ಬಳ್ಳಾರಿ: ಶಾಸಕ ಸೋಮಶೇಖರ ರೆಡ್ಡಿ ಮನೆ ಎದುರು ಧರಣಿ ಮಾಡಲು ಬಂದಿದ್ದ ಬೆಂಗಳೂರಿನ ಶಾಸಕ ಜಮೀರ್ ಅಹ್ಮದ್ ರನ್ನು ಬಳ್ಳಾರಿ ಹೊರವಲಯದ ಬೈಪಾಸ್ ರಸ್ತೆ ಬಳಿ ಪೊಲೀಸರು ಬಂಧಿಸಿದರು.
ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರು ಶಾಸಕ ಸೊಮಶೇಖರ ರೆಡ್ಡಿಯವರು ಕ್ಷಮೆ ಯಾಚಿಸಬೇಕು. ಅವರನ್ನು ಪೊಲೀಸರು ಬಂಧಿಸಬೇಕು ಎಂದು ಕಳೆದ ವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿ ಒಂದು ವಾರಗಳ ಕಾಲ ಗಡುವು ನೀಡಿದ್ದರು.
ಕ್ಷಮೆ ಯಾಚಿಸದಿದ್ದಲ್ಲಿ ಮುಂದಿನ ಸೋಮವಾರ (ಇಂದು) ರೆಡ್ಡಿ ಮನೆ ಎದುರು ಧರಣಿ ನಡೆಸುವುದಾಗಿ ಹೇಳಿ, ಸಿದ್ದತೆ ನಡೆಸಿದ್ದ ಜಮೀರ್ ಅಹ್ಮದ್ ಅವರನ್ನು ಬಳ್ಳಾರಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಪೊಲೀಸರು ಬಂಧಿಸಿ ವಾಪಸ್ ಕರೆದುಕೊಂಡು ಹೋದರು. ಎಸ್ ಪಿ ಸಿ.ಕೆ ಬಾಬಾ ಅವರುಸ್ಥಳಕ್ಕೆ ಆಗಮಿಸಿ ಜಮೀರ್ ಅಹ್ಮದ್ ಅವರನ್ನು ಬಂಧಿಸಿ, ಅವರೊಂದಿಗೆ ವಾಹನದಲ್ಲಿ ತೆರಳಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಶಾಸಕ ಸೋಮಶೇಖರ ರೆಡ್ಡಿ ಅವರು ಮುಸಲ್ಮಾರನ್ನು ಗುರಿಯಾಗಿಸಿಕೊಂಡು ಪ್ರಚೋದನೆ ಮಾಡಿದ್ದರು. ಉಫ್ ಎಂದು ಊದಿದರೆ ಗಾಳಿಗೆ ಹೋಗುತ್ತೀರಿ ಎಂದಿದ್ದರು. ಆದರೆ ಇಂದು ನಾನು ಬಳ್ಳಾರಿಗೆ ಬಂದಿದ್ದೇನೆ. ಎಲ್ಲಿದ್ದಾನೆ ಸೋಮಶೇಖರ ರೆಡ್ಡಿಯನ್ನು ಕರೀರಿ. ಊದಿದರೆ ನಾನು ಹೋಗುತ್ತೇನೆ ನೋಡೋಣ ಎಂದು ಸವಾಲು ಹಾಕಿದರು. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪೊಲೀಸರು ಬಿಗಿ ಬಂದೋಬಸ್ತ್ ಏಪರ್ಡಿಸಿದ್ದರು. ಕಾಂಗ್ರೆಸ್ ಮುಖಂಡರಾದ ಹನುಮ ಕಿಶೋರ್, ಕುಡಿತಿನಿ ಶ್ರೀನಿವಾಸ್, ಮುನ್ನಾಭಾಯ್ ಸೇರಿದಂತೆ ಹಲವರು ಇದ್ದರು.