ಬಳ್ಳಾರಿ: ಪೌರತ್ವ ಕಾಯ್ದೆ ಜನಜಾಗೃತಿ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ನಗರ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಗುಟುರು ಹಾಕಿ ಅವರ ಮನೆ ಎದುರು ಧರಣಿ ನಡೆಸಲು ಬಂದಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಬಳ್ಳಾರಿ ನಗರ ಹೊರವಲಯದಿಂದಲೇ ಬೆಂಗಳೂರಿಗೆ ವಾಪಸ್ ತೆರಳಿದ್ದಾರೆ.
ಸೋಮಶೇಖರ ರೆಡ್ಡಿ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಜ. 13ರಂದು ಅವರ ಮನೆ ಎದುರು ಧರಣಿ ನಡೆಸುವುದಾಗಿ ಜಮೀರ್ ಎಚ್ಚರಿಕೆ ನೀಡಿದ್ದರು. ಆದರೆ ಸೋಮಶೇಖರ ರೆಡ್ಡಿ ಜಮೀರ್ ಅಹ್ಮದ್ ಬಂದರೆ ನಮ್ಮ ಮನೆಯಲ್ಲಿ ಆತಿಥ್ಯ ನೀಡುವುದಾಗಿ ಹೇಳಿದ್ದರೆ ವಿನಃ ಕ್ಷಮೆ ಯಾಚಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಧರಣಿ ನಡೆಸಲು ಬಂದಿದ್ದ ಜಮೀರ್ ಅಹ್ಮದ್ ಅವರನ್ನು ಪೊಲೀಸರು ನಗರದ ಹೊರವಲಯ ದಲ್ಲಿ ಬಂಧಿ ಸಿ ನಂತರ ಬಿಡುಗಡೆಗೊಳಿಸಿದರು.
ಬೆಂಗಳೂರಿನಿಂದ ಬಂದ ಜಮೀರ್ ಅವರನ್ನು ಸ್ವಾಗತಿಸಲು ನಗರ ಹೊರವಲಯದ ಬೈಪಾಸ್ ಬಳಿ ಕಾಂಗ್ರೆಸ್ ಹಾಗೂ ಮುಸ್ಲಿಂ ಸಮುದಾಯದ ಹಲವು ಮುಖಂಡರು ಜಮಾ ಯಿಸಿದ್ದರು. ಮೆರವಣಿಗೆಯಲ್ಲಿ ಕರೆದೊಯ್ಯಲು ಧ್ವನಿವರ್ಧಕ ಅಳವಡಿಸಿದ್ದ ತೆರೆದ ವಾಹನ ಸಿದ್ಧಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಪೊಲೀಸ್ ಇಲಾಖೆ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಿತ್ತು.
ಬೆಳಗ್ಗೆ 10.30ರ ಸುಮಾರಿಗೆ ನಗರಕ್ಕೆ ಆಗಮಿಸಿದ ಜಮೀರ್ ಅವರನ್ನು ಪೊಲೀಸರು ನಗರ ಹೊರವಲಯದಲ್ಲೇ ತಡೆಯಲು ಯತ್ನಿಸಿದರು. ಯುವಕರು ಘೋಷಣೆಗಳನ್ನು ಕೂಗುತ್ತಿದ್ದಂತೆ ಕಾಲ್ನಡಿಗೆಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಲು ಅವಕಾಶ ನೀಡಿದ ಪೊಲೀಸರು, 11 ಗಂಟೆ ಸುಮಾರಿಗೆ ಅವರನ್ನು ಬಂಧಿ ಸಿ ಸಮೀಪದ ಕುಡಿತಿನಿ ಠಾಣೆಗೆ ಕರೆದೊಯ್ದು, ನಂತರ ಬಿಡುಗಡೆಗೊಳಿಸಿದರು.
ರೆಡ್ಡಿಯವರಿಗೆ ಬೇಲ್ ನೀಡಲು ನ್ಯಾಯಾ ಲಯ ನಿರಾಕರಿಸಿದೆ. ಆದರೂ ಪೊಲೀಸರು ಈವರೆಗೂ ರೆಡ್ಡಿಯನ್ನು ಏಕೆ ಬಂಧಿ ಸಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇನ್ನೂ 10 ದಿನ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಅವರೊಂದಿಗೆ ಬಳ್ಳಾರಿಗೆ ಬಂದು ಪ್ರತಿಭಟನೆ ನಡೆಸಲಾಗುವುದು.
-ಜಮೀರ್ ಅಹಮದ್, ಶಾಸಕ
ಜಮೀರ್ ಅಹ್ಮದ್ ಧರಣಿ ನಡೆಸಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರೂ ನಾವು ಅನುಮತಿ ನೀಡಿರಲಿಲ್ಲ. ಅಲ್ಲದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಹೊರವಲಯದ ಬೈಪಾಸ್ ರಸ್ತೆ ಬಳಿ ಅವರನ್ನು ಬಂಧಿಸಲಾಗಿದೆ. ಸ್ಟೇಷನ್ ಬೇಲ್ ನೀಡಿದ ಹಿನ್ನೆಲೆಯಲ್ಲಿ ವಾಪಸ್ ಹೋಗಿದ್ದಾರೆ.
-ಸಿ.ಕೆ.ಬಾಬಾ, ಬಳ್ಳಾರಿ ಎಸ್‌ಪಿ