ವರನಟ ರಾಜಕುಮಾರ್ ಅಭಿನಯದ “ರಣಧೀರ ಕಂಠೀರವ’ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳ ಪೈಕಿ ಒಂದಾಗಿರುವ “ರಣಧೀರ ಕಂಠೀರವ’ ಚಿತ್ರದ ಹತ್ತಾರು ವಿಶೇಷತೆಗಳ ಬಗ್ಗೆ ಇಂದಿಗೂ ಚಿತ್ರರಂಗ ಮಾತನಾಡಿಕೊಳ್ಳುತ್ತದೆ. ಈಗ ರಾಜಕುಮಾರ್ ಮೊಮ್ಮಗ, ಅದೇ ಥರದ ಶೀರ್ಷಿಕೆಯ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಹೌದು, ಹಿರಿಯ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಪುತ್ರ ಯುವ ರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರಕ್ಕೆ “ಯುವ ರಣಧೀರ ಕಂಠೀರವ’ ಎಂದು ಹೆಸರಿಡಲಾಗಿದೆ.
ಭಾನುವಾರ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ನಡೆದ ಚಿತ್ರದ ಟೈಟಲ್ ಮತ್ತು ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಟ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ರಾಜಕುಮಾರ್ ಕುಟುಂಬ ವರ್ಗ, ಕನ್ನಡ ಚಿತ್ರರಂಗದ ಅನೇಕ ನಿರ್ದೇಶಕರು, ನಿರ್ಮಾಪಕರು ಮತ್ತು ಅಭಿಮಾನಿಗಳು ಹಾಜರಿದ್ದರು.
ಕನ್ನಡ ರಾಜ್ಯೋತ್ಸವದ ವೇಳೆ ಚಿತ್ರದ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿರುವ ಚಿತ್ರತಂಡ, ಜೊತೆಗೆ ಸುಮಾರು 5 ನಿಮಿಷದ ಟೀಸರ್ ಅನ್ನು ಕೂಡ ಬಿಡುಗಡೆ ಮಾಡಿದೆ. ಇನ್ನು ಟೀಸರ್‌ನಲ್ಲಿ ಭರ್ಜರಿ ಡೈಲಾಗ್ ಮತ್ತು ಜಬರ್ದಸ್ತ್ ಫೈಟ್ ಹೈಲೈಟ್ ಆಗಿದ್ದು, ಮೇಲ್ನೋಟಕ್ಕೆ ಇದೊಂದು ಐತಿಹಾಸಿಕ ಕಥಾ ಹಂದರ ಹೊಂದಿರುವ ಚಿತ್ರ ಎಂದು ಬಿಂಬಿಸಲಾಗಿದೆ. ನಟ ಕಂ ನಿರ್ದೇಶಕ ಉಪೇಂದ್ರ, ಪ್ರಶಾಂತ್ ನೀಲ್, ಹಿರಿಯ ನಿರ್ದೇಶಕ ಭಗವಾನ್, ತೆಲುಗು ನಿರ್ದೇಶಕರಾದ ಸುಕುಮಾರ್, ಮೆಹರ್ ರಮೇಶ್, ವಿ.ವಿ ವಿನಾಯಕ್ ಮೊದಲಾದವರು “ಯುವ ರಣಧೀರ ಕಂಠೀರವ’ ಚಿತ್ರದ ಟೈಟಲ್ ಮತ್ತು ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
“ಯುವ ರಣಧೀರ ಕಂಠೀರವ’ ಚಿತ್ರಕ್ಕೆ ಪುನೀತ್ ರುದ್ರನಾಗ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರ್ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಸಂಕೇಶ್ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ ಸಂಯೋಜನೆಯಿದೆ. ಸದ್ಯ ಘೋಷಣೆಯಾಗಿರುವ “ಯುವ ರಣಧೀರ ಕಂಠೀರವ’ ಚಿತ್ರದ ಟೈಟಲ್ ಮತ್ತು ಚಿತ್ರದ ಟೀಸರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿ ಪ್ರಿಯರು ಬಹುಪರಾಕ್ ಹಾಕುತ್ತಿದ್ದಾರೆ.