೇಲೆ’, “ಸಾಕ್ಷಿ’ ಧಾರಾವಾಹಿಗಳ ಪ್ರಮುಖ ಪಾತ್ರಗಳಲ್ಲೂ ಮಿಂಚಿದ್ದಾರೆ. ಇಲ್ಲಿ ‘ಸುಬ್ಬಲಕ್ಷ್ಮಿ ಸಂಸಾರ’ದ ಬಗ್ಗೆ ಮಾತ್ರವಲ್ಲ, ತಮ್ಮ ಸಂಸಾರದ ಕುರಿತೂ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 

Advertisement


ಮದುವೆಯಾಗುತ್ತಿದ್ದಂತೆ ಧಾರಾವಾಹಿಯಲ್ಲೂ ಗೃಹಿಣಿ ಪಾತ್ರವನ್ನೇ ಒಪ್ಪಿಕೊಂಡಿದ್ದೀರಿ. ಕಾರಣ?

ಇಂಥದ್ದೇ ಪಾತ್ರ ನಿರ್ವಹಿಸಬೇಕು ಎಂಬ ಯೋಚನೆಯೇನೂ ಇರಲಿಲ್ಲ. ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯ ನಿರ್ದೇಶಕಿ ಸ್ವಪ್ನಾ ಕೃಷ್ಣಾ , ಧಾರಾವಾಹಿ ಬಗ್ಗೆ ಮತ್ತು ಪಾತ್ರದ ಬಗ್ಗೆ ವಿವರಿಸಿದರು. ಪಾತ್ರ ಮನಸ್ಸಿಗೆ ತುಂಬಾ ಹಿಡಿಸಿತು. ನನಗೆ ಸುಬ್ಬಲಕ್ಷ್ಮಿಯ ಪಾತ್ರ ನೈಜತೆಗೆ ತುಂಬಾ ಹತ್ತಿರವಿರುವಂಥದು ಎನಿಸಿತು. ಒಪ್ಪಿಕೊಂಡೆ. 

ನಿಜವಾಗ್ಲೂ ಸುಬ್ಬಲಕ್ಷ್ಮಿಯಷ್ಟು ಮುಗ್ಧ ಹೆಂಗಸರೂ ಇರುತ್ತಾರಾ?
ಯಾಕಿರುವುದಿಲ್ಲ? ಕುಟುಂಬದ ಹಿತದ ಬಗ್ಗೆ ಮಾತ್ರ ಚಿಂತಿಸುತ್ತಾ, ಸಂಬಂಧಗಳಿಗೆ ಬೆಲೆ ಕೊಡುತ್ತಾ, ಗಂಡನನ್ನು ಮುಗ್ಧವಾಗಿ ಪ್ರೀತಿಸುವ ಮಹಿಳೆಯರನ್ನು ನಾನು ನನ್ನ ಕುಟುಂಬದಲ್ಲೇ ನೋಡಿದ್ದೇನೆ. 
 
ಆದರೆ ಈಗಿನ ಕಾಲದಲ್ಲಿ ಕಡಿಮೆ ಅನಿಸುವುದಿಲ್ಲವಾ?
ನನ್ನನ್ನೂ ಸೇರಿ ಈಗಿನ ಕಾಲದ ಹುಡುಗಿಯರಲ್ಲಿ ಬಹುತೇಕರಿಗೆ ಗಂಡನೇ ಸರ್ವಸ್ವ, ಗಂಡನೇ ಜೀವ ಎಂಬ ನಂಬಿಕೆ ಇರುವುದಿಲ್ಲ. ಸಿಟಿಯಲ್ಲಿ ಬೆಳೆದಿರುವ ನಮಗೆಲ್ಲಾ ಹೊರಗಿನ ಪ್ರಪಂಚದ  ಅರಿವಿದೆ. ನಮ್ಮ ಬದುಕನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುವ ಛಾತಿ ಇದೆ. ನಮ್ಮಂಥವರಿಗೆಲ್ಲಾ ಸುಬ್ಬಲಕ್ಷಿ ಗಂಡನನ್ನು ಅತಿಯಾಗಿ ನಂಬುವುದನ್ನು ನೋಡಿ ಆಶ್ಚರ್ಯವಾಗಬಹುದು. ಆದರೆ ಅವಳ ಜಾಗದಲ್ಲಿ ನಿಂತು ನೊಡಿದರೆ ಏನೂ ಆಶ್ಚರ್ಯವಾಗುವುದಿಲ್ಲ. ಸುಬ್ಬಲಕ್ಷ್ಮಿ, ಹಳ್ಳಿಯ ಮುಗ್ಧ ಹೆಣ್ಣು. ನಮ್ಮ ಅಮ್ಮಂದಿರು, ಅಜ್ಜಿಯಂದಿರು ಇದ್ದಿದ್ದು ಹಾಗೇ ಅಲ್ಲವೇ? ಗಂಡ ನಾನಿರುವಂತೆಯೇ ನನ್ನನ್ನು ಇಷ್ಟಪಡುತ್ತಾನೆ ಎಂದು ಅವರು ನಂಬಿರುತ್ತಿದ್ದರು. ಗಂಡ ಬೈದರೆ ಅದು ಆತನ ಕರ್ತವ್ಯ ಎಂದು ತಿಳಿಯುತ್ತಿದ್ದರು. ಸುಬ್ಬಲಕ್ಷ್ಮಿ ಕೂಡ ಅದೇ ಮನಸ್ಥಿತಿಯವಳು.

ಸುಬ್ಬಲಕ್ಷ್ಮಿ ಮುಗ್ಧಯೇನೊ ಸರಿ ಆದರೆ ಕೆಲವೊಮ್ಮೆ ಪೆದ್ದಿ ಥರಾ ಆಡುವುದ್ಯಾಕೆ? 
ನೀವಂದುಕೊಂಡ ಹಾಗೆ ಸುಬ್ಬಲಕ್ಷಿ ಪೆದ್ದಿ ಅಲ್ಲ. ಸಂಸಾರ, ಸಂಬಂಧಗಳ ವಿಚಾರದಲ್ಲಿ ಆಕೆ ಪೆದ್ದಿಯಿರಬಹುದು ವ್ಯವಹಾರದಲ್ಲಿ ಆಕೆಯನ್ನು ಅಷ್ಟು ಸುಲಭಕ್ಕೆ ಯಾಮಾರಿಸಲು ಸಾಧ್ಯವಿಲ್ಲ. ಆಕೆ ಸೀರೆ ಉಡುತ್ತಾಳೆ, ಹಳ್ಳಿ ಬಾಷೆ ಮಾತನಾಡುತ್ತಾಳೆ. ಆಕೆಗೆ ಇಂಗ್ಲಿಷ್‌ ಬರುವುದಿಲ್ಲ ಎಂದ ಮಾತ್ರಕ್ಕೆ ಅವಳು ಪೆದ್ದಿ ಅಂತ ಅಲ್ಲ. ಅವಳು ಅವಳಾಗಿಯೇ ಇರುವುದಕ್ಕೆ ಬಯಸುವಂಥ ಹುಡುಗಿ. ಆಕೆ ಸಾಕಷ್ಟು ಗಟ್ಟಿಗಿತ್ತಿ ಕೂಡ ಹೌದು. ಗಂಡನ ಅನುಪಸ್ಥಿತಿಯಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾಳೆ. ಅಂಗಡಿಗೆ ಹೋಗುತ್ತಾಳೆ, ವಿದ್ಯುತ್‌ ಬಿಲ್‌ ಕಟ್ಟುತ್ತಾಳೆ, ಅತಿಥಿಗಳನ್ನು ಸಂಭಾಳಿಸುತ್ತಾಳೆ. ಪೆದ್ದಿಯಾಗಿದ್ದರೆ  ಪ್ರತಿಯೊಂದು ವಿಚಾರದಲ್ಲೂ ಗಂಡನ ಮೇಲೆ ಅವಲಂಬಿತಳಾಗಿರುತ್ತಿದ್ದಳು.

ಸಿಟಿ ಹುಡುಗಿ ನೀವು, ಅದಷ್ಟು ಚಂದವಾಗಿ ಹೇಗೆ ಸುಬ್ಬಲಕ್ಷ್ಮಿಯೇ ಆಗಿ ಹೋದಿರಿ?
ಮೊದಲಿನಿಂದಲೂ ನಾಟಕಗಳಲ್ಲಿ ಅಭಿನಯಿಸಿ, ಸಿನಿಮಾಗಳಲ್ಲಿ ಡಬ್ಬಿಂಗ್‌ ಮಾಡಿದ ಅನುಭವವಿದ್ದ ಕಾರಣ ಸುಬ್ಬಲಕ್ಷ್ಮಿ ಪಾತ್ರ ದೊಡ್ಡ ಸವಾಲು ಅನ್ನಿಸಲಿಲ್ಲ. ಅದಲ್ಲದೇ ಧಾರಾವಾಹಿ ತಂಡ ಸುಬ್ಬಲಕ್ಷ್ಮಿ ಮತ್ತು ಆಕೆಯ ಅತ್ತೆ, ಮಾವ ಮಾತನಾಡುವ ಮಂಡ್ಯ ಕಡೆ ಭಾಷೆ‌ಯನ್ನು  ಧಾರಾವಾಹಿಯಲ್ಲಿ ಹೇಗೆ ಬಳಸಬೇಕೆಂಬುದರ ಕುರಿತು ಸಾಕಷ್ಟು ತಯಾರಿ ಮಾಡಿದ್ದರು.      

Advertisement

ನಿಮ್ಮ ಮತ್ತು ನಿಮ್ಮ ಪತಿಗಿರುವ ಸಾಮಾನ್ಯ ಆಸಕ್ತಿ ಯಾವುದು? 
 ತತ್ವಶಾಸ್ತ್ರ, ಸಂಗೀತ, ಉತ್ತಮ ಸಿನಿಮಾ, ಟೀವಿ ಕಾರ್ಯಕ್ರಮಗಳನ್ನು ನೋಡುವುದರಲ್ಲಿ ಇಬ್ಬರಿಗೂ ತುಂಬಾ ಆಸಕ್ತಿ ಇದೆ. ಇನ್ನೊಂದು ವಿಶೇಷ ಎಂದರೆ ನನ್ನ ಗಂಡ ಭರತ್‌ ನಾಗೇಂದ್ರ ಉತ್ತಮ ಹಾಡುಗಾರರು. ಮೃದಂಗ ಮತ್ತು ಘಟಂ ನುಡಿಸುತ್ತಾರೆ. ಅದು ನನಗೆ ತುಂಬಾ ಇಷ್ಟವಾಗುತ್ತದೆ.
 
ನಿಮ್ಮ ಪತಿ ಮದುವೆಗೂ ಮುನ್ನ ಕೊಟ್ಟ ಉಡುಗೊರೆಯಲ್ಲಿ ಹೃದಯಕ್ಕೆ ಹತ್ತಿರವಾದ ಉಡುಗೊರೆ ಯಾವುದು? 
ನಾನು ಡಬ್ಬಿಂಗ್‌ ಮಾಡುತ್ತಿದ್ದ ಕಾರಣ ಗಂಟಲು ಹಾಳಾಗಬಾರದೆಂದು ಆಚೆ ಎಲ್ಲಿಯೂ ನೀರು ಕುಡಿಯುತ್ತಿರಲಿಲ್ಲ. ಬಾಯಾರಿಕೆಯಾದರೂ ಹಾಗೇ ಇರುತ್ತಿದ್ದೆ. ಇದನ್ನು ನೋಡಿ ಅವರು ನನಗೆ ಆಕ್ವಾಗಾರ್ಡ್‌ ಇರುವ  ನೀರಿನ ಬಾಟಲಿ ಉಡುಗೊರೆ ನೀಡಿದರು. ಅದು ಹೃದಯಕ್ಕೆ ತುಂಬಾ ಹತ್ತಿರವಾಗಿದೆ. 

ಮದುವೆಯಾದ ಮೇಲಿ ಮರೆಯಾಗದಂಥ ಕ್ಷಣ ಯಾವುದು?
ಸರ್‌ಪ್ರೈಸ್‌ ಆಗಿ ಥಾಯ್‌ಲ್ಯಾಂಡ್‌ಗೆ ಕರೆದುಕೊಂಡು ಹೋಗಿದ್ದರು. ಆ  5 ದಿನಗಳು ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವಂಥ ದಿನಗಳು.

ಗಂಡನ ಮನೆಯಲ್ಲಿದ್ದಾಗ “ತವರುಮನೆ’ ಮಿಸ್‌ ಆಗಲ್ವಾ?
ನಾನು ನನ್ನ ತವರುಮನೆಯಲ್ಲಿ ಎಷ್ಟು ಸಂತೋಷವಾಗಿದ್ದೆನೊ ಅಷ್ಟೇ ಸಂತೋಷವಾಗಿ ಗಂಡನ ಮನೆಯಲ್ಲೂ ಇದ್ದೇನೆ. ನನ್ನ ಅತ್ತೆ ನನ್ನನ್ನು ಸ್ವಂತ ಮಗಳ ಹಾಗೆ ನೋಡಿಕೊಳ್ಳುತ್ತಾರೆ. ನಾನು ಶೂಟಿಂಗ್‌ಗೆ ಹೋಗುವಾಗ ಅಮ್ಮ ಹೇಗೆ ನನಗೆ ಡಬ್ಬಿ ರೆಡಿ ಮಾಡಿಕೊಡುತ್ತಿದ್ದರೋ ಹಾಗೆಯೇ ನನ್ನ ಅತ್ತೆ ಕೂಡ ಡಬ್ಬಿ ರೆಡಿ ಮಾಡಿಕೊಡುತ್ತಾರೆ. ಅದಕ್ಕಾಗಿ ಪಾಪ 5 ಗಂಟೆಗೇ ಏಳುತ್ತಾರೆ.

ಅತ್ತೆ ಮಾಡುವ ಅಡುಗೆಗಳಲ್ಲಿ ಯವ ಅಡುಗೆಯನ್ನು ನೀವು ಚಪ್ಪರಿಸಿಕೊಂಡು ತಿನ್ನುತ್ತೀರಾ?
ನನ್ನ ಅತ್ತೆ ಎಲ್ಲಾ ಅಡುಗೆಗಳನ್ನು ತುಂಬಾ ಚನ್ನಾಗಿ ಮಾಡುತ್ತಾರೆ. ನನ್ನ ಧಾರಾವಾಹಿ ಸೆಟ್‌ನವರಿಗಾಗಿಯೇ ಪ್ರತ್ಯೇಕ ಡಬ್ಬಿ ರೆಡಿ ಮಾಡಿ ಕೊಡುತ್ತಾರೆ. ಅವರಿಗೂ ನನ್ನ ಅತ್ತೆ ಮಾಡುವ ಅಡುಗೆ ಎಂದರೆ ತುಂಬಾ ಇಷ್ಟ. ಬಿಸಿಬೇಳೆ ಬಾತ್‌, ಮಾವಿನಕಾಯಿ ಗೊಜ್ಜು ಮಾಡಿದರೆ 1/2ಕೇಜಿಯಷ್ಟು ಯುನಿಟ್‌ನವರಿಗೆ ಹಂಚಲೆಂದೇ ಒಯ್ಯುತ್ತೇನೆ.

ತವರುಮನೆಗೆ ಎಷ್ಟು ದಿನಕ್ಕೊಮ್ಮೆ ಹೋಗುತ್ತೀರಾ?
ಅಮ್ಮನ ಮನೆ ಹತ್ತಿರದಲ್ಲೇ ಇದೆ. ಆದರೂ ದೇವಸ್ಥಾನಕ್ಕೆ ಹೋಗುವಂತೆ ತಿಂಗಳಿಗೆ ಒಮ್ಮೆ ಹೋಗುತ್ತೇನೆ. ವಾರಪೂರ್ತಿ ಶೂಟಿಂಗ್‌ ಇರುತ್ತದೆ. ವಾರಾಂತ್ಯದಲ್ಲಿ ನನ್ನ ಗಂಡನಿಗೆ  ರಜೆ ಇರುವುದರಿಂದ ಶನಿವಾರ, ಭಾನುವಾರ ಮನೆಯಲ್ಲೇ ಇರುತ್ತೇನೆ. ಅದಕ್ಕೇ ತವರು ಮನೆಗೆ ಹೋಗುವುದು ಸ್ವಲ್ಪ ಅಪರೂಪವಾಗಿದೆ.

ಧಾರಾವಾಹಿಯಲ್ಲಿ ಯಾವಾಗಲೂ ಏನಾದರೊಂದು ಅಡುಗೆ ಮಾಡ್ತಾನೇ ಇರ್ತೀರಲ್ಲಾ. ಮಾಡಿದ್ದನ್ನೆಲ್ಲಾ ತಿಂತೀರಾ?
ಇಲ್ಲಪ್ಪಾ. ಏನನ್ನೂ ತಿನ್ನುವುದಿಲ್ಲ. ತಿನ್ನಬೇಕು ಅಂತ ತುಂಬಾ ಆಸೆ ಆಗುತ್ತದೆ. ಆದರೆ ಕಂಟ್ರೋಲ್‌ ಮಾಡ್ತೀನಿ. ಸುಬ್ಬಲಕ್ಷ್ಮಿ ಪಾತ್ರಕ್ಕೆ ನಾನು ಈಗಿರುವುದಕ್ಕಿಂತ ಹೆಚ್ಚು ದಪ್ಪಗಾಗುವಂತಿಲ್ಲ. ಅದಕ್ಕಾಗಿ ಕೆಲವೆಲ್ಲಾ ಆಹಾರಗಳನ್ನು ತ್ಯಾಗ ಮಾಡಿದ್ದೇನೆ.

ಯಾವ ಆಹಾರವನ್ನು ತುಂಬಾ ನೋವಿನಿಂದ ತ್ಯಾಗ ಮಾಡಿದ್ದೀರಿ?
ಐಸ್‌ ಕ್ರೀಂ. ಯಾಕೋ ನನಗೂ ಐಸ್‌ ಕ್ರೀಂಗೂ ಆಗಿ ಬರುವುದಿಲ್ಲ. ನಾನು ಡಬ್ಬಂಗ್‌ ಕಲಾವಿದೆಯಾದಾಗಿನಿಂದ ಐಸ್‌ ಕ್ರೀಂ ನನಗೆ ಹುಳಿ ದ್ರಾಕ್ಷಿಯಂತೆ ಆಗಿದೆ. ಈಗ ಧಾರಾವಾಹಿಗಾಗಿ ತ್ಯಾಗ ಮಾಡಿದ್ದೇನೆ. 

ಎಷ್ಟು ಸಿನಿಮಾಗಳಿಗೆ ಡಬ್ಬಂಗ್‌ ಮಾಡಿದ್ದೀರಿ? ನಿಮಗೆ ವೈಯಕ್ತಿಕವಾಗಿ ಖುಷಿ ಕೊಟ್ಟ ಸಿನಿಮಾಗಳೆಷ್ಟು?
420 ಸಿನಿಮಾಗಳಲ್ಲಿ ಡಬ್ಬಿಂಗ್‌ ಕಲಾವಿದೆಯಾಗಿದ್ದೇನೆ. ರಂಗ ಎಸ್‌ಎಸ್‌ಎಲ್‌ ಸಿ , ಅರಸು, ಜಸ್ಟ್‌ ಮಾತ್‌ ಮಾತಲ್ಲಿ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಗಂಗಾ ಚಿತ್ರಕ್ಕೆ ಮಾಲಾಶ್ರಿಗೆ, ಜಸ್ಟ್‌ ಮಾತ್‌ ಮಾತಲ್ಲಿ ಚಿತ್ರದಲ್ಲಿ ರಮ್ಯಾಗೆ, ಮಮ್ಮಿ ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಅವರಿಗೆ ಡಬ್‌ ಮಾಡಿರುವುದು ಅತ್ಯಂತ ಖುಷಿ ಕೊಟ್ಟಿದೆ.  ಇತ್ತೀಚೆಗೆ ಹಾರರ್‌ ಸಿನಿಮಾಗಳಾದ  ಚಂದ್ರಲೇಖ ಮತ್ತು ಶಿವಲಿಂಗ ಚಿತ್ರಗಳಿಗೆ ಡಬ್‌ ಮಾಡಿದ್ದು ವಿಶೇಷ ಅನುಭವ ನೀಡಿವೆ. 

ಕಂಠದಾನ ಕಲಾವಿದರಿಗೆ ಪ್ರಶಸ್ತಿ ಏಕಿಲ್ಲ?
 ಕಂಠದಾನ ಕಲಾವಿದರಿಗೂ ಮೊದಲು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಏಕಾಏಕಿ ಅದನ್ನು ನಿಲ್ಲಿಸಿದರು. ಕಂಠದಾನ ಕಲಾವಿದರೂ ಚಿತ್ರದ ಒಂದು ಪ್ರಮುಖ ಭಾಗವಲ್ಲವೇ? 5 ನಿಮಿಷದ ಹಾಡಿಗೆ ಧ್ವನಿ ನೀಡಿದವರಿಗೆ ಪ್ರಶಸ್ತಿ ನೀಡುವಾಗ ಸಿನಿಮಾದ ಪಾತ್ರವೊಂದರ ಪಿಸು ಮಾತಿಗೂ ಧ್ವನಿ ನೀಡುವವರಿಗೆ ಪ್ರಶಸ್ತಿ ನೀಡದೇ ಇರುವುದು ತಾರತಮ್ಯವಾಗುವುದಿಲ್ಲವಾ? ನಮ್ಮಲ್ಲಿ ಎಷ್ಟು ಅತ್ಯುತ್ತಮ ಕಂಠದಾನ ಕಲಾವಿದರಿದ್ದಾರೆ. ಸಿನಿಮಾ ಯಶಸ್ಸಿನಲ್ಲಿ ಅವರೂ ಪಾಲುದಾರರಾಗಿರುತ್ತಾರೆ. ಅವರನ್ನು ಗುರುತಿಸದೇ ಹೋದರೆ ಪ್ರತಿಭೆಗೆ ಅನ್ಯಾಯ ಮಾಡಿದಂತಾಗುತ್ತದೆ. 

ನನ್ನ ಗಂಡ ಗುರುಮೂರ್ತಿ ಥರಾ ಅಲ್ಲ!
ನನ್ನ ಗಂಡನಿಗೂ, ಸುಬ್ಬಲಕ್ಷ್ಮಿ ಗಂಡ ಗುರುಮೂರ್ತಿಗೂ ಬಹಳ ವ್ಯತ್ಯಾಸವಿದೆ. ಮುಖ್ಯ ವ್ಯತ್ಯಾಸ ಎಂದರೆ ನನ್ನ ಗಂಡ ಗುರುಮೂರ್ತಿ ಥರಾ ಅಲ್ಲವೇ ಅಲ್ಲ. ಸುಬ್ಬಲಕ್ಷ್ಮಿ ಗುರುಮೂರ್ತಿಯನ್ನು ಶ್ರೀ ರಾಮಚಂದ್ರ ಎಂದು ತಿಳಿದುಕೊಂಡಿರುತ್ತಾಳೆ. ಆದರೆ ಆತ ಶ್ರೀರಾಮಚಂದ್ರ ಆಗಿರುವುದಿಲ್ಲ. ಆದರೆ ನನ್ನ ಗಂಡ ಸಾಕ್ಷಾತ್‌ ಶ್ರೀರಾಮಚಂದ್ರನೇ. ನಮ್ಮಿಬ್ಬರ ಮಧ್ಯೆ ತುಂಬಾ ಅನ್ಯೋನ್ಯತೆ ಇದೆ. ತನ್ನ ಗಂಡನ ಸರಿಸಮವಾಗಿ ಬದುಕಲು ಸುಬ್ಬಲಕ್ಷಿಯಿಂದ ಸಾಧ್ಯವಿಲ್ಲ. ಅವಳು ಗಂಡನ ಜೊತೆ ಪಾರ್ಟಿ, ಫ‌ಂಕ್ಷನ್‌ಗೆಲ್ಲಾ ಹೋಗಲಾರಳು. ಅದರೆ ನಾನು  ನನ್ನ ಗಂಡನ ಜೊತೆ ಪಾರ್ಟಿಗಳಿಗೂ ಹೋಗುತ್ತೇನೆ, ದೇವಸ್ಥಾನಗಳಿಗೂ ಹೋಗುತ್ತೇನೆ. 

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next