Advertisement

ಮತ್ತೆ ದೇಶವನ್ನು ಪ್ರತಿನಿಧಿಸಿದ ಅನುಭವ: ಯುವರಾಜ್‌ ಸಿಂಗ್‌

11:14 PM Mar 14, 2021 | Team Udayavani |

ರಾಯ್‌ಪುರ: ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ರೋಡ್‌ ಸೇಫ್ಟಿ ಲೆಜೆಂಡ್ಸ್‌ ಕ್ರಿಕೆಟ್‌ ಸೀರಿಸ್‌ನಲ್ಲಿ ಮಿಂಚಿನ ಆಟ ಪ್ರದರ್ಶಿಸುತ್ತಿದ್ದಾರೆ. ಶನಿವಾರ ರಾತ್ರಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು ಅಭಿಮಾನಿಗಳಲ್ಲಿ ಹೊಸ ರೋಮಾಂಚನ ಮೂಡಿಸಿದ್ದಾರೆ. ಇದರಿಂದ ತನಗೆ ಮತ್ತೆ ದೇಶವನ್ನು ಪ್ರತಿನಿಧಿಸಿದ ಅನುಭವವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಯುವರಾಜ್‌.

Advertisement

“ಸ್ಟೇಡಿಯಂನಲ್ಲಿದ್ದ ವೀಕ್ಷಕರೆಲ್ಲ ದೀಪ ಬೆಳಗಿಸಿ ಕ್ರಿಕೆಟಿಗರನ್ನು ಹುರಿದುಂಬಿಸಿದ ಪರಿ ಅಮೋಘವಾಗಿತ್ತು. ಜನರೆಲ್ಲ ಮತ್ತೆ ಕ್ರೀಡಾಂಗಣಕ್ಕೆ ಆಗಮಿಸಿ ಸಂಭ್ರಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲರೂ ರೋಮಾಂಚಕಾರಿ ಆಟವನ್ನು ಸವಿದರು. ನನಗಂತೂ ಮತ್ತೆ ದೇಶವನ್ನು ಪ್ರತಿನಿಧಿಸಿದ ಅನುಭವವಾಯಿತು’ ಎಂದು ಯುವರಾಜ್‌ ಸಿಂಗ್‌ ಹೇಳಿದರು.

ಈ ಮುಖಾಮುಖೀಯಲ್ಲಿ ಯುವರಾಜ್‌ 22 ಎಸೆತಗಳಿಂದ ಅಜೇಯ 52 ರನ್‌ ಸಿಡಿಸಿದರು. 2 ಫೋರ್‌ ಹಾಗೂ 6 ಭರ್ಜರಿ ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು. ಡಿ ಬ್ರುಯಿನ್‌ ಅವರ ಓವರಿನಲ್ಲಿ ಸತತ 4 ಸಿಕ್ಸರ್‌ ಎತ್ತಿದಾಗ ಇಂಗ್ಲೆಂಡ್‌ ಎದುರಿನ 2007ರ ಟಿ20 ವಿಶ್ವಕಪ್‌ ಪಂದ್ಯ ಕಣ್ಮುಂದೆ ಸುಳಿದು ಹೋಯಿತು.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 56 ರನ್ನುಗಳಿಂದ ಸೋಲಿಸಿದ ಭಾರತ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next