ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಾದ ಸುಧಾ ಸಂಗೀತ ವಿದ್ಯಾಲಯ (ರಿ.) ಮಂಗಳೂರು ಆಶ್ರಯದಲ್ಲಿ “ಯುವ ಸಂಗೀತ ಸುಧಾ – 2017′ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮಂಗಳೂರಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.
ಕುನ್ನುಕ್ಕುಡಿ ಬಾಲಮುರಲಿಕೃಷ್ಣ ಹಾಡುಗಾರಿಕೆಯಲ್ಲಿ, ಕೆ.ಜೆ. ದಿಲೀಪ್ ವಯಲಿನ್‌ನಲ್ಲಿ, ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಿದರು. ಕಾನಡ ರಾಗದ ನೆರನಮ್ಮಿತಿ ವರ್ಣದೊಂದಿಗೆ ಆರಂಭಗೊಂಡ ಕಛೇರಿ ಮುಂದೆ ಗಣಪತಿ ಎನ್ನ ಪಾಲಿಸೋ ನಾಟ ರಾಗದಲ್ಲಿ ಸ್ವರಪ್ರಸ್ತಾರದೊಂದಿಗೆ ಮೂಡಿ ಬಂತು. ಮುಂದೆ ಎವರೀಕೈ ಅವತಾರ – ದೇವ ಮನೋಹರಿ ರಾಗದಲ್ಲಿ ಮಿಶ್ರಛಾಪು ತಾಳದಲ್ಲಿ ಮೂಡಿ ಬಂತು. ಧರ್ಮವತಿ ರಾಗಾಲಾಪನೆಯನ್ನು ಆಯ್ದುಕೊಂಡ ಕಲಾವಿದರು ಭಜನಸೇಯರಾದಾ ರೂಪಕ ತಾಳದ ಕೃತಿಯನ್ನು ಹಾಡಿ ಸ್ವರಪ್ರಸ್ತಾರದೊಂದಿಗೆ ಮುಕ್ತಾಯಗೊಳಿಸಿದರು.
ಮುಂದೆ ತೋಡಿ ರಾಗ ಆಲಾಪನೆ ಮಾಡಿ ಶ್ರೀಕೃಷ್ಣಂ ಭಜಮಾನಸ ಕೃತಿಗೆ ನ್ಯಾಯ ಒದಗಿಸಿದರು. ಸ್ವರಪ್ರಸ್ತಾರಗಳ ಜೋಡಣೆ, ನೆರವಲ್‌ನ ವಿನ್ಯಾಸ ಉತ್ತಮವಾಗಿತ್ತು. ಕೆ.ಜೆ. ದಿಲೀಪ್ ವಯಲಿನ್ ನುಡಿಸಾಣಿಕೆ ರಸಿಕರ ಪ್ರಶಂಸೆಗೆ ಪಾತ್ರವಾಯಿತು. ಸುನಾದಕೃಷ್ಣ, ಅಮೈ ತನಿ ಆವರ್ತದಲ್ಲಿ ಶ್ರೋತೃಗಳ ಮನಗೆದ್ದರು.
ಸುಮಾರು ಮೂರು ತಾಸು ಹಾಡಿದ ನಂತರವೇ ಎತ್ತಿಕೊಂಡದ್ದು ಹಂಸಾನಂದಿಯ ರಾಗಾಲಾಪನೆ ಶ್ರೀ ರಾಜಗೋಪಾಲ ಬಾಲಂ ಭಜೇ ಶೃತ ಜನ ಪಾಲಂ ಸಾಹಿತ್ಯ ಜೋಡಣೆಯ ಪಲ್ಲವಿಯನ್ನು ನೀಡಿ ಕಾಂಬೋಜಿ, ನಾಗಾನಂದಿನಿ, ವರಾಳಿ, ಅಹಿರಿ, ಮಾಂಡ್ ಇವಿಷ್ಟು ರಾಗಗಳಲ್ಲಿ ಜುಂಜೂಟ ರಾಗದ ತಿಲ್ಲಾನವನ್ನೂ ಹಾಡಿ ಮುಕ್ತಾಯ ನೀಡಿದರು. ಕರಾರುವಕ್ಕಾದ ಕಣಕ್ಕುಗಳನ್ನು ನೀಡಿದ ಕುನ್ನುಕ್ಕುಡಿ ಬಾಲಮುರಲಿಕೃಷ್ಣ ಮಂಗಳೂರಿನ ರಸಿಕರ ಮನಗೆದ್ದರು.
ಪದ್ಮನಾಭ