Advertisement

ಝೆನ್‌ ಕತೆ

06:00 AM Aug 12, 2018 | Team Udayavani |

ರೊಕನ್‌ ಎಂಬುದು ಒಂದು ಝೆನ್‌ ಪ್ರಕಾರ. ಇದೇ ಹೆಸರಿನಿಂದ ಈ ವಿಭಾಗದ ಭಿಕ್ಷುಗಳನ್ನು ಕರೆಯುತ್ತಾರೆ. ಇವರದು ವಿಚಿತ್ರವಾದ ಸ್ವಭಾವ. ಯಾರ ಬಗ್ಗೆಯೂ ಕೆಡುಕನ್ನು ಕನಸಿನಲ್ಲಿಯೂ ಎಣಿಸುವವರಲ್ಲ. ಕ್ರಿಮಿ-ಕೀಟಗಳಿಗೂ, ಜೇನು-ಹೇನುಗಳಿಗೂ ಇವರಿಗೆ ಅತ್ಯಧಿಕ ಕರುಣೆ ಇರುತ್ತಿತ್ತು. ಯಾವಾಗಲೂ ವಿಲಕ್ಷಣವಾಗಿ ಓಡಾಡುತ್ತಿದ್ದ ಇವರನ್ನು “ಹುಚ್ಚ’ರೆಂದು ಜನ ಭಾವಿಸುತ್ತಿದ್ದರು. ಹುಳುಹುಪ್ಪಟಗಳನ್ನು ಕೂಡ ಪ್ರೀತಿಯಿಂದ ಕಾಣುವ ಇವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಾಧ್ಯವಾಗುತ್ತಿರಲಿಲ್ಲ. 

Advertisement

ರೊಕನ್‌ ಭಿಕ್ಷುವೊಬ್ಬ ಕಾಡಿನ ನಡುವೆ ವಾಸಿಸುತ್ತಿದ್ದರು. ಅವರದ್ದು ಸಣ್ಣ ಗುಡಿಸಲು. ಹರಿಯುವ ತೊರೆಯ  ನೀರನ್ನು ಸೇವಿಸುತ್ತಿದ್ದರು. ನೆಲಕ್ಕೆ ಉದುರಿದ ಧಾನ್ಯವನ್ನು ಹೆಕ್ಕಿ ತಿನ್ನುತ್ತಿದ್ದರು. ತಮ್ಮ ಎದೆಯ ಮೇಲೆ ಹುಲುಸಾಗಿ ಬೆಳೆದಿರುವ ಕೂದಲಿನ ನಡುವೆ ಬಾಳ್ವೆ ನಡೆಸುವ ಹೇನುಗಳ ಬಗ್ಗೆಯೂ ದಯೆಯನ್ನು ಹೊಂದಿರುತ್ತಿದ್ದರು. ಹುಲ್ಲಿನ ನಡುವೆ ಕ್ರಿಮಿಗಳು ಸರಿದಾಡುವುದನ್ನು ಕಂಡರೆ ಸದ್ದುಮಾಡದೆ ಸುಮ್ಮನಾಗುತ್ತಿದ್ದರು- ಅವುಗಳಿಗೆ ತೊಂದರೆಯಾಗಬಾರದೆಂದು! 

ಒಂದು ರಾತ್ರಿ ದುರ್ಘ‌ಟನೆ ನಡೆಯಿತು. ಭಿಕ್ಷು ಗುಡಿಸಲಿನಲ್ಲಿ ಇರಲಿಲ್ಲ. ಕಳ್ಳನೊಬ್ಬ ಗುಡಿಸಲಿಗೆ ನುಗ್ಗಿದ. ಭಿಕ್ಷು ಬಳಸುತ್ತಿದ್ದ  ಜೀವನಕ್ಕೆ ಬಳಸಲಾಗುತ್ತಿದ್ದ ಸಣ್ಣಪುಟ್ಟ ವಸ್ತುಗಳನ್ನು  ಒಂದು ಹರಕು ಬಟ್ಟೆಯ ಗಂಟಿನಲ್ಲಿ ಕಟ್ಟಿ ಒಯ್ದು ಪರಾರಿಯಾದ. ಭಿಕ್ಷು ಗುಡಿಸಲಿಗೆ ಮರಳಿ ಬರುವಾಗ ಅದು ಖಾಲಿ ಖಾಲಿಯಾಗಿತ್ತು. ತಾನು ಉಟ್ಟ ಕೌಪೀನದಲ್ಲಿಯೇ ನಿಲ್ಲಬೇಕಾಯಿತು.

ಪಾಪ ! ನನ್ನಂಥ ಬಡಪಾಯಿಯ ಎಲೆಮನೆಯಲ್ಲಿ ಆ ಮುಗ್ಧನಿಗೆ ಏನು ಸಿಕ್ಕೀತು ಎಂದು ಭಿಕ್ಷು ವ್ಯಥಿಸಿದರು. ಹುಣ್ಣಿಮೆ ರಾತ್ರಿಯದು. ಭಿಕ್ಷು ಹೊರಗೆ ಬಂದರು. ಬಾನಿನಲ್ಲಿ ಚಂದ್ರ ಹೊಳೆಯುತ್ತಿದ್ದ. “ಛೆ ! ಈ ಚಂದ್ರನನ್ನಾದರೂ ಕಳ್ಳ ಒಯ್ಯಬಹುದಿತ್ತು. ಅವನು ಇದನ್ನು ನೋಡಲೇ ಇಲ್ಲ ಅಂತ ತೋರುತ್ತೆ’ ಎಂದು ಗೊಣಗುತ್ತ ಆಗಸ ನೋಡುತ್ತ ಹಾಗೇ ಅಂಗಳದಲ್ಲಿ ನಿದ್ದೆ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next