Advertisement

ಜಮೀರ್‌ V/s ಬೇಗ್‌: ಮುಸ್ಲಿಂ ನಾಯಕತ್ವಕ್ಕೆ ಯಾರು?

11:19 PM Jun 21, 2019 | Lakshmi GovindaRaj |

ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ಶಿವಾಜಿನಗರ ಶಾಸಕ ಆರ್‌.ರೋಷನ್‌ ಬೇಗ್‌ರನ್ನು ಅಮಾನತು ಮಾಡಿರುವುದು ಕಾಂಗ್ರೆಸ್‌ ಅಲ್ಪಸಂಖ್ಯಾತ(ಮುಸ್ಲಿಂ) ಮುಖಂಡರಲ್ಲಿ ಆತಂಕ ಹಾಗೂ ಗೊಂದಲ ಮೂಡುವಂತೆ ಮಾಡಿದೆ. ಈ ಬೆಳವಣಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮದ್‌ ಹಾಗೂ ರೋಷನ್‌ ಬೇಗ್‌ ನಡುವೆ ಸಮುದಾಯದ ಮೇಲೆ ಹಿಡಿತ ಸಾಧಿಸಲು ನಡೆಸುತ್ತಿರುವ ಯತ್ನ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ರಾಜ್ಯದಲ್ಲಿ ಮುಸ್ಲಿಂ ಸಮುದಾಯದಲ್ಲಿ ಅಜೀಜ್‌ ಸೇಠ್, ಸಿ.ಕೆ. ಜಾಫ‌ರ್‌ ಷರೀಫ್ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದರು. ಖಮರುಲ್‌ ಇಸ್ಲಾಂ, ಕೆ. ರೆಹಮಾನ್‌ ಖಾನ್‌, ಸಿ.ಎಂ.ಇಬ್ರಾಹಿಂ ರಾಜಕೀಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ಸಮುದಾಯದ ನಾಯಕತ್ವ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಸಿ.ಕೆ. ಜಾಫ‌ರ್‌ ಷರೀಫ್ ಅವರ ನಿಧನದ ನಂತರ ಅಲ್ಪಸಂಖ್ಯಾತ ಸಮುದಾಯದಲ್ಲಿ ನಾಯಕತ್ವದ ಪ್ರಶ್ನೆಗಳು ಕೇಳಿ ಬರುತ್ತಿದ್ದು, ಮುಸ್ಲಿಂ ಸಮುದಾಯದಲ್ಲಿ ಹಿರಿಯ ನಾಯಕರಾಗಿರುವ ರೋಷನ್‌ ಬೇಗ್‌ ಬಗ್ಗೆ ಕೆಲವರು ಒಲವು ತೋರಿಸುತ್ತಿದ್ದರೆ, ಆ ಸ್ಥಾನವನ್ನು ಜಮೀರ್‌ ಅಹಮದ್‌ ತುಂಬುತ್ತಾರೆಂಬ ವಿಶ್ವಾಸ ಕೆಲವರದು.

ಜೆಡಿಎಸ್‌ನಲ್ಲಿದ್ದ ಜಮೀರ್‌ ಅಹಮದ್‌ ಖಾನ್‌ ಆ ಪಕ್ಷದಲ್ಲಿ ಮುಸ್ಲಿಂ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದರು. ಆದರೆ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡು ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಇದು ಕಾಂಗ್ರೆಸ್‌ನಲ್ಲಿನ ಅಲ್ಪಸಂಖ್ಯಾತ ಶಾಸಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಪಕ್ಷದಲ್ಲಿ ಹಿರಿಯ ಶಾಸಕರಾಗಿರುವ ರೋಷನ್‌ ಬೇಗ್‌, ತನ್ವೀರ್‌ ಸೇಠ್, ಎನ್‌.ಎ.ಹ್ಯಾರೀಸ್‌ ಅವರನ್ನು ಕಡೆಗಣಿಸಿ ವಲಸೆ ಬಂದಿದ್ದ ಜಮೀರ್‌ ಅಹಮದ್‌ ಖಾನ್‌ಗೆ ಸಚಿವ ಸ್ಥಾನ ನೀಡಿದ್ದರಿಂದ ಮೂಲ ಕಾಂಗ್ರೆಸ್‌ನ ಮುಸ್ಲಿಂ ಶಾಸಕರನ್ನು ಮೂಲೆಗುಂಪು ಮಾಡಲಾಯಿತು ಎಂಬ ಚರ್ಚೆಗಳು ನಡೆದವು.

Advertisement

ಜಮೀರ್‌ ಅಹಮದ್‌ ಪರೋಕ್ಷವಾಗಿ ಸಮುದಾಯದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಜಮೀರ್‌ ಅಹಮದ್‌ ಅವರನ್ನು ಮುಸ್ಲಿಂ ಸಮುದಾಯದ ನಾಯಕ ಎಂದು ಸಮಾಜದ ಮೂಲ ಕಾಂಗ್ರೆಸ್‌ ನಾಯಕರು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅಲ್ಲದೇ ಅವರನ್ನು ಮುಸ್ಲಿಂ ಸಮಾಜದ ಎಲ್ಲ ವರ್ಗದ ಜನರು ಒಪ್ಪಿಕೊಳ್ಳುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಡಿಮೆಯಾಗುತ್ತಿರುವ ಪ್ರಾತಿನಿಧ್ಯ: ರಾಜ್ಯದ ಜನಸಂಖ್ಯೆಯಲ್ಲಿ ಶೇ.14ರಷ್ಟಿರುವ ಮುಸ್ಲಿಂ ಸಮುದಾಯದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಜನತಾ ಪರಿವಾರ ಮತ್ತು ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯ ಹಾಗೂ ಪಕ್ಷಗಳ ಗಡಿ ಮೀರಿ ನಾಯಕರಾಗಿ ಗುರುತಿಸಿಕೊಂಡಿದ್ದ ಅಜೀಜ್‌ ಸೇಠ್, ಅಬ್ದುಲ್‌ ನಜೀರ್‌ ಸಾಬ್‌ (ನೀರ್‌ ಸಾಬ್‌), ಸಗೀರ್‌ ಅಹಮದ್‌, ಖಮರುಲ್‌ ಇಸ್ಲಾಂ, ಸಮಾಜದ ಎಲ್ಲ ವರ್ಗದ ವಿಶ್ವಾಸ ಗಳಿಸಿದ್ದರು.

1978 ರಲ್ಲಿ ಮುಸ್ಲಿಂ ಸಮುದಾಯದಿಂದ 16 ಜನ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ 12 ಜನ ಶಾಸಕರಾಗಿ ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಏಳು ಜನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ 8 ರಿಂದ 12 ಶಾಸಕರು ಆಯ್ಕೆಯಾಗುತ್ತಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ 7 ಜನ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದು, ಎಲ್ಲರೂ ಕಾಂಗ್ರೆಸ್‌ನಿಂದಲೇ ಆಯ್ಕೆಯಾಗಿರುವುದು ವಿಶೇಷ.

ಭವಿಷ್ಯದ ಗೊಂದಲ: ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಪಕ್ಷವನ್ನು ನಂಬಿಕೊಂಡಷ್ಟು ಬೇರೆ ಯಾವ ಪಕ್ಷವನ್ನೂ ನಂಬಿಕೊಂಡಿಲ್ಲ. ಜೆಡಿಎಸ್‌ನಲ್ಲಿ ಅವಕಾಶ ಇದ್ದರೂ ನಾಯಕತ್ವ ಕಷ್ಟ ಎನ್ನುವ ಕಾರಣಕ್ಕೆ ಅಲ್ಪ ಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೆಸನ್ನೇ ಹೆಚ್ಚಾಗಿ ನಂಬಿಕೊಂಡಿದ್ದಾರೆ.

ಈಗ ಸಮುದಾಯದ ಹಿರಿಯ ನಾಯಕನನ್ನು ಕಾಂಗ್ರೆಸ್‌ ಏಕಾಏಕಿ ಅಮಾನತು ಮಾಡುವ ಮೂಲಕ ಅಲ್ಪ ಸಂಖ್ಯಾತ ಸಮುದಾಯದ ಒಂದು ವರ್ಗದಲ್ಲಿ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ ಪಕ್ಷದ ಈ ನಡೆ ಮುಸ್ಲಿಂ ಸಮುದಾಯದ ನಾಯಕರು ಪರ್ಯಾಯ ರಾಜಕೀಯ ಆಲೋಚನೆ ಮಾಡುವಂತೆ ಮಾಡಿದೆ.

ಅದು ಬಿಜೆಪಿಯ ಬಗ್ಗೆ ಆ ಸಮುದಾಯದ ನಾಯಕರಲ್ಲಿರುವ ನಕಾರಾತ್ಮಕ ಧೋರಣೆಯನ್ನೂ ಬದಲಾಯಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಏಕೆಂದರೆ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ.10ರಿಂದ 15ರಷ್ಟು ಮುಸ್ಲಿಂ ಸಮುದಾಯದ ಮತಗಳೂ ಬಿಜೆಪಿಗೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಸ್ಲಿಂ ಮುಖಂಡರ ಸಭೆ?: ರೋಷನ್‌ ಬೇಗ್‌ ಅವರನ್ನು ಅಮಾನತು ಮಾಡಿರುವುದರಿಂದ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದ ನಾಯಕರು ಬೇಸರಗೊಂಡಿದ್ದು, ಈ ಕುರಿತು ಚರ್ಚಿಸಲು ಶೀಘ್ರವೇ ಪಕ್ಷದಲ್ಲಿನ ಸಮಾಜದ ಪ್ರಮುಖ ನಾಯಕರು ಸಭೆ ಸೇರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ರೋಷನ್‌ ಬೇಗ್‌, ಸಿ.ಎಂ. ಇಬ್ರಾಹಿಂ, ನಜೀರ್‌ ಅಹಮದ್‌, ತನ್ವೀರ್‌ ಸೇಠ್ ಸೇರಿ ಪ್ರಮುಖ ನಾಯಕರು ಸಭೆ ಸೇರಿ, ಸಮಾಜದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next