ಹೊಸದಿಲ್ಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿವಾಹಿನಿ ಜೀ ನ್ಯೂಸ್-ಮ್ಯಾಟ್ರೈಸ್ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್ ಮೈತ್ರಿಯ ಎನ್‌ಡಿಎ 23 ಕ್ಷೇತ್ರಗಳನ್ನು ಗೆಲ್ಲಲಿದೆ. ಆಡಳಿತಾರೂಢ ಕಾಂಗ್ರೆಸ್ 5 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. 2019ರಲ್ಲಿ ಬಿಜೆಪಿ 25, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1, ಪಕ್ಷೇತರರು ಒಬ್ಬರು ಗೆಲುವು ಸಾಧಿಸಿದ್ದರು.
ಮತ್ತೆ ಎನ್‌ಡಿಗೆ ಅಧಿಕಾರ
ದೇಶಾದ್ಯಂತ ಬಿಜೆಪಿ ನೇತೃತ್ವದ ಎನ್‌ಡಿಎ 390, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 96 ಹಾಗೂ ಇತರರು 57 ಸ್ಥಾನಗಳನ್ನು ಪಡೆಯಲಿದ್ದಾರೆ. ಈ ಸಮೀಕ್ಷೆ ಪ್ರಕಾರ, ಎನ್‌ಡಿಎ 3ನೇ ಬಾರಿಗೆ ಕೇಂದ್ರದಲ್ಲಿ ಸರಕಾರ ರಚಿಸುವುದು ಪಕ್ಕಾ ಆಗಿದೆ. ವಿಶೇಷ ಎಂದರೆ ತೆಲಂಗಾಣದಲ್ಲಿ ಬಿಜೆಪಿ(5) ನಿರೀಕ್ಷೆಗಿಂತ ಹೆಚ್ಚು ಸೀಟು ಗೆಲ್ಲಲಿದೆ, ಆಂಧ್ರದಲ್ಲಿ ವೈಎಸ್‌ಆರ್‌ಸಿಪಿಗಿಂತಲೂ(12) ಎನ್‌ಡಿಎ(13) ಹೆಚ್ಚಿನ ಸೀಟು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಲಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ ಈ ಬಾರಿಯೂ ಮುಂದುವರಿಯಲಿದೆ ಎಂದು ಸಮೀಕ್ಷೆ ಹೇಳಿದೆ.
ಎಬಿಪಿ ನ್ಯೂಸ್ ಸಮೀಕ್ಷೆಯಲ್ಲೂ ಎನ್‌ಡಿಎಗೆ ಗೆಲುವು
ಎಬಿಪಿ ನ್ಯೂಸ್, ಸಿ ವೋಟರ್ ಸಮೀಕ್ಷೆ ಯಲ್ಲಿ, ಎನ್‌ಡಿಎ 366 ಸ್ಥಾನಗಳೊಂದಿಗೆ ಗೆಲುವಿನ ನಗೆ ಬೀರಲಿದೆ. ಇನ್ನು, ಇಂಡಿಯಾ ಒಕ್ಕೂಟಕ್ಕೆ 156 ಹಾಗೂ ಇತರರಿಗೆ 21 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ತಿಳಿಸಿದೆ.