ಸಿನಿಮಾದಲ್ಲೊಂದು ಕಥೆ ಇರಬೇಕು, ಆ ಕಥೆಗೊಂದು ಉದ್ದೇಶವಿರಬೇಕು ಮತ್ತು ಆ ಉದ್ದೇಶ ಇವತ್ತಿನ ಸಮಾಜಕ್ಕೆ ಹತ್ತಿರವಿರಬೇಕು… ಹೀಗೆ ಬಯಸುವ ಸಿನಿಮಾ ಪ್ರೇಮಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಕೇವಲ ಹೊಡಿ ಬಡಿ, ಹಾಡು, ಡ್ಯಾನ್ಸ್ ಅಷ್ಟೇ ಇದ್ದರೆ ಸಾಲದು, ಅದರಾಚೆ ಚಿಂತಿಸುವ ವಿಷಯವಿರಬೇಕು ಎಂದು ಬಯಸುವವರಿಗೆ “ಯುವರತ್ನ ’ ಒಂದು ಒಳ್ಳೆಯ ಆಯ್ಕೆಯಾಗಬಹುದು. ಹಾಗಂತ “ಯುವರತ್ನ’ ದಲ್ಲಿ ಇಡೀ ಸಂದೇಶವೇ ತುಂಬಿಕೊಂಡಿದೆಯೇ ಎಂದರೆ ಖಂಡಿತಾ ಇಲ್ಲ. ಇದು ಕೂಡಾ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಆದರೆ, ಅದನ್ನು ಕಟ್ಟಿಕೊಡುವ ಹಿನ್ನೆಲೆಯಲ್ಲಿ ಸಾಗುವ ಕಥೆ ತುಂಬಾ ಗಂಭೀವಾಗಿದೆ. ಎಜುಕೇಶನ್ ಮಾಫಿಯಾ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳ ಕುರಿತಾದ ಅಂಶವನ್ನಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಒಬ್ಬ ಸ್ಟಾರ್ ನಟನನ್ನಿಟ್ಟುಕೊಂಡು ತುಂಬಾ ಗಂಭೀರವಾದ ವಿಚಾರ ಹೇಳುವಾಗ ನಿರ್ದೇಶಕ ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಕಥೆಯ ಜೊತೆಗೆ ಸ್ಟಾರ್ ನಟನ ಅಭಿಮಾನಿಗಳನ್ನು ಖುಷಿ ಪಡಿಸುವ ಜವಾಬ್ದಾರಿ ಕೂಡಾ ಆತನಿಗಿರುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್ ಒಂದು ಗಂಭೀರ ವಿಚಾರವನ್ನು ಮನಮುಟ್ಟುವಂತೆ ಜೊತೆ ಮಾಸ್ ಪ್ರೇಕ್ಷಕರು “ಜೈಕಾರ’ ಹಾಕುವಂತೆಯೂ ಕಟ್ಟಿ ಕೊಟ್ಟಿರೋದು ಅವರ ಹೆಚ್ಚು ಗಾರಿಕೆ. ಚಿತ್ರದಲ್ಲಿ ಸಾಕಷ್ಟು ಸನ್ನಿವೇಶಗಳು, ಘಟನೆಗಳು ಬಂದು ಹೋಗು ತ್ತವೆ. ಆದರೆ, ಅವೆಲ್ಲವನ್ನು ನೀಟಾಗಿ ಜೋಡಿಸುವ ಮೂಲಕ ಚಿತ್ರವನ್ನು ಗೊಂದಲ ಮುಕ್ತವನ್ನಾಗಿಸಿದ್ದಾರೆ. ಮುಖ್ಯವಾಗಿ ಈ ಚಿತ್ರ ಪ್ರೇಕ್ಷ ಕರ ಕುತೂಹಲವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸಿಕೊಂಡು ಹೋಗುತ್ತದೆ. ಪುನೀತ್ ಎಂಟ್ರಿಯಿಂದ ಹಿಡಿದು ಅವರ ಮ್ಯಾನರೀಸಂ, ಡೈಲಾಗ್ .. ಹೀಗೆ ಪ್ರತಿ ವಿಷಯವೂ ಪ್ರೇಕ್ಷಕರಲ್ಲಿ ಒಂದು ಕುತೂಹಲವನ್ನು ಬಿಟ್ಟೇ ಮುಂದೆ ಸಾಗುತ್ತದೆ.
ಇದನ್ನೂ ಓದಿ:ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಪತ್ನಿಗೆ ಬ್ಲಡ್ ಕ್ಯಾನ್ಸರ್
ಸಿನಿಮಾದ ಹೈಲೈಟ್‌ಗಳಲ್ಲಿ ಸಿನಿಮಾ ನಿರೂಪಣಾ ಶೈಲಿ ಕೂಡಾ ಒಂದು. ಚಿತ್ರದ ಕಥೆ ಗಂಭೀರವಾಗಿದ್ದರೂ ಸಿನಿಮಾ ಮಾತ್ರ ಪದೇ ಪದೇ ಮೂಡ್ ಬದಲಿಸುತ್ತಾ ಸಾಗುವ ಮೂಲಕ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ಆ್ಯಕ್ಷನ್, ಕಾಮಿಡಿ, ಸಾಂಗ್, ಫೈಟ್, ಫನ್ನಿ ಡೈಲಾಗ್ … ಹೀಗೆ ಅಲ್ಲಲ್ಲಿ ಧುತ್ತನೆ ಬರುವ ಮೂಲಕ ಪ್ರೇಕ್ಷಕನ ಪಾಲಿಗೆ ಇದು “ಸ್ಪೆಷಲ್ ಮೀಲ್ಸ್’ ಇದ್ದಂತೆ. ಪುನೀತ್ ಅಭಿಮಾನಿಗಳಿಗಾಗಿಯೇ ಇಲ್ಲಿ ಒಂದಷ್ಟು ಡೈಲಾಗ್‌ಗಳಿವೆ. “ಓಂ ಸಿನಿಮಾನಾ ನಾವೇ ಪ್ರೊಡ್ನೂಸ್ ಮಾಡಿರೋದು, ಧಮ್ ಇಲ್ಲಿದೆ ಇಲ್ಲಿ ಬೇಡ, ನನಗೆ ಮತ್ತು ನಮ್ಮಣ್ಣಂಗೆ ವಯಸ್ಸೇ ಆಗಲ್ಲ, ಹೆಗಲ ಮೇಲಿರುವ ಸ್ಟಾರ್ ಡ್ನೂಟಿಯಲ್ಲಿರೋ, ಅಭಿಮಾನಿಗಳು ಕೊಟ್ಟಿರೋ ಸ್ಟಾರ್ ನಾವು ಇರೋವರೆಗೂ, ದುಡ್ಡು ಕೊಟ್ಟು ವೋಟು ಹಾಕಿಸಿಕೊಂಡಿರೋ ನಿಮಗೆ ಇಷ್ಟ್ ಇರ ಬೇಕಾದರೆ, ಜನರೇ ದುಡ್ಡುಕೊಟ್ಟು ವೋಟ್ ಹಾಕಿ ಗೆಲ್ಲಿಸಿರೋ ನಮಗೆ ಎಷ್ಟಿರಬೇಡ, ನನಗೆ ಹೌಸ್ ಫುಲ್ ನೋಡಿಯೇ ಅಭ್ಯಾಸ, ಕೋಟ್ಯಾಂತರ ಅಭಿಮಾನಿಗಳು ಆರಾಧಿಸಿರುವ ಬ್ಲಿಡ್ ಅದು, ತುಂಬಾ ಪ್ರೇಶಿಯಸ್… ಜೋಪಾನ …’ ಹೀಗೆ ಚಿತ್ರದಲ್ಲಿರುವ ಒಂದಷ್ಟು ಡೈಲಾಗ್‌ಗಳು ಮಜ ಕೊಡುತ್ತಾ ಸಾಗುತ್ತವೆ.
ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರುವವರು ಪುನೀತ್ ರಾಜ್‌ಕುಮಾರ್. ಪ್ರತಿ ದೃಶ್ಯದಲ್ಲೂ ಅವರ ಖದರ್, ಪವರ್, ಎನ ರ್ಜಿ ಇಷ್ಟವಾಗುತ್ತದೆ. ಹಾಡು, ಫೈಟ್ ಜೊತೆಗೆ ಗಂಭೀರ ದೃಶ್ಯದಲ್ಲಿ ಪುನೀತ್ ಮಿಂಚಿದ್ದಾರೆ.
ನಾಯಕಿ ಸಯ್ಯೇಶಾ ತೆರೆ ಮೇಲೆ ಮುದ್ದಾದ ಗೊಂಬೆ. ಉಳಿದಂತೆ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಪ್ರಕಾಶ್ ರೈ, ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲ, ರಾಜೇಶ್ ನಟರಂಗ, ಧನಂಜಯ್, ಸಾಯಿಕುಮಾರ್, ದಿಗಂತ್, ತಾರಕ್, ಸೋನು ಗೌಡ, ರವಿಶಂಕರ್, ಅಚ್ಯುತ್ … ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳು ಸಿನಿಮಾದ ಜೋಶ್ ಹೆಚ್ಚಿಸಿವೆ.
ರವಿಪ್ರಕಾಶ್ ರೈ