ಬೀದರ್: ವಕ್ಫ್ ಬೋರ್ಡ್ ಆಸ್ತಿ ನಮ್ಮಪ್ಪನದ್ದು ಅಲ್ಲ, ಅದು ಅವರಪ್ಪನ (ಯತ್ನಾಳ್) ಆಸ್ತಿನೂ ಅಲ್ಲ. ಜನರು ದಾನ ಮಾಡಿದ ಆಸ್ತಿ. ಹೀಗಾಗಿ ವಕ್ಫ್ ಬೋರ್ಡ್‌ನ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆಯುವ ಹಕ್ಕು ಸರ್ಕಾರಕ್ಕೂ ಇಲ್ಲ ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹ್ಮದ್ ಖಾನ್ ಪುನರುಚ್ಛರಿಸಿದ್ದಾರೆ.
ನಗರದಲ್ಲಿ ಸೋಮವಾರ ವಕ್ಫ್ ಬೋರ್ಡ್ ರದ್ದು ಮಾಡಬೇಕೆಂಬ ಶಾಸಕ ಬಸವರನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಜಮೀರ್, ದಾನಿಗಳು ವಕ್ಫ್ ಬೋರ್ಡ್‌ಗೆ ಆಸ್ತಿ ಕೊಡಬೇಕಾದರೆ ಷರತ್ತು ಹಾಕಿ ಜಮೀನು ಕೊಟ್ಟಿರುತ್ತಾರೆ. ಬೇರೆಯವರನ್ನು ಖುಷಿ ಪಡಿಸಲು ಯತ್ನಾಳ್ ಮುಸಲ್ಮಾನರ ಬಗ್ಗೆ ಮಾತನಾಡುತ್ತಾರೆ. ಅವರಿಗೆ ರಾಜಕೀಯ ಬೇಕೆ ಹೊರತು ಹಿಂದೂ- ಮುಸ್ಲಿಂ ಯಾರು ಬೇಕಾಗಿಲ್ಲ. ಅವರು ಇದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಒಟ್ಟು 37 ಸಾವಿರ ಎಕರೆಗಳಷ್ಟು ವಕ್ಫ್ ಬೋರ್ಡ್ ಆಸ್ತಿ ಇದೆ. ಇದರಲ್ಲಿ 4570 ಎಕರೆಗಳಷ್ಟು ಆಸ್ತಿ ಒತ್ತುವರಿಯಾಗಿದೆ. ಅದಕ್ಕಾಗಿ ವಕ್ಫ್ ಅದಾಲತ್ ನಡೆಸಲಾಗುತ್ತಿದ್ದು, ಬೀದರ ಜಿಲ್ಲೆಯಿಂದಲೇ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕೆಂಬ ಯತ್ನಾಳ್ ಹೇಳಿಕೆಗೆ ಕಿಡಿಕಾರಿದ ಜಮೀರ್, ಭಾರತ ನಮ್ಮ ದೇಶ. ನಾವ್ಯಾಕೆ ಪಾಕಿಸ್ತಾನಕ್ಕೆ ಹೋಗಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದವರು ನಾವು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಯಾರ ಜೊತೆಗಿದ್ದರೂ ಎಂಬುವುದು ಇತಿಹಾಸ ಹೇಳುತ್ತದೆ ಎಂದರು.
ಉಪ ಮುಖ್ಯಮಂತ್ರಿ ಹುದ್ದೆ ಬೇಡಿಕೆ ವಿಚಾರ ಸಂಬಂಧ ನಾನು ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಪರಮೇಶ್ವರ, ಜಾರಕಿಹೊಳಿ, ರಾಜಣ್ಣ, ಎಂಬಿ ಪಾಟೀಲ ಸಹ ಅವರವರ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ, ಡಿಸಿಎಂ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.