ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಅವರ ಅಭಿಮಾನಿಗಳಿಗಿದೆ. ಅದಕ್ಕಿಂತ ಹೆಚ್ಚಾಗಿ ಆ ಚಿತ್ರದ ಬಾಕಿ ಇರುವ ಎರಡು ಹಾಡುಗಳನ್ನು ಎಲ್ಲಿ ಚಿತ್ರೀಕರಿಸುತ್ತಾರೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಆರಂಭದಲ್ಲಿ ಈ ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸಲು ಚಿತ್ರತಂಡ ತಯಾರಿ ಮಾಡಿತ್ತು. ಆದರೆ ಈಗ ಕೊರೊನಾದಿಂದಾಗಿ ವಿದೇಶ ಪ್ರವಾಸವನ್ನು ಚಿತ್ರತಂಡ ಕೈ ಬಿಟ್ಟಿದೆ.
ಹಾಗಾಗಿ ಚಿತ್ರದ ಎರಡು ಹಾಡುಗಳನ್ನು ದೇಶದಲ್ಲೇ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಈ ಹಾಡನ್ನು ಚಿತ್ರೀಕರಿಸಲಿದೆ. ಒಂದು ಹಾಡನ್ನು ಗೋವಾದಲ್ಲಿ ಚಿತ್ರೀಕರಿಸುವ ಯೋಚನೆ ಚಿತ್ರತಂಡಕ್ಕಿದೆ. ಮಿಕ್ಕ ಒಂದು ಹಾಡನ್ನು ಎಲ್ಲಿ ಚಿತ್ರೀಕರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಡುಗಳ ಚಿತ್ರೀಕರಣವಾದ ಬೆನ್ನಿಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಕೂಡಾ ಚಿತ್ರತಂಡಕ್ಕಿದೆ.
ಹಾಗಾದರೆ ಯಾವಾಗ ಚಿತ್ರ ಬಿಡುಗಡೆ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರ ಆಗಸ್ಟ್ ಅಥವಾ ಸೆಪ್ಟೆಂಬರ್. ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕ ನಂತರ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದೆ ಚಿತ್ರತಂಡ. ಇನ್ನು ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸ ಆರಂಭವಾಗಿದ್ದು, ಮೊದಲ ಭಾಗದ ಡಬ್ಬಿಂಗ್ ಪೂರ್ಣಗೊಂಡಿದೆ. ಪುನೀತ್ ರಾಜ್ ಕುಮಾರ್ ಡಬ್ಬಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ರಾಜ್‌ಕುಮಾರ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ಸಂತೋಷ್ ಆನಂದ ರಾಮ್ ಈ ಸಿನಿಮಾದ ನಿರ್ದೇಶಕರು. ಹೊಂಬಾಳೆ ಪೊಡಕ್ಷನ್ಸ್‌ನಡಿ ಈ ಚಿತ್ರ ನಿರ್ಮಾಣವಾಗಿದೆ.
ಈಗಾಗಲೇ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. ಮಾಸ್ ಪ್ರಿಯರು ಟೀಸರ್‌ಗೆ ಫಿದಾ ಆಗಿದ್ದು, ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಯೇಷಾ ನಾಯಕಿಯಾಗಿ ನಟಿಸಿದ್ದಾರೆ. ಟಗರು ಚಿತ್ರದಲ್ಲಿ ಡಾಲಿಯಾಗಿ ಮಿಂಚಿದ ಧನಂಜಯ್ ಅವರಿಗೂ ಇಲ್ಲಿ ಪ್ರಮುಖ ಪಾತ್ರವಿದೆ. ಯುವರತ್ನ ಬಳಿಕ ಪುನೀತ್ ಜೇಮ್ಸ್ ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ವಾಗಿದ್ದು, ಕೆಲವು ದಿನಗಳ ಚಿತ್ರೀಕರಣ ಕೂಡಾ ನಡೆದಿದೆ.