ಮುಂಬೈ/ನವದೆಹಲಿ: ವಿವಾದಿತ ಧಾರ್ಮಿಕ ವಿದ್ವಾಂಸ ಡಾ.ಜಾಕೀರ್ ನಾಯ್ಕನ್ನು ಮಲೇಷ್ಯಾದಿಂದ ಭಾರತಕ್ಕೆ ಗಡಿಪಾರು ಮಾಡುವ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಪ್ರತಿಕ್ರಿಯೆ ನೀಡಿ ಮಲೇಷ್ಯಾ ಸರ್ಕಾರದ ವತಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ವರದಿ ಆಧಾರ ರಹಿತ ಎಂದು ಹೇಳಿದೆ. ವೇಳೆ ಗಡಿಪಾರು ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾಕೀರ್ ನಾಯ್ಕ ಭಾರತದಲ್ಲಿ ತನ್ನ ಜೀವಕ್ಕೆ ಸುರಕ್ಷತೆ ಇದೆ ಎಂದು ಎನಿಸುವ ವರೆಗೆ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಅಧಿಕೃತ ಮಾಹಿತಿ ಇಲ್ಲ: ಜಾಕೀರ್ ನಾಯ್ಕನನ್ನು ಗಡಿಪಾರು ಮಾಡುವ ಬಗ್ಗೆ ಮಲೇಷ್ಯಾ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ವಿದೇಶಾಂಗ ಇಲಾಖೆ ನವದೆಹಲಿಯಲ್ಲಿ ತಿಳಿಸಿದೆ. ಈ ವರ್ಷದ ಜನವರಿಯಲ್ಲಿ ಆತನನ್ನು ಗಡಿಪಾರು ಮಾಡುವ ಬಗ್ಗೆ ಆ ದೇಶದ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿತ್ತು. ಪ್ರಚೋದನಾಕಾರಿ ಯಾಗಿ ಭಾಷಣ ಮಾಡಿದ ಆರೋಪ, ಅಕ್ರಮ ಹಣ ವರ್ಗಾವಣೆ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗಾಗಲೇ ಮುಂಬೈ ಸೇರಿದಂತೆ ಹಲವು ಸ್ಥಳಗಳಲ್ಲಿ ಆತನಿಗೆ ಸೇರಿದ ಸ್ಥಳಗಳಿಗೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. 2016ರಲ್ಲಿ ಆತನ ವಿರುದ್ಧ ಮೊದಲ ಬಾರಿಗೆ ಕೇಸು ದಾಖಲಿಸಲಾಗಿತ್ತು.
ಹಿಂತಿರುಗುವುದಿಲ್ಲ: ಇದೇ ವೇಳೆ ಸದ್ಯಕ್ಕೆ ತಾನು ಭಾರತಕ್ಕೆ ವಾಪಸಾಗುವುದಿಲ್ಲ ಎಂದು ನಾಯ್ಕ ಹೇಳಿದ್ದಾನೆ. ನನ್ನ ವಿರುದ್ಧ ಪಾರದರ್ಶಕ ವಿಚಾರಣೆ ನಡೆಸುವ ವಿಶ್ವಾಸ ಮೂಡುವವರೆಗೂ ನಾನು ಭಾರತಕ್ಕೆ ವಾಪಸಾಗುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಮುಂಬೈನಲ್ಲಿ ಆತನ ವಕ್ತಾರ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಜತೆಗೆ ಗಡಿಪಾರು ಮಾಡುವ ಸುದ್ದಿ ಆಧಾರ ರಹಿತ ಎಂದು ಅವರು ತಳ್ಳಿಹಾಕಿದ್ದಾರೆ.
ಸಾರ್ವಜನಿಕ ವಲಯದಲ್ಲಿರುವ ಪ್ರಮುಖ ವ್ಯಕ್ತಿಗಳ ಮೇಲೆ ನಾವು ಅನುಮಾನ ವ್ಯಕ್ತಪಡಿಸಬಾರದು. ದೂರುಗಳಿದ್ದಲ್ಲಿ ಆದಷ್ಟು ಬೇಗ ಅದಕ್ಕೆ ಪರಿಹಾರ ಕಲ್ಪಿಸಬೇಕು. ಅಪರಾಧ ನಡೆದಿದ್ದರೆ ಅದಕ್ಕೆ ಶಿಕ್ಷೆಯಾಗಬೇಕು.
ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ