Advertisement

ಜಾಕೀರ್‌ ಮನೆಯಲ್ಲಿ ವರಮಹಾಲಕ್ಷ್ಮೀ ವ್ರತ!

12:33 PM Aug 05, 2017 | |

ಮೈಸೂರು: ಧರ್ಮಗಳ ಮೇಲಾಟದಿಂದ ಸಮಾಜದಲ್ಲಿ ಸಾಮರಸ್ಯ ಕದಡುತ್ತಿರುವ ಈ ದಿನಗಳಲ್ಲಿ ಅಂತರ ಧರ್ಮೀಯ ವಿವಾಹವಾಗಿರುವ ದಂಪತಿಯೊಬ್ಬರು ತಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ ವ್ರತ ಆಚರಣೆ ಮಾಡುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದ್ದಾರೆ. ಮೈಸೂರಿನ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಮತ ಹಾಗೂ ಕಸಾಪ ನಗರ ಪ್ರಧಾನ ಕಾರ್ಯದರ್ಶಿಯಾಗಿರುವ ಜಾಕೀರ್‌ ಹುಸೇನ್‌ ಅವರ ಮನೆಯಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಣೆ ನಡೆದಿದೆ.

Advertisement

ಪರಸ್ಪರ ಪ್ರೀತಿಸಿ 16 ವರ್ಷಗಳ ಹಿಂದೆ ಅಂತರ ಧರ್ಮೀಯ ವಿವಾಹವಾಗಿರುವ ಶ್ರೀರಾಂಪುರದ ಶಿವಪುರದವರಾದ ಮಮತ-ಮೈಸೂರು ತಾಲೂಕು ಕೋಟೆಹುಂಡಿಯ ಜಾಕೀರ್‌ ಹುಸೇನ್‌ ಅವರ ಮನೆಯಲ್ಲಿ ಕಳೆದ 13 ವರ್ಷಗಳಿಂದಲೂ ವರಮಹಾಲಕ್ಷ್ಮೀ ವ್ರತ ಆಚರಿಸಿಕೊಂಡು ಬರಲಾಗುತ್ತಿದೆ. ಇಷ್ಟು ಮಾತ್ರವಲ್ಲ, ಇವರ ಮನೆಯಲ್ಲಿ ಹಿಂದೂ ಹಬ್ಬಗಳು, ಮುಸ್ಲಿಂ ಹಬ್ಬಗಳೆರಡನ್ನೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಂಪತಿಗೆ 8ನೇ ತರಗತಿ ಓದುತ್ತಿರುವ ಮಗಳು ಸಾನು, 3ನೇ ತರಗತಿ ಓದುತ್ತಿರುವ ಮಗ ಅರ್ಷದ್‌ ಬೇಗ್‌ ಇದ್ದು, ನಗರದ ಎಲೆತೋಟದ ಬಳಿಯಿರುವ ಸೇಂಟ್‌ ಮೇರಿಸ್‌ ಶಾಲೆಯಲ್ಲಿ ಓದಿಸುತ್ತಿದ್ದಾರೆ.

ಯುಗಾದಿ, ಗೌರಿ-ಗಣೇಶ ಹಬ್ಬ, ಆಯುಧಪೂಜೆ, ದೀಪಾವಳಿ ಆಚರಣೆಯ ಜತೆಗೆ ಬಕ್ರೀದ್‌, ರಂಜಾನ್‌ ಹಬ್ಬಗಳನ್ನೂ ಆಚರಣೆ ಮಾಡುತ್ತಾ ಹಬ್ಬಗಳ ಸಂದರ್ಭದಲ್ಲಿ ಸ್ನೇಹಿತರನ್ನು ಮನೆಗೆ ಕರೆದು ಔತಣ ನೀಡುತ್ತಾ ಅನ್ಯೋನ್ಯವಾಗಿದ್ದಾರೆ ಈ ದಂಪತಿ. ಈ ಹಿಂದೆ ಇನ್ಸುರೆನ್‌ ಮಾರ್ಕೆಟಿಂಗ್‌ ಕೆಲಸ ಮಾಡುತ್ತಿದ್ದ ಜಾಕೀರ್‌ ಹುಸೇನ್‌, ಇದೀಗ ಆ ಕೆಲಸವನ್ನು ಬಿಟ್ಟು ನಗರ ಕಸಾಪ ಅಧ್ಯಕ್ಷ ಕೆ.ಎಸ್‌.ಶಿವರಾಮ್‌ ಜತೆ ಸೇರಿ ಸಂಪೂರ್ಣವಾಗಿ ಕನ್ನಡ ಚಳವಳಿ ಸೇರಿದಂತೆ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ 4 ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿದ ನಂತರ ಮನೆಯಲ್ಲಿ ಲಕ್ಷ್ಮೀ ವಿಗ್ರಹವನ್ನು ಪ್ರತಿಷ್ಠಾಪಿಸಿ, ಎಂಟುಬಗೆಯ ಹೂವು, ಎಂಟು ಬಗೆಯ ಹಣ್ಣುಗಳನ್ನು ದೇವಿಗೆ ಅರ್ಪಿಸಿದ್ದಾರೆ. ಒಬ್ಬಟ್ಟು ಸೇರಿದಂತೆ ಹಬ್ಬದ ಅಡುಗೆ ಮಾಡಿ 30 ರಿಂದ 40 ಮಂದಿ ಸ್ನೇಹಿತರಿಗೆ ಹಬ್ಬದ ಊಟ ಬಡಿಸಿ ಧನ್ಯತೆ ಮೆರೆದಿದ್ದಾರೆ. ಧರ್ಮ-ಧರ್ಮಗಳ ನಡುವೆ ನಾವೇ ಮೇಲು ಎಂಬ ಕಿತ್ತಾಟ ನಡೆಯುತ್ತಿರುವ ಈ ದಿನಗಳಲ್ಲಿ ಅಂತರ ಧರ್ಮೀಯ ವಿವಾಹವಾಗಿರುವ ಈ ದಂಪತಿ, ಒಂದು ಧರ್ಮಕ್ಕೆ ಮತಾಂತರ ಆಗದೆ ಇಬ್ಬರ ಧಾರ್ಮಿಕ ಆಚರಣೆಗಳನ್ನೂ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ಜಾಕೀರ್‌ ಹುಸೇನ್‌, ಹಿಂದೂ ಹುಡುಗಿಯನ್ನು ಪ್ರೇಮಿಸಿ ಮದುವೆಯಾಗಿ ನನ್ನ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುವುದು ದೊಡ್ಡದಲ್ಲ, ಆಕೆಯ ನಿಲುವಿಗೂ ಬೆಲೆ ಕೊಡಬೇಕು. ಸಮಾಜವನ್ನು ಬೆಸೆಯುವ ಕೆಲಸ ಆಗಬೇಕಿದೆ. ಎಲ್ಲರೂ ಕೂಡಿ ಸಹಬಾಳ್ವೆ ಮಾಡಿದರೆ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಬಹುದು. ಸಾಮರಸ್ಯದಿಂದ ಜೀವನ ಸಾಗಿಸಿದರೆ ಭಾರತೀಯರಾಗಿದ್ದಕ್ಕೂ ಸಾರ್ಥಕ ಎನ್ನುತ್ತಾರೆ ಜಾಕೀರ್‌ಹುಸೇನ್‌.

Advertisement

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next