Advertisement

ಪಾದರಾಯನಪುರದಲ್ಲಿ ಇಂಥಹ ಘಟನೆ ನಡೆಯಿತೆಂದು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ: ಜಮೀರ್

10:02 AM Apr 22, 2020 | keerthan |

ಬೆಂಗಳೂರು: ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್ ಅವರು ಪಾದರಾಯನಪುರ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಪಾದರಾಯನಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ ಎಂದು ನನ್ನಿಂದ ಇನ್ನೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ, ತಮ್ಮನ್ನೇ ಉಳಿಸಲು ಬಂದವರ ಮೇಲೆ ಜನ ಹಲ್ಲೆಗೆ ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.

Advertisement

ಈ ಬಗ್ಗೆ ವಿಸ್ತ್ರತವಾಗಿ ಟ್ವೀಟ್ ಮಾಡಿರುವ ಜಮೀರ್ ಅಹಮದ್ ಖಾನ್, ರವಿವಾರದ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಜಮೀರ್ ಅಹಮದ್ ಖಾನ್ ಮಾಡಿರುವ ಸಾಲು ಟ್ವೀಟ್ ಗಳು ಇಲ್ಲಿವೆ.

1. ಪಾದರಾಯನಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ ಎಂದು ನನ್ನಿಂದ ಇನ್ನೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ, ತಮ್ಮನ್ನೇ ಉಳಿಸಲು ಬಂದವರ ಮೇಲೆ ಜನ ಹಲ್ಲೆಗೆ ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ.

2 ನಾನು ಯಾರಿಗೂ ನನ್ನ ಅಪ್ಪಣೆ ಪಡೆದು ಚಾಮರಾಜಪೇಟೆಗೆ ಬರಬೇಕು ಎಂದು ಎಲ್ಲಿಯೂ ಹೇಳಿಲ್ಲ, ಹೇಳುವುದು ಇಲ್ಲ. ನನ್ನ ಕ್ಷೇತ್ರವೂ ಇತರ ಕ್ಷೇತ್ರಗಳಂತೆ ಒಂದು ಸಾಮಾನ್ಯ ಕ್ಷೇತ್ರ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಕೊಂಡಿರುವುದಕ್ಕೆ ಸಾಕಷ್ಟು ನೋವಾಗಿದೆ.

Advertisement

3 ಲಾಕ್‌ ಡೌನ್ ಪ್ರಾರಂಭವಾದ ದಿನದಿಂದ ಹಿಡಿದು ನಿನ್ನೆಯ ಸಂಜೆಯವರೆಗೂ ಹಗಲು ರಾತ್ರಿಯೆನ್ನದೆ ನಾನು ಕ್ಷೇತ್ರದಲ್ಲಿದ್ದು, ಅಧಿಕಾರಿಗಳಿಗೆ ಸ್ಪಂದಿಸಿ, ಜನರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ನಿಂತು ಯಾವುದೇ ರೀತಿಯ ಗೊಂದಲ ಆಗದಂತೆ ನೋಡಿಕೊಂಡಿದ್ದು ನಗರದಲ್ಲಿ‌ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರಬೇಕೆಂದು.

4 ಆದರೆ ನಿನ್ನೆಯ ಘಟನೆ ನಡೆಯಬಾರದಿತ್ತು, ನಡೆದಿದೆ. ಅದಕ್ಕೆ ನನ್ನ ವಿಷಾದವಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ‌ಕೈಗೊಳ್ಳಲಿ. ಮುಂದೆ ಇಂತಹ ಘಟನೆಗಳು ನನ್ನ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನಡೆಯದಂತೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ.

5 ನನ್ನ ಜನ ಈ ರೀತಿ ವರ್ತಿಸುತ್ತಾರೆ ಎಂದು ನಾನು ಎಂದು ಭಾವಿಸಿರಲಿಲ್ಲ. ಯಾರೋ‌ ಒಂದಷ್ಟು ಜನರ ದುರ್ವರ್ತನೆಗೆ ಇಡೀ ಸಮುದಾಯವನ್ನು ದೂರುವುದು ಕೂಡ ಸರಿಯಲ್ಲ. ಧರ್ಮಾತೀತವಾಗಿ ಕೋವಿಡ್ ವಿರುದ್ಧ ದೇಶ ಹೋರಾಡುತ್ತಿದೆ, ಇದು ಒಂದಾಗಬೇಕಾದ ಸಮಯವೇ ಹೊರತು ಸಮಾಜ ಒಡೆಯುವ ಸಮಯವಲ್ಲ.

6 ಮಾಧ್ಯಮದ ಸ್ನೇಹಿತರು ಎಲ್ಲರೂ ಒಟ್ಟಾಗಿ ನನ್ನ ಮೇಲೆ ಮುಗಿಬಿದ್ದಿದ್ದರಿಂದ ಅನಿವಾರ್ಯವಾಗಿ ಉತ್ತರಿಸದೆ ಹೊರನಡೆಯಬೇಕಾಯಿತು. ಘಟನೆಯ ಬಗ್ಗೆ ಮಾಧ್ಯಮ ಮಿತ್ರರಿಗಿದ್ದ ಆಕ್ರೋಶ, ನೋವಿನ ಅರಿವು ನನಗಿದೆ. ಇಂತಹ ಒಂದು ದುರ್ಘಟನೆ ನಡೆದ ನಂತರ ಈ ರೀತಿ ಆಕ್ರೋಶಭರಿತ ಮಾತುಗಳು ಬರುವುದು ಸಹಜ.

7 ಈ ಘಟನೆ ಸಂಭವಿಸದಂತೆ ಕೈಗೊಳ್ಳಬಹುದಾಗಿದ್ದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾನು ಆಡಿದ ಮಾತುಗಳಿಗೆ ಬೇರೆಯದೇ ಅರ್ಥ ನೀಡಿ ಕೆಲ ಸಚಿವರು ನನ್ನ ವಿರುದ್ಧ ಏನೇನು ಪದಗಳನ್ನು ಬಳಸಬಹುದೋ ಅವೆಲ್ಲವನ್ನೂ ಬಳಸಿ ನನ್ನನ್ನು ಹಾಡಿ ಹೊಗಳಿದ್ದಾರೆ, ಸಂತೋಷವಾಗಿದೆ. ಅವರಿಗೂ ಧನ್ಯವಾದ.

8 ನಾನು ಏನು ಹೇಳಲು ಬಯಸಿದ್ದೆ ಅದನ್ನು ಹೇಳಲು ಎಲ್ಲಿಯೂ ನನಗೆ ಅವಕಾಶ ಸಿಗಲಿಲ್ಲ. ಹಿಂದೂ ಮುಸ್ಲಿಂ ಇರಲಿ ಎಲ್ಲರೂ ಒಂದಾಗಿ ಬಾಳಬೇಕು, ಎಲ್ಲರೂ ಒಂದೇ ತಾಯಿಯ ಮಕ್ಕಳು. ನಮ್ಮ ದೇಶವನ್ನು, ರಾಜ್ಯವನ್ನು ಕೊರೊನಾದಿಂದ ಕಾಪಾಡಬೇಕು. ಇದಕ್ಕೆ ನನ್ನ ಕ್ಷೇತ್ರದ ಜನರ ಸಂಪೂರ್ಣ ಸಹಕಾರ ದೊರೆಯಲಿದೆ.

9 ಆ ಒಂದು ಘಟನೆಯಿಂದ ನನ್ನ ಹೆಸರಿಗೆ ಮಸಿ ಬಳಿಯಲು ಎಷ್ಟೇ ಪ್ರಯತ್ನಿಸಿದರೂ ನಾನು ಜನಸೇವೆಯಿಂದ ಹಿಂದೆ ಸರಿಯುವವನಲ್ಲ. ಮಾನವೀಯತೆಯೇ ನನ್ನ ಧರ್ಮ. ಹಣ, ಅಧಿಕಾರ ಯಾವುದೂ ಶಾಶ್ವತವಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ನನ್ನ ಸಹೋದರ, ಸಹೋದರಿಯರಿದ್ದಂತೆ. ಇವರೆಲ್ಲರ ಜೊತೆ ಸದಾ ಇರುತ್ತೇನೆ

10 ಮುಂದೆ ಇಂಥ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತದೆ. ನನ್ನ ಕ್ಷೇತ್ರದ ಜನತೆ ಎಂದಿನಂತೆ ಮುಂದೆಯೂ ಸರ್ಕಾರ, ವೈದ್ಯಕೀಯ ಸಿಬ್ಬಂದಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ ಎಂಬ ಭರವಸೆ ನನಗಿದೆ. ನಮ್ಮೆಲ್ಲರ ಗುರಿ ಕೋವಿಡ್-19 ನಿರ್ಮೂಲನೆಯೊಂದೇ ಆಗಿರಲಿ.

Advertisement

Udayavani is now on Telegram. Click here to join our channel and stay updated with the latest news.

Next