ರೆ. ಅವರ ಆತ್ಮಕಥೆಯ ಒಂದು ಅಧ್ಯಾಯದ ಭಾವಾನುವಾದ ಇಲ್ಲಿದೆ.
***
ವಿಶ್ವಕಪ್ ಟೂರ್ನಿ ಆರಂಭವಾಗಲು ಕೆಲವೇ ತಿಂಗಳು ಬಾಕಿಯಿದೆ ಅನ್ನುವಾಗ, ನನ್ನ ಟ್ರಾಕ್ ರೆಕಾರ್ಡ್ ಕೆಟ್ಟದಾಗಿತ್ತು. ಹಿಂದಿನ ಪಂದ್ಯ ಗಳಲ್ಲಿ ಅಷ್ಟೇನೂ ಚೆನ್ನಾಗಿ ಆಡಿರಲಿಲ್ಲ. ಫೀಲ್ಡಿಂಗ್‌ನ ವೇಳೆ ಚೆಂಡು ಬಡಿದು, ಮೊಣಕೈನ ಮೂಳೆ ಮುರಿದಿತ್ತು. ಕೈಬೆರಳುಗಳಿಗೂ ಬ್ಯಾಂಡೇಜ್ ಹಾಕಲಾಗಿತ್ತು. ಅದಕ್ಕಿಂತ ಮುಖ್ಯವಾಗಿ- ಪಂದ್ಯ ಗೆಲ್ಲಿಸಬಲ್ಲ ಆಟಗಾರ, ಮ್ಯಾಚ್ ವಿನ್ನರ್ ಎಂಬ ಹಣೆಪಟ್ಟಿ ನನಗಿರಲಿಲ್ಲ. ಹಾಗಾಗಿ, ವಿಶ್ವಕಪ್ ಆಡುವ ತಂಡದಲ್ಲಿ ಛಾನ್ಸ್ ಸಿಗುವ ಸಾಧ್ಯತೆ 50-50 ಎಂದು ನನಗೇ ಅನಿಸಿತ್ತು. ಆದರೆ, ಕಡೆಗೊಮ್ಮೆ ವಿಶ್ವಕಪ್ ಆಡಲು ಆಯ್ಕೆ ಮಾಡಿರುವ ತಂಡದ ಪಟ್ಟಿ ಪ್ರಕಟವಾದಾಗ a pleasant surprise ನನಗೆ ಅವಕಾಶ ಸಿಕ್ಕಿತ್ತು. ಸುದ್ದಿ ತಿಳಿದಾಗ, ನನಗೆ ನಾನೇ ಹೇಳಿಕೊಂಡೆ: ವಿಶ್ವಕಪ್ ಗೆಲ್ಲಬೇಕು!
Advertisement
ಆದರೆ, ಬದುಕು ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮುಖ್ಯವಾಗಿ, ನನ್ನ ದೇಹಸ್ಥಿತಿ ಚೆನ್ನಾಗಿರಲಿಲ್ಲ. ಏನು ತಿಂದರೂ ವಾಂತಿಯಾಗುತ್ತಿತ್ತು. ಕೆಲವೊಮ್ಮೆ ಅತೀ ಅನ್ನುವಷ್ಟು ಬೇಧಿ. ವಿಕೆಟ್‌ಗಳ ಮಧ್ಯೆ ಓಡುವಾಗ, ಸುಸ್ತಾಗುತ್ತಿತ್ತು. ರಾತ್ರಿಯಂತೂ ಎಡೆಬಿಡದ ಕೆಮ್ಮು. ಒಂದೆರಡು ಬಾರಿ, ಕಫದೊಂದಿಗೆ ರಕ್ತವೂ ಬಂದಿತ್ತು. ಹೀಗೆಲ್ಲ ಆದಾಗ, ನಾವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದೆವು. ಬದಲಾದ ವಾತಾವರಣ, ಅಪಾರ ಬಿಸಿಲು ಮತ್ತು ಪಿತ್ತದ ಕಾರಣಕ್ಕೆ ಹೀಗೆಲ್ಲ ಆಗುತ್ತಿರಬಹುದು ಅಂದುಕೊಂಡೆ. ಭಾರತಕ್ಕೆ ಹೋದ ತಕ್ಷಣ ಆಸ್ಪತ್ರೆಗೆ ಹೋಗೋಣ, ಅದುವರೆಗೂ ಯಾರಿಗೂ ಈ ವಿಷಯ ಹೇಳಬೇಡಿ ಎಂದು ತಂಡದ ದೈಹಿಕ ತರಬೇತುದಾರರಿಗೆ ಮನವಿ ಮಾಡಿಕೊಂಡೆ. ಅವರೂ ಒಪ್ಪಿದರು.* * *
ಹಾಂಹೂ ಅನ್ನುವುದರೊಳಗೆ ವಿಶ್ವಕಪ್ ಟೂರ್ನಿ ಆರಂಭವಾ ಗಿಯೇ ಹೋಯಿತು. ತೆಂಡೂಲ್ಕರ್‌ಗೆ ಇದು ಕಡೆಯ ವಿಶ್ವಕಪ್. ಆ ಕಾರಣಕ್ಕಾದರೂ ನಾವು ಕಪ್ ಗೆಲ್ಲಬೇಕು. ಆ ಮೂಲಕ ತೆಂಡೂಲ್ಕರ್‌ಗೆ ಗೌರವ ಸಲ್ಲಿಸಬೇಕು ಎಂಬ ಸೆಂಟಿಮೆಂಟ್ ಕೂಡ ಜತೆಗಿತ್ತು. ಮೊದಲ ಎರಡು ಪಂದ್ಯಗಳನ್ನು ನಾವು ಸುಲಭವಾಗಿಯೇ ಗೆದ್ದೆವು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದು ಮ್ಯಾಜಿಕ್ ನಡೆಯಿತು. ಅದುವರೆಗೂ ಪಾರ್ಟ್ ಟೈಮ್ ಬೌಲರ್ ಅನ್ನಿಸಿಕೊಂಡಿದ್ದ ನಾನು, ಐದು ವಿಕೆಟ್ ಪಡೆದಿದ್ದೆ. ಆ ಮೂಲಕ, ಮ್ಯಾನ್ ಆಫ್ ದಿ ಮ್ಯಾಚ್ ಅನ್ನಿಸಿ ಕೊಂಡಿದ್ದೆ. ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲ; ಬೌಲರ್ ಆಗಿಯೂ ಮಿಂಚಬೇಕು. ಅಕಸ್ಮಾತ್, ಬ್ಯಾಟಿಂಗ್ನಲ್ಲಿ ವಿಫಲನಾದರೆ, ಬೌಲಿಂಗ್ನಲ್ಲಿ ಮಿಂಚುವ ಮೂಲಕ ಆ ನಷ್ಟ ತುಂಬಬೇಕು ಎಂದು ಎರಡೆರಡು ಬಾರಿ ಹೇಳಿಕೊಂಡೆ. ಆಗ ಎದುರಾದದ್ದೇ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ.
Related Articles
Advertisement
ಒಂದೆರಡಲ್ಲ, ಮೂರು ಬಾರಿ ವಿಶ್ವಕಪ್ ಗೆದ್ದಿದ್ದ ತಂಡ ಆಸ್ಟ್ರೇಲಿಯಾ. ಅವತ್ತು, 260 ರನ್ ಚೇಸ್ ಮಾಡುವುದು ನಿಜಕ್ಕೂ ಕಷ್ಟವಿತ್ತು. ಗಂಭೀರ್, ಸೆಹವಾಗ್, ತೆಂಡೂಲ್ಕರ್ ಎಲ್ಲರೂ ಪ್ರತಿ ಬಾಲ್‌ಗೆ ಒಂದು ರನ್ ಎಂಬಂತೆ ಹೊಡೆಯುತ್ತಿದ್ದರು. ಅದನ್ನು ಕಂಡು ಪುಕಪುಕ ಶುರುವಾಯಿತು. ಕಾರಣ, ಅವತ್ತು ನನಗೆ ನಿಲ್ಲುವುದೇ ಕಷ್ಟವಿತ್ತು. ಹಾಗಿರುವಾಗ, ಒಂದೊಂದೇ ರನ್ ಓಡಿ ಇನ್ನಿಂಗ್ಸ್ ಕಟ್ಟುವುದು ಹೇಗೆ? ಹೀಗೆಲ್ಲ ಯೋಚಿಸುತ್ತಿದ್ದಾಗಲೇ, ತೆಂಡೂಲ್ಕರ್, ಸೆಹವಾಗ್, ಗಂಭೀರ್ ಔಟ್ ಆಗಿಬಿಟ್ಟರು. ಆಸ್ಟ್ರೇಲಿಯಾದವರ ಮುಖದಲ್ಲಿ ಪಂದ್ಯ ಗೆದ್ದ ಖುಷಿ. ಬ್ಯಾಟ್ ಹಿಡಿದು ಮೈದಾನಕ್ಕೆ ನಡೆದುಬಂದೆನಲ್ಲ, ಆಗ ಎಲ್ಲರನ್ನೂ ಸುಮ್ಮನೇ ಒಮ್ಮೆ ನೋಡಿದೆ. ಅವರೆಲ್ಲರ ಕಂಗಳಲ್ಲೂ ಯಾವುದೋ ಒಂದು ಭರವಸೆ. ಆಗಲೇ, ಯಾವುದೋ ಒಂದು ಕಡೆಯಿಂದ- “”ನೀನೀಗ ಚೆನ್ನಾಗಿ ಆಡಬೇಕಪ್ಪಾ …” ಅಂದಂತಾಯಿತು. ಅದರಲ್ಲಿ, ಅಮ್ಮನ ದನಿಯ ಅಕ್ಕರೆಯಿತ್ತು. ಆ ಕ್ಷಣದಲ್ಲೇ ನನ್ನ ಮೈಯೊಳಗೆ ಮಿಂಚು ಹರಿದಂತಾಯಿತು. ಸುಸ್ತು, ಸಂಕಟ, ಕೆಮ್ಮು, ಕಫ- ಈ ಯಾವುದೂ ಆಗ ನೆನಪಾಗಲಿಲ್ಲ. “”ಈಗೇನಾದರೂ ಫೋರ್ ಅಥವಾ ಸಿಕ್ಸರ್ ಹೊಡೆಯಲು ಹೋದರೆ ಅದು ಕ್ಯಾಚ್ ಆಗಿಬಿಡಬಹುದು. ಅಂಥ ಪ್ರಯತ್ನ ಮಾಡುವುದೇ ಬೇಡ. ಸಿಂಗಲ್ ಅಥವಾ ಎರಡು ರನ್ ಓಡುವ ಮೂಲಕವೇ ಎದುರಾಳಿಗಳನ್ನು ಕಾಡಬೇಕು. ಒಂದು ಕಡೆ ವಿಕೆಟ್ ಉಳಿಸಿಕೊಂಡು, ಇನ್ನೊಂದು ಕಡೆ ಇನ್ನಿಂಗ್ಸ್ ಕಟ್ಟಬೇಕು. ಯಾರು ಆಡಲಿ ಬಿಡಲಿ, ನಾನಂತೂ ಆಡಲೇಬೇಕು ಅಂದುಕೊಂಡೆ. ಅವತ್ತು ಮಾತ್ರ ನನ್ನ ದೇಹ ಅದ್ಭುತ ಎಂಬಂತೆ ಸ್ಪಂದಿಸಿತು. ಮ್ಯಾಚ್ ಕೈ ತಪ್ಪಿಹೋಗಬಹುದು ಅನ್ನಿಸಿದಾಗ, ಎದುರಾಳಿಗಳನ್ನು ಹಂಗಿಸುವುದು, ಅವರನ್ನು ಜಗಳಕ್ಕೆ ಕರೆದು, ಆ ಒತ್ತಡಕ್ಕೇ ಔಟ್ ಆಗುವಂತೆ ಮಾಡುವುದು ಆಸ್ಟ್ರೇಲಿಯಾ ಆಟಗಾರರ ಗುಣ. ಅವತ್ತೂ ಹಾಗೇ ಮಾಡಿದರು. ನನ್ನ ಜೊತೆಗಿದ್ದ ರೈನಾ, ಜಗಳಕ್ಕೇ ಹೋಗಿಬಿಟ್ಟ. ಅವನನ್ನು ಕರೆದು ಹೇಳಿದೆ. ಅವರ ಜೊತೆ ಜಗಳಕ್ಕೆ ಹೋದರೆ, ಆ ಟೆನ್ಶನ್‌ನಲ್ಲೇ ಔಟ್ ಆಗಿಬಿಡ್ತೇವೆ. ಅವರು ಏನು ಹೇಳಿದ್ರೂ ತಲೆಕೆಡಿಸಿಕೊಳ್ಳದೆ ಆಡು. ಅವರ ಮೇಲಿನ ಸಿಟ್ಟನ್ನು ಚೆಂಡಿನ ಮೇಲೆ ತೋರಿಸೋಣ… ಬಹುಶ ಹೆಚ್ಚಿನವರಿಗೆ ಗೊತ್ತಿಲ್ಲ. ನನ್ನ ತಂದೆ ಯೋಗ್‌ರಾಜ್ ಸಿಂಗ್ ಕೂಡ ಒಂದು ಕಾಲದಲ್ಲಿ ಭಾರತ ತಂಡಕ್ಕೆ ಆಡಿದವರು. ಕಪಿಲ್ ದೇವ್ ಅವರಿಗೆ ಸರಿಸಮ ಎಂಬಂತೆ ಬೌಲಿಂಗ್ ಮಾಡುತ್ತಿದ್ದವರು. ಅದೇನು ಕಾರಣವೋ ಏನೋ; ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಅದೇ ಬೇಸರದಲ್ಲಿ ಆಟಕ್ಕೆ ಗುಡ್ ಬೈ ಹೇಳುವ ಮುನ್ನ- “ನನ್ನ ಮಗನನ್ನು ಹೇಗೆ ತಯಾರು ಮಾಡ್ತೀನೋ ನೋಡ್ತಾ ಇರಿ…” ಅಂದಿದ್ದರಂತೆ. ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರನ್ ಹೊಡೆದು, ಆ ಖುಷಿಗೆ ಕುಸಿದು ಕೂತೆನಲ್ಲ: ಆಗ ನೆನಪಾಗಿದ್ದು ನನ್ನ ತಂದೆ! ಅವತ್ತು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ- ನಿನಗೆ ಖುಷಿಯಾಗುವಂತೆ ಆಡಿದ್ದೇನೆ ಅಪ್ಪಾ…
***
ಅನಂತರ ನಡೆದಿದ್ದೆಲ್ಲ ಇತಿಹಾಸ. ಸೆಮಿಫೈನಲ್‌ನಲ್ಲಿ ನಮಗೆ ಪಾಕಿಸ್ತಾನ ಎದುರಾಯಿತು. ವಿಶ್ವಕಪ್‌ನಂಥ ಮಹತ್ವದ ಪಂದ್ಯಗಳಲ್ಲಿ ಪಾಕ್ ವಿರುದ್ಧ ಭಾರತ ಸೋತೇ ಇಲ್ಲ. ಅದೇ ಫಲಿತಾಂಶ ಮತ್ತೆ ರಿಪೀಟ್ ಆಯಿತು. ಫೈನಲ್ ಪಂದ್ಯದ ಹಿಂದಿನ ದಿನ ಉಳಿದವರೆಲ್ಲಾ
ಸವಿಗನಸುಗಳಲ್ಲಿ ತೇಲುತ್ತಿದ್ದಾಗ, ನಾನು ಮತ್ತೆ ಕೆಮ್ಮಿನಿಂದ ತತ್ತರಿಸಿಹೋಗಿದ್ದೆ. ಅವತ್ತು ಕೊಹ್ಲಿ ಆಡುತ್ತಿದ್ದಾಗಲೇ, ಕೋಚ್ ಮತ್ತು ತೆಂಡೂಲ್ಕರ್ ಒಟ್ಟಿಗೆ ಹೇಳಿದರು: “”ಶ್ರೀಲಂಕಾ ತಂಡದಲ್ಲಿ ಮೂವರು ಸ್ಪಿನ್ನರ್‌ಗಳು ಇದ್ದಾರೆ. ಅವರನ್ನು ಕನೂ#$Âಸ್ ಮಾಡಿಯೇ ಅವರ ಮೇಲೆ ಒತ್ತಡ ಹೇರಬೇಕು. ಅಂದರೆ, ಒಬ್ಬ ಬಲಗೈ-ಇನ್ನೊಬ್ಬ ಎಡಗೈ ಆಟಗಾರ ಇರುವಂತೆ ಪ್ಲಾನ್ ಮಾಡಬೇಕು. ಅಕಸ್ಮಾತ್ ಈಗ ಗಂಭೀರ್ ಔಟ್ ಆದರೆ, ಯುವಿ ಆಡಲು ಹೋಗಲಿ. ಅಥವಾ ಕೊಹ್ಲಿ ಔಟ್ ಆದರೆ, ಧೋನಿ ಬ್ಯಾಟಿಂಗ್‌ಗೆ ಇಳಿಯಲಿ…” ಅವತ್ತು ಮೊದಲು ಕೊಹ್ಲಿ ಔಟ್ ಆದ. ಪ್ಲಾನ್ ಪ್ರಕಾರ, ಧೋನಿ ಆಟಕ್ಕಿಳಿದ. ಅಂಥದೊಂದು ವಿರಾಮಕ್ಕೇ ಕಾದಿದ್ದವನಂತೆ, ಡ್ರೆಸ್ಸಿಂಗ್ ರೂಮಿಗೆ ಓಡಿ ಹೋಗಿ, ವಾಶ್ ಬೇಸಿನ್ ಮುಂದೆ ನಿಲ್ಲುತ್ತಿದ್ದಂತೆಯೇ- ವಾಂತಿ, ಅದರ ಜೊತೆಗೇ ರಕ್ತ… ಇಂಥ ನೋವನ್ನು ಜೊತೆಗಿಟ್ಟುಕೊಂಡೇ ಆಡಿದೆನಲ್ಲ… ಅದನ್ನು ನೆನಪು ಮಾಡಿಕೊಂಡಾಗಲೆಲ್ಲ, ನನ್ನ ಬಗ್ಗೆ ನನಗೇ ಹೆಮ್ಮೆ ಅನಿಸುತ್ತದೆ. ನನ್ನ ಅನಾರೋಗ್ಯದ ವಿಷಯವನ್ನು ಮುಚ್ಚಿಟ್ಟು, ಟೂರ್ನಿ ಮುಗಿವವರೆಗೂ ನನ್ನನ್ನು ಜೋಪಾನ ಮಾಡಿದ ಫಿಸಿಯೋ ಮತ್ತು ಜೊತೆಗಾರರಿಗೆ ಬದುಕಿಡೀ ಋಣಿಯಾಗಿ ಇರಬೇಕು ಅನಿಸುತ್ತದೆ…. -ಎ.ಆರ್.ಮಣಿಕಾಂತ್